ಚಿಕ್ಕಮಗಳೂರಿನಲ್ಲಿ ಹಾಡಹಗಲೇ ದರೋಡೆ ಯತ್ನ: ಸಿನಿಮೀಯ ಶೈಲಿಯಲ್ಲಿ ಆರೋಪಿಗಳ ಬಂಧನ

Update: 2021-02-27 15:47 GMT

ಚಿಕ್ಕಮಗಳೂರು, ಫೆ.27: ನಗರದ ಬೈಪಾಸ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ಇಬ್ಬರು ಮುಸುಕುಧಾರಿಗಳು ಮನೆಯಲ್ಲಿದ್ದ ಮಹಿಳೆಯನ್ನು ಬೆದರಿಸಿ ಕೈಕಾಲು, ಬಾಯಿಗೆ ಬಟ್ಟೆ ಕಟ್ಟಿ ಚಿನ್ನಾಭರಣ, ನಗದು ದೋಚಿ ಬೈಕ್‍ನಲ್ಲಿ ಪರಾರಿಯಾಗಲು ಯತ್ನಿಸಿದಾಗ ಅಗ್ನಿಶಾಮಕ ವಾಹನದ ಚಾಲಕನ ಸಮಯಪ್ರಜ್ಞೆ ಹಾಗೂ ಸಾರ್ವಜನಿಕರ ಸಹಕಾರದಿಂದ ದರೋಡೆಕೋರರನ್ನು ವಶಕ್ಕೆ ಪಡೆಯುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಎಐಟಿ ವೃತ್ತದ ಭೈಪಾಸ್ ರಸ್ತೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಎಸ್.ಚಂದ್ರೇಗೌಡ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ದರೋಡೆ ಕೃತ್ಯ ಎಸಗಿದ ದಂಟರಮಕ್ಕಿ ನಿವಾಸಿಗಳಾದ ಸಚಿನ್ ಹಾಗೂ ಮೋಹನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ, ಆರೋಪಿಗಳು ದರೋಡೆ ಮಾಡಿದ್ದ ಚಿನ್ನಾಭರಣ, ನಗದನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ: ನಗರದ ಎಐಟಿ ವೃತ್ತದ ಸಮೀಪದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಎಸ್.ಚಂದ್ರೇಗೌಡ ಅವರ ನಿವಾಸದಲ್ಲಿ ಶನಿವಾರ ಬೆಳಗ್ಗೆ 10:45ರಿಂದ 11ರ ಸಮಯದಲ್ಲಿ ಚಂದ್ರೇಗೌಡ ಹಾಗೂ ಅವರ ಮಗ ಕೆಲಸದ ನಿಮಿತ್ತ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಚಂದ್ರೇಗೌಡ ಅವರ ಪತ್ನಿ ಒಬ್ಬರೇ ಮನೆಯಲ್ಲಿದ್ದರು. ಇದೇ ಸಮಯಕ್ಕಾಗಿ ಕಾದಿದ್ದ ಇಬ್ಬರು ಯುವಕರು ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಮನೆಯ ಗೇಟ್ ಬಳಿ ಬಂದವರೇ ಸೀದಾ ಮನೆಯೊಳಗೆ ತೆರಳಿದ್ದಾರೆ. ಈ ವೇಳೆ ಚಂದ್ರೇಗೌಡ ಪತ್ನಿ ಸರೋಜಮ್ಮ ಅಡುಗೆ ಮನೆಯಲ್ಲಿ ತಿಂಡಿ ತಯಾರಿ ಕೆಲಸದಲ್ಲಿ ನಿರತರಾಗಿದ್ದರು. ಮನೆಗೆ ನುಗ್ಗಿದ ದರೋಡೆಕೋರರು ಸರೋಜಮ್ಮ ಅವರಿಗೆ ಚಾಕು ತೋರಿಸಿ ಹೆದರಿಸಿದ್ದಾರೆ. ಬಳಿಕ ಮೈಮೇಲಿದ್ದ ವೇಲ್‍ನಿಂದ ಕೈಕಾಲು, ಬಾಯಿ ಕಟ್ಟಿ ಹಾಕಿ ನಗದು ಮತ್ತು ಚಿನ್ನದ ಆಭರಣವಿರುವ ಮಾಹಿತಿ ಪಡೆದು ಕೀ ಪಡೆದುಕೊಂಡು ಹುಡುಕಲಾರಂಭಿಸಿದ್ದಾರೆ. ಕೈಗೆ ಸಿಕ್ಕ ಚಿನ್ನಾಭರಣ, ನಗದನ್ನು ಬ್ಯಾಗ್‍ಗೆ ಹಾಕಿಕೊಂಡು ಮತ್ತಷ್ಟು ಹುಡುಕಾಟ ಆರಂಭಿಸಿದ್ದಾರೆ.

