ಬಹುಕೋಟಿ ವಂಚನೆ ಪ್ರಕರಣ: ಕಣ್ವ ಸಮೂಹ ಸಂಸ್ಥೆಗೆ ಸೇರಿದ 84.40 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

Update: 2021-02-27 13:35 GMT

ಬೆಂಗಳೂರು, ಫೆ.27: ಬಹುಕೋಟಿ ವಂಚನೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಕಣ್ವ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಂಡಯ್ಯ ಕುಟುಂಬಸ್ಥರು ಹಾಗೂ ಕಂಪೆನಿಯ ನಿರ್ದೇಶಕ ಹರೀಶ್ ಮಾಲಕತ್ವದ ಒಟ್ಟು 84.40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಈಡಿ) ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.

ಕಣ್ವ ಸಮೂಹ ಸಂಸ್ಥೆಯು ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಸಾವಿರಾರು ಠೇವಣಿದಾರರಿಗೆ ಮೋಸ ಮಾಡಿದ್ದು, ಈ ಪ್ರಕರಣ ಸಂಬಂಧ 2020ನೆ ಸಾಲಿನ ಡಿಸೆಂಬರ್ ನಲ್ಲಿ ಸಂಸ್ಥೆಯ ನಿರ್ದೇಶಕರಾದ ನವೀನ್, ಹರೀಶ್, ಸಿಇಒ ಪ್ರಖ್ಯಾತ್, ಉಪಾಧ್ಯಕ್ಷ ಸಿದ್ದೇಗೌಡ, ಜಿಎಂ ಸುರೇಂದ್ರ, ಅಲೆಕ್ಸ್, ಕೆ. ನಾಗರಾಜ್, ಮಲ್ಲೇಶ್ವರ ಸಹಾಯಕ ಶಾಖಾ ವ್ಯವಸ್ಥಾಪಕಿ ಎಸ್.ಎಸ್. ಮಂಜುಳಾ, ಸ್ವಾಮಿ, ಅಕೌಂಟೆಂಟ್ ಸುನಿಲ್ ಸೇರಿದಂತೆ 11 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಂಡಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಂಸ್ಥೆಗೆ ಸೇರಿದ 255.17 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿತ್ತು.

ರಾಜಾಜಿನಗರದಲ್ಲಿ ಕಣ್ವ ಸಮೂಹ ಸಂಸ್ಥೆಗಳ ಕೇಂದ್ರ ಕಚೇರಿಯಿದ್ದು, ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯನ್ನು ನಂಜುಂಡಯ್ಯ ಹೊಂದಿದ್ದಾರೆ. ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ.12ರಿಂದ 15ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಿದ ಕಂಪೆನಿ, ಬಳಿಕ ಅಸಲು ಹಾಗೂ ಬಡ್ಡಿ ಹಣ ನೀಡದೆ ವಂಚಿಸಿದ ಆರೋಪದಡಿ ಕಳೆದ ವರ್ಷ ನವೆಂಬರ್ ನಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, 13 ಸಾವಿರ ಗ್ರಾಹಕರಿಂದ 650 ಕೋಟಿ ರೂ. ವಸೂಲಿ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News