ಸೋಮವಾರಪೇಟೆ: ಆಟೋ ಮೇಲೆ ಕಾಡಾನೆ ದಾಳಿ; ಚಾಲಕನಿಗೆ ಗಾಯ

Update: 2021-02-27 13:18 GMT

ಸೋಮವಾರಪೇಟೆ, ಫೆ.27: ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸಮೀಪದ ಅಬ್ಬೂರುಕಟ್ಟೆಯಲ್ಲಿ ನಡೆದಿದೆ.

ಹಿತ್ಲುಮಕ್ಕಿ ಗ್ರಾಮದ ಕುಟ್ಟಪ್ಪ ಅವರು ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ತಮ್ಮ ಆಟೋದಲ್ಲಿ ಹೊಸಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ, ಅಬ್ಬೂರು ಕಟ್ಟೆಯ ಚರ್ಚ್ ಬಳಿಯಲ್ಲಿ ಕಾಡಾನೆ ಹಿಂಡು ಆಟೋ ಮೇಲೆ ದಾಳಿ ನಡೆದಿದೆ.

ಪರಿಣಾಮ ಆಟೋ ರಸ್ತೆಯಲ್ಲೇ ಮಗುಚಿ ಬಿದ್ದಿದ್ದು, ಚಾಲಕ ಕುಟ್ಟಪ್ಪ ಅವರಿಗೆ ಗಾಯಗಳಾಗಿದೆ. ತಕ್ಷಣ ಸ್ಥಳೀಯ ನಿವಾಸಿಗಳು ರಕ್ಷಣೆಗೆ ಧಾವಿಸಿ, ಕುಟ್ಟಪ್ಪ ಅವರನ್ನು ಚರ್ಚ್‍ನ ಕಾಂಪೌಂಡ್ ಒಳಗೆ ಕರೆತಂದಿದ್ದಾರೆ. ನಂತರವೂ ಕಾಡಾನೆಗಳು ಆಕ್ರೋಶ ಹೊರಹಾಕಿದ್ದು, ಕಾಂಪೌಂಡನ್ನು ಜಖಂಗೊಳಿಸಿವೆ.
ಗಾಯಾಳು ಕುಟ್ಟಪ್ಪ ಅವರನ್ನು ಸ್ಥಳೀಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಿದ್ದಾರೆ.

ಎಸಿಎಫ್ ನೆಹರು, ಆರ್‍ಎಫ್‍ಓ ಸುಮಂತ್, ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಮಾಜೀ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಗ್ರಾ.ಪಂ. ಮಾಜೀ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಸದಸ್ಯ ಅಜಿತ್, ಗಣಗೂರು ಗ್ರಾ.ಪಂ. ಸದಸ್ಯ ವಿರೂಪಾಕ್ಷ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News