ಇದೇ ವೇಳೆ ಮನೆಯಿಂದ ಹೊರಹೊಗಿದ್ದ ಮಗ ಶಿವಪ್ರಸಾದ್ ತಿಂಡಿ ತಿನ್ನಲು ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬಾರದ ಪರಿಣಾಮ ಹೆದರಿದ ಶಿವಪ್ರಸಾದ್ ಮನೆಯ ಕಿಟಕಿಯಿಂದ ಒಳಗೆ ಇಣುಕಿದಾದ ಮನೆಯೊಳಗೆ ತನ್ನ ತಾಯಿಯನ್ನು ಕಟ್ಟಿ ಹಾಕಿರುವುದನ್ನು ಕಂಡುಬಂದಿದೆ. ಮನೆಯೊಳಗೆ ಯಾರೋ ನುಗ್ಗಿದ್ದಾರೆ ಎಂದು ಅರಿತ ಮಗ ಶಿವಪ್ರಸಾದ್ ಕೂಡಲೇ ಸ್ಥಳೀಯರನ್ನು ಕರೆದು ಕೂಗಿಕೊಂಡಿದ್ದಾರೆ. 

ಮನೆಯ ಹೊರಗೆ ಜೋರಾಗಿ ಬಾಗಿಲು ಬಡಿಯುತ್ತಿರುವುದು ಮತ್ತು ಕೂಗಿಕೊಂಡಿದ್ದರಿಂದ ಎಚ್ಚೆತ್ತುಕೊಂಡ ದರೋಡೆಕೋರರು ಚಾಕು ಹಿಡಿದು ಮನೆಯಿಂದ ಹೊರಬಂದು ಬೈಕ್‍ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ದರೋಡೆಕೋರರನ್ನು ಕಂಡ ಸ್ಥಳೀಯರು ಹಿಡಿದುಕೊಳ್ಳಲು ಮುಂದಾದಾಗ ಆರೋಪಿಗಳು ಚಾಕು ತೋರಿಸಿದ್ದರಿಂದ ಹತ್ತಿರಕ್ಕೆ ಹೋಗಲು ಯಾರಿಗೂ ಸಾಧ್ಯವಾಗಿಲ್ಲ. ಆರೋಪಿಗಳು ಬೈಕ್ ಏರಿ ಪರಾರಿಯಾಗಬೇಕೆನ್ನುವಷ್ಟರಲ್ಲಿ ಎಐಟಿ ವೃತ್ತದ ಕಡೆಯಿಂದ ಬರುತ್ತಿದ್ದ ಅಗ್ನಿಶಾಮಕ ದಳದ ವಾಹನ ಚಾಲಕ ಸಾರ್ವಜನಿಕರ ಕೂಗಾಟ ಕಂಡು ಪರಿಸ್ಥಿತಿ ಅರ್ಥಮಾಡಿಕೊಂಡು ತಾನು ಚಲಾಯಿಸುತ್ತಿದ್ದ ವಾಹನದಿಂದ ದರೋಡೆಕೋರರಿದ್ದ ಬೈಕ್‍ಗೆ ಢಿಕ್ಕಿ ಹೊಡೆದಿದ್ದಾರೆ.

