ನಿವೃತ್ತ ಡಿಜಿಪಿಯ ಬ್ಯಾಂಕ್‍ ಖಾತೆಗೆ ಕನ್ನ: 2.13 ಲಕ್ಷ ರೂ. ಎಗರಿಸಿದ ದುಷ್ಕರ್ಮಿಗಳು

Update: 2021-02-27 12:45 GMT

ಬೆಂಗಳೂರು, ಫೆ.27: ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಅಜಯ್‍ ಕುಮಾರ್ ಸಿಂಗ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ದುಷ್ಕರ್ಮಿಗಳು, 2.13 ಲಕ್ಷ ರೂ.ಗಳನ್ನು ಎಗರಿಸಿದ ಆರೋಪ ಕೇಳಿಬಂದಿದೆ.

ರಿಚರ್ಡ್ ಟೌನ್‍ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್‍ ಇಂಡಿಯಾ(ಎಸ್‍ಬಿಐ) ಶಾಖೆಯಲ್ಲಿ ಖಾತೆ ಹೊಂದಿರುವ ಅಜಯ್‍ಕುಮಾರ್ ಅವರ ಮೊಬೈಲ್‍ಗೆ 50ಕ್ಕೂ ಹೆಚ್ಚು ಒಟಿಪಿ ಬಂದಿದ್ದು, ಅದನ್ನು ಪರಿಶೀಲಿಸಿದಾಗ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿದ್ದು ಬೆಳಕಿಗೆ ಬಂದಿದೆ. ಸುಮಾರು 60ಕ್ಕೂ ಹೆಚ್ಚು ಬಾರಿ ವಹಿವಾಟು ಮಾಡಿ, 2.13 ಲಕ್ಷ ರೂಪಾಯಿ ಹಣ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ಹಣ ಕಡಿತಗೊಂಡಿರುವ ಬಗ್ಗೆ ಬ್ಯಾಂಕ್‍ನಿಂದ ಎಚ್ಚರಿಕೆ ಸಂದೇಶ ಬಂದಿತ್ತು. ಈ ಬಗ್ಗೆ ಅನುಮಾನಗೊಂಡು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ದುಷ್ಕರ್ಮಿಗಳು ಹಣ ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ದೂರಿನ ಮೇರೆಗೆ ನಗರ ಪೂರ್ವ ವಿಭಾಗದ ಸೈಬರ್ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News