ಕೃಷಿ ಶಿಕ್ಷಣದಲ್ಲಿ ರೈತರ ಮಕ್ಕಳಿಗೆ ಮೀಸಲು ಶೇ.50ಕ್ಕೆ ಹೆಚ್ಚಿಸಲು ಪ್ರಸ್ತಾವ: ಸಚಿವ ಬಿ.ಸಿ.ಪಾಟೀಲ್

Update: 2021-02-27 14:21 GMT

ಧಾರವಾಡ, ಫೆ.27: ರಾಜ್ಯದ ಬಹುತೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ನಿಭಾಯಿಸಲು, ಈಗಾಗಲೇ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಲು ನೂತನ ಸ್ಕೋರ್ ಕಾರ್ಡನ್ನು ಅನುಮೋದಿಸಲಾಗಿದೆ. ಕೃಷಿ ವಿವಿಯ ಅಧಿಕಾರಿ ಹುದ್ದೆಗಳ ನೇಮಕಾತಿ ಮಾಡಲು ಅನುಮತಿ ನೀಡಲಾಗಿದೆ. ರೈತರ ಮಕ್ಕಳು ಕೃಷಿ ಶಿಕ್ಷಣಕ್ಕೆ ಬರಲು ಈವರೆಗೆ ಶೇ.40 ರಷ್ಟು ಮೀಸಲಾತಿ ಇದ್ದು, ಬರುವ ರಾಜ್ಯ ಬಜೆಟ್‍ನಲ್ಲಿ ಅದನ್ನು ಶೇ.50ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಶನಿವಾರ ನಗರದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ ಕೃಷಿ ವಿವಿಯ 33ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿಗಳನ್ನು ಪ್ರದಾನ ಮಾಡಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಓರ್ವ ಕೃಷಿಕ ಕುಟುಂಬದ ಮಗನಾದ ತಮಗೆ ಇಂದು ಕೃಷಿ ವಿಶ್ವವಿದ್ಯಾಲಯದ ಪದವಿಗಳನ್ನು ಪ್ರದಾನ ಮಾಡುವ ದೊಡ್ಡ ಗೌರವ, ಅವಕಾಶ ದೊರೆತಿರುವುದು ಜೀವಮಾನದ ಸೌಭಾಗ್ಯ ಎಂದು ಭಾವಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕೃಷಿ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ಅಧಿಕವಾಗಿ ಬರುತ್ತಿದ್ದಾರೆ. ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರ ಸಂಖ್ಯೆ ಇದೆ. ಆದರೆ ಮಹಿಳಾ ಉದ್ದಿಮೆದಾರರ ಪ್ರಮಾಣ ಶೇ.14 ಹಾಗೂ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.25 ರಷ್ಟು ಮಾತ್ರ ಇದೆ ಎಂದು ಅವರು ಹೇಳಿದರು.

ಕೇವಲ ಶೇ.2ರಷ್ಟು ಆಹಾರ ಸಂಸ್ಕರಣೆ ಇದೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡದ ಹೊರತು ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ, ರಾಜ್ಯದಲ್ಲಿಯೂ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ 4525 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ರೈತ ಬೆಳೆದ ಬೆಳೆಗಳನ್ನು ಅವರೇ ಸಂಸ್ಕರಣೆ ಮಾಡಿ, ಮಾರಾಟ ಮಾಡಿದರೆ ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯವಿದೆ ಎಂದು ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.