ವಾಹನ ಗುದ್ದಿದ ರಭಸಕ್ಕೆ ಬೈಕ್ ಜಖಂಗೊಂಡಿದ್ದರಿಂದ ಆರೋಪಿಗಳಿಬ್ಬರು ಚಾಕು ಹಿಡಿದುಕೊಂಡು ಓಡಲಾರಂಭಿಸಿದ್ದಾರೆ. ಈ ವೇಳೆ ಸ್ಥಳೀಯರು ಕಲ್ಲು ತೂರುತ್ತಾ ಬೆನ್ನಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಗರ ಠಾಣೆ ಪೊಲೀಸರು ಸ್ಥಳೀಯರ ಸಹಕಾರದಿಂದ ಸುತ್ತಮುತ್ತ ನಾಕಾಬಂದಿ ಹಾಕಿ ಹುಡುಕಾಡಿದ್ದಾರೆ. ಕೊನೆಗೆ ಜನರ ಸಹಕಾರದಿಂದಲೇ ಇಬ್ಬರು ದರೋಡೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ದರೋಡೆಗೆ ಯತ್ನಿಸಿದ ಇಬ್ಬರು ನಗರದ ದಂಟರಮಕ್ಕಿ ಬಡಾವಣೆಯವರೆಂದು ತಿಳಿದು ಬಂದಿದ್ದು, ಈ ಪೈಕಿ ಸಚಿನ್ ಎಂಬಾತ ಚಂದ್ರೇಗೌಡ ಅವರ ಸಂಬಂಧಿ ಎನ್ನಲಾಗುತ್ತಿದೆ. ಮತ್ತೊಬ್ಬ ಆರೋಪಿ ಮೋಹನ್ ಚಂದ್ರೇಗೌಡ ಮಗ ಶಿವಪ್ರಸಾದ್‍ನ ಸ್ನೇಹಿತ ಎನ್ನಲಾಗುತ್ತಿದೆ. ಹಣ ಅಥವಾ ಆಸ್ತಿ ವಿವಾದದಿಂದ ಆರೋಪಿಗಳು ಈ ಕೃತ್ಯ ನಡೆಸಿರಬಹುದೆಂಬ ಪೊಲೀಸರು ಶಂಕಿಸಿದ್ದಾರೆ.

ನನಗೆ ಯಾರು ವೈರಿಗಳಿಲ್ಲ, ಬೆಳಗ್ಗೆ ದಂಟರಮಕ್ಕಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮನೆಗೆ ನುಗ್ಗಿದವರು ಯಾರೆಂದು ತಿಳಿದಿಲ್ಲ. ಮುಖನೋಡಿದರೆ ಗುರುತು ಹಿಡಿಯಬಹುದಷ್ಟೇ. ನಾನು ಯಾರೊಂದಿಗೂ ದ್ವೇಷ ಕಟ್ಟಿಕೊಂಡಿಲ್ಲ. ನನಗೆ ಯಾರೂ ವೈರಿಗಳಿಲ್ಲ. ಘಟನೆಯಿಂದ ಅಘಾತವಾಗಿದೆ.
-ಸಿ.ಎಸ್.ಚಂದ್ರೇಗೌಡ, ಮನೆ ಮಾಲಕ, ಸಿಡಿಎ ಮಾಜಿ ಅಧ್ಯಕ್ಷ

