ಇಂಧನ ಬೆಲೆ ಏರಿಕೆ ಹೊರೆ ತಪ್ಪಿಸಲು ಎಥನಾಲ್ ಉತ್ಪಾದನೆ ಕಡ್ಡಾಯ ಮಾಡಿ: ಸಿಎಂಗೆ ಬಿಜೆಪಿ ರೈತ ಮೋರ್ಚಾ ಮನವಿ

Update: 2021-02-27 12:29 GMT

ಬೆಂಗಳೂರು, ಫೆ. 27: ‘ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುವ ಹೊರೆಯನ್ನು ತಪ್ಪಿಸಲು ಗರಿಷ್ಠ ಪ್ರಮಾಣದ ಎಥನಾಲ್ ಉತ್ಪಾದನೆಗೆ ಕಡ್ಡಾಯ ಮಾಡಬೇಕು' ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದೆ.

ಶನಿವಾರ ಇಲ್ಲಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿತು. ಈ ವೇಳೆ ಮಾತನಾಡಿದ ಈರಣ್ಣ ಕಡಾಡಿ, ‘ಬೇವು, ಹೊಂಗೆ, ಹಿಪ್ಪೆ ಮರಗಳನ್ನು ರಸ್ತೆ ಬದಿಗಳಲ್ಲಿಯೂ, ಕೆರೆಗಳ ಏರಿ, ಗುಂಡು ತೋಪು, ಕಾಲುವೆಗಳ ಪಕ್ಕದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆಸಿ, ಇವುಗಳ ಬೀಜಗಳಿಂದ ಡೀಸೆಲ್, ಆಯಿಲ್‍ಗಳಿಗೆ ಪರ್ಯಾಯ ಇಂಧನಗಳನ್ನು ಉಪಯೋಗಿಸಿ ಆತ್ಮನಿರ್ಭರ ನೀತಿಯನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಕೈಗೊಳ್ಳಬೇಕಾಗಿದೆ. ಇದರಿಂದ ಇಡೀ ದೇಶ ಹಸಿರುಮಯವಾಗಿ ಪರಿಸರ ಮಾಲಿನ್ಯ ತಪ್ಪಿಸಬಹುದಾಗಿದೆ ಎಂದರು.

ರೈತರ ಸಬಲೀಕರಣ: ‘ರೈತರ ಉತ್ಪನ್ನಗಳಿಗೆ ಬೆಲೆ ಕುಸಿತವಾದಾಗ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಿ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ರೈತರು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದುದರಿಂದ ಬೆಳೆ ರೈತರ ಕೈಗೆ ಬಂದಾಗ ಖರೀದಿ ಕೇಂದ್ರಗಳನ್ನು ತೆರೆದು, ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರ ಮುಖಾಂತರ ರೈತರಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಬೇಕು ಎಂದು ಕೋರಿದರು.

ನರೇಗಾ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ, ಜಾಬ್ ಕಾರ್ಡ್ ಗಳನ್ನು ನೀಡುವುದರ ಮುಖಾಂತರ ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕರಿಸಬೇಕು. ಈಗಾಗಲೇ ತೋಟಗಾರಿಕೆಯನ್ನು ಸೇರಿಸಲಾಗಿದ್ದು, ಆಹಾರ ಧಾನ್ಯಗಳು, ವಾಣಿಜ್ಯ ಬೆಳೆಗಳನ್ನು ಸೇರಿಸಬೇಕಾಗಿದೆ ಎಂದು ಮನವಿ ಮಾಡಿದರು.

ಸಂಘರ್ಷ ತಪ್ಪಿಸಿ: ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಪ್ರಾಣಿ-ಮಾನವ ಸಂಘರ್ಷದಿಂದ ರೈತರು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ವೈಜ್ಞಾನಿಕ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಂತ್ರಸ್ತರಿಗೆ ಮತ್ತು ನೊಂದವರಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ತಿಳಿಸಿದರು.

ನಿಯೋಗದಲ್ಲಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಉಪಾಧ್ಯಕ್ಷ ಲೋಕೇಶ್ ಗೌಡ, ಷಣ್ಮುಖ ಗುರಿಕಾರ, ನಂಜುಂಡೇಗೌಡ, ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕಾಯಿ, ರಾಜ್ಯ ಖಜಾಂಚಿ ಲಲ್ಲೇಶ್ ರೆಡ್ಡಿ ಸೇರಿದಂತೆ ರೈತ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News