ಮೈಸೂರಿನ ಸಿಎಫ್‍ಟಿಆರ್‍ಐ ಸಂಸ್ಥೆ ಮೂಲಕ ಪ್ರತಿವಾರ ರೈತರಿಗೆ ಆಹಾರ ಸಂಸ್ಕರಣೆ, ಮೌಲ್ಯವರ್ಧನೆ ಚಟುವಟಿಕೆಗಳ ತರಬೇತಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಕಳೆದ ನವೆಂಬರ್ 14ರಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಮೂಲಕ ಕೃಷಿಕರ ಮನೋಸ್ಥಿತಿ ಅರಿತು, ಬದಲಾಯಿಸುವ, ಪ್ರೋತ್ಸಾಹಿಸುವ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬೆಳೆ ಸಮೀಕ್ಷೆ ತಂತ್ರಾಂಶ ಆ್ಯಪ್ ಮೂಲಕ ನಿಖರ ಕೃಷಿ ಸಮೀಕ್ಷೆ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯವು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮೂಲಕ ನೇರ ನಗದು ವರ್ಗಾವಣೆ ಮಾಡುವ ಕಾರ್ಯದಲ್ಲಿ ಶೇ.97 ರಷ್ಟು ಪ್ರಗತಿ ಸಾಧಿಸಿ, ರಾಷ್ಟ್ರದಲ್ಲಿ  ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಸ್ವಾಭಿಮಾನ ರೈತ ಗುರುತಿನ ಚೀಟಿಗಳನ್ನು ಈಗಾಗಲೇ ಪ್ರಾಯೋಗಿಕವಾಗಿ ಕೊಪ್ಪಳ ಜಿಲ್ಲೆಯ 1.5 ಲಕ್ಷ ರೈತರಿಗೆ ನೀಡಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳ ರೈತರಿಗೂ ಈ ಸೌಲಭ್ಯ ವಿಸ್ತರಿಸಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಅಶುತೋಷ್ ಶರ್ಮಾ ಘಟಿಕೋತ್ಸವ ಭಾಷಣ ಮಾಡಿ, ಧಾರವಾಡ ಕೃಷಿ ವಿಶ್ವವಿದ್ಯಾಲಯವು ತನ್ನ ಉನ್ನತ ಗುಣಮಟ್ಟದ ಶಿಕ್ಷಣ ಕ್ರಮಗಳಿಂದ ಈ ರಂಗದಲ್ಲಿ ತನ್ನದೇ ಆದ ಘನತೆ ಹೊಂದಿದೆ. ಇಂದು ಪದವಿಗಳನ್ನು ಪಡೆದ ಎಲ್ಲ ವಿದ್ಯಾರ್ಥಿಗಳ ಪಾಲಿಗೆ ಈ ದಿನವು ಮಹತ್ವದ ಮೈಲಿಗಲ್ಲಾಗಿದೆ. ಪ್ರಧಾನಮಂತ್ರಿಗಳ ಕನಸಿನ ಸಶಕ್ತ ಭಾರತ, ಆತ್ಮನಿರ್ಭರ ಭಾರತ ನಿರ್ಮಿಸಲು ನೀವೆಲ್ಲ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಜಿಡಿಪಿಯಲ್ಲಿ ಶೇ.14 ರಷ್ಟು ಪಾಲು ಹೊಂದಿರುವ ಕೃಷಿಕ್ಷೇತ್ರ ಶೇ.41.5 ರಷ್ಟು ಜನರಿಗೆ ಉದ್ಯೋಗ ಒದಗಿಸಿದೆ. ಆಹಾರ ಉತ್ಪಾದನೆಯಲ್ಲಿ ಕೊರತೆಯಿಂದ ಸ್ವಾವಲಂಬನೆ ಸಾಧಿಸುವವರೆಗೆ ನಾವು ಯಶಸ್ವಿಯಾಗಿ ಮುನ್ನಡೆದಿದ್ದೇವೆ. ಹಸಿರು, ನೀಲಿ, ಶ್ವೇತ ಹಾಗೂ ಹಳದಿ ಕ್ರಾಂತಿಗಳು ಈ ಸಾಧನೆಗೆ ಕಾರಣವಾಗಿವೆ. ಅಂತರ್ಜಲ ಮಟ್ಟ ಕಾಪಾಡುವುದು, ನೀರಾವರಿಯಲ್ಲಿ ಅಧಿಕ ನೀರು ಬಳಕೆ ಕಡಿಮೆ ಮಾಡುವುದು, ಅತ್ಯಧಿಕ ರಾಸಾಯನಿಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಕಡಿವಾಣ ಹಾಕಿ ಜಾಗತಿಕ ತಾಪಮಾನ ಬದಲಾವಣೆ ಹಾಗೂ ಹಸಿರುಮನೆ ಪರಿಣಾಮಗಳಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.

ರೈತನ ಆದಾಯ ದ್ವಿಗುಣಗೊಳಿಸಲು ಕೋಯ್ಲೋತ್ತರ ನಿರ್ವಹಣೆಯ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಒತ್ತು ನೀಡಬೇಕು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗಳ ಲಾಭ ಪಡೆಯಲು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.

ಕುಲಪತಿ ಡಾ.ಮಹದೇವ ಬ.ಚೆಟ್ಟಿ ಸ್ವಾಗತಿಸಿ, ವಿಶ್ವವಿದ್ಯಾಲಯದ ಸಂಕ್ಷಿಪ್ತ ವರದಿ ನೀಡಿದರು. ಕೃಷಿ ವಿ.ವಿ.ಕುಲಸಚಿವ ರಮೇಶ ದೇಸಾಯಿ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿದ್ಯಾ ವಿಷಯಕ ಪರಿಷತ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News