ಬೆಳಗ್ಗೆ ಸುಮಾರು 10:45ರ ವೇಳೆಯಲ್ಲಿ ಹೆಲ್ಮೆಟ್‍ ಧರಿಸಿದ ಇಬ್ಬರು ಮನೆಯೊಳಗೆ ಬಂದು ಕೈಕಾಲು, ಬಾಯಿಗೆ ಬಟ್ಟೆ ಕಟ್ಟಿ ಚಾಕು ತೋರಿಸಿದ್ದಾರೆ. ಕೈ ಕಾಲು, ಬಾಯಿಗೆ ಬಟ್ಟೆ ಕಟ್ಟಿ ದುಡ್ಡು ಒಡವೆ ಎಲ್ಲಿದೆ ತೋರಿಸು ಎಂದು ಚಾಕು ತೋರಿಸಿದ್ದಾರೆ. ನಾನು ಹೆದರಿಕೊಂಡು ಎಲ್ಲವನ್ನೂ ಹೇಳಿದ್ದೆ. ಇದೇ ಸಮಯಕ್ಕೆ ಮಗ ಕಾಲಿಂಗ್‍ ಬೆಲ್ ಮಾಡಿದ. ಸ್ವಲ್ಪ ಹೊತ್ತು ಬಿಟ್ಟು ಕಿಟಕಿಯಿಂದ ನನ್ನನ್ನು ನೋಡಿದ ಕೂಡಲೇ ಕಳ್ಳರು ಎಂದು ಮಗ ಕಿರುಚಿಕೊಂಡ. ಕೂಡಲೇ ಕಳ್ಳರು ಬಾಗಿಲು ತಗೆದು ಓಡಿಹೋಗಿದ್ದಾರೆ.
-ಸರೋಜಮ್ಮ ಸಿ.ಎಸ್.ಚಂದ್ರೇಗೌಡ.

ಪ್ರತಿನಿತ್ಯ ಬೆಳಿಗ್ಗೆ 9:30ಕ್ಕೆ ಮನೆಯಿಂದ ಹೋದರೆ ಮಧ್ಯಾಹ್ನ 1:30ಕ್ಕೆ ಊಟಕ್ಕೆ ಬರುತ್ತಿದೆ. ಎರಡು ದಿನದ ಹಿಂದೆ ಲಾಡ್ಜ್ ಓಪನ್ ಮಾಡಿದ್ದೆ. ಶನಿವಾರ ಬೆಳಗ್ಗೆ ತಿಂಡಿ ತಿನ್ನದೆ ಪೂಜೆ ಮಾಡಲು ಹೋಗಿದ್ದೆ. ಪೂಜೆ ಮುಗಿಸಿ ಬಂದು ಎಷ್ಟೆ ಕಾಲಿಂಗ್ ಬೆಲ್ ಮಾಡಿದರೂ ಬಾಗಿಲು ತೆಗೆಯಲಿಲ್ಲ. 10 ನಿಮಿಷ ಆದರೂ ತೆಗೆಯಲಿಲ್ಲ, ಮನೆ ಸುತ್ತ ನೋಡಿ ಬಾತ್‍ರೂಂ ಕಿಟಕಿಯಿಂದ ನೋಡಿದಾಗ ಅಮ್ಮನನ್ನು ಕಟ್ಟಿ ಹಾಕಿರುವುದು ಕಂಡಿತು. ಓರ್ವ ಯುವಕ ಚಾಕು ಹಿಡಿದುಕೊಂಡು ನಿಂತಿರುವುದು ಕಂಡಿತು. ತಕ್ಷಣ ಕೂಗಿಕೊಂಡಿದ್ದರಿಂದ ಜನರು ಸೇರಿಕೊಂಡರು. ಕಳ್ಳರು ಚಾಕು ಹಿಡಿದುಕೊಂಡೆ ಮನೆಯಿಂದ ಹೊರಬಂದರು. ಚಾಕು ಇದ್ದುದ್ದರಿಂದ ಅವರನ್ನು ಹಿಡಿಯಲಾಗಲಿಲ್ಲ. ಜನರು ಕೈಗೆ ಸಿಕ್ಕ ಕಲ್ಲಿನಲ್ಲಿ ಹೊಡೆದರು. ಬೈಕ್ ಹತ್ತಿ ಪರಾರಿಯಾಗುವಷ್ಟರಲ್ಲಿ ಅಗ್ನಿಶಾಮಕ ದಳದ ವಾಹನ ಚಾಲಕ ಜನರು ಕೂಗಿಕೊಳ್ಳುತ್ತಿರುವುದನ್ನು ಕಂಡು ಕಳ್ಳರಿದ್ದ ಬೈಕ್‍ಗೆ ಗುದ್ದಿದ್ದರಿಂದ ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 
-ಶಿವಪ್ರಸಾದ್, ಸಿ.ಎಸ್.ಚಂದ್ರೇಗೌಡ ಪುತ್ರ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News