ಕಳಂಕಿತ ಸಿಎಂ ಆಗಿ ಅಧಿಕಾರ ನಡೆಸಲು ಮುಜುಗರ ಎನಿಸುವುದಿಲ್ಲವೇ?: ಬಿಎಸ್‌ವೈಗೆ ಕಾಂಗ್ರೆಸ್ ಪ್ರಶ್ನೆ

Update: 2021-02-27 14:59 GMT

ಬೆಂಗಳೂರು, ಫೆ.27: ಬಿ.ಎಸ್.ಯಡಿಯೂರಪ್ಪ ಅವರೇ, ನಿಮ್ಮ ಮೇಲೆ ಅಕ್ರಮ ಡಿನೋಟಿಫಿಕೇಷನ್‍ನಂತಹ ಗುರುತರವಾದ ಪ್ರಕರಣಗಳಿವೆ, ‘ನೀವೇ ಸಿಎಂ, ನಿಮ್ಮನ್ನ ಯಾರು ತನಿಖೆ ನಡೆಸುತ್ತಾರೆ’ ಎನ್ನುವಂತ ಪ್ರಶ್ನೆ ಸುಪ್ರೀಂಕೋರ್ಟ್ ಕೇಳಿದೆ. ತನಿಖೆ ಹೇಗೆ ಎದುರಿಸುತ್ತೀರಿ? ಕಳಂಕಿತ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಮುಜುಗರ ಎನಿಸುವುದಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿ.ಎಸ್.ಯಡಿಯೂರಪ್ಪ ಅವರೇ, ನಿಮ್ಮ 79ನೆ ಹುಟ್ಟು ಹಬ್ಬ ಇಂದು, ನಿಮಗೆ ಒಳ್ಳೆಯದಾಗಲಿ. ವೇತನವಿಲ್ಲದ ನೌಕರರು, ಮಾಸಾಶನವಿಲ್ಲದ ವೃದ್ಧರು, ವಿಧವೆಯರು, ಅಂಗವಿಕಲರು, ಪರಿಹಾರವಿಲ್ಲದ ನೆರೆ ಸಂತ್ರಸ್ತರು, ಅನುದಾನವಿಲ್ಲದ ಶಾಸಕರು, ಸ್ಥಗಿತಗೊಂಡ ಯೋಜನೆಗಳು. ಈ ಸ್ಥಿತಿಯನ್ನು ನೋಡಿಯೂ ಸಂಭ್ರಮಿಸುವ ಮನಸಾಗುತ್ತಿದೆಯೇ ನಿಮಗೆ? ಎಂದು ಕಾಂಗ್ರೆಸ್ ಕೇಳಿದೆ.

14ನೇ ಹಣಕಾಸು ಆಯೋಗದ ಅಡಿಯಲ್ಲಿ ಕೇಂದ್ರ ತೆರಿಗೆಯಲ್ಲಿ ಶೇ.4.7ರಷ್ಟು ಪಾಲು ರಾಜ್ಯಕ್ಕೆ ಸಿಗುತ್ತಿದ್ದು, 15ನೇ ಹಣಕಾಸು ಆಯೋಗ ಅದನ್ನು ಶೇ.3.6ಕ್ಕೆ ಇಳಿಸಿದೆ. ಕೇಂದ್ರದಿಂದ ಈ ಅನ್ಯಾಯ ಮತ್ತು ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತದೆ, ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿದ್ದರ ಬಗ್ಗೆ ಕೊಂಚವೂ ಪಶ್ಚಾತ್ತಾಪವಿಲ್ಲವೇ ಯಡಿಯೂರಪ್ಪನವರೇ? ರಾಜ್ಯಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಮ್ಮದೇ ಬಿಜೆಪಿ ಮುಖಂಡರು ನಡೆಸುತ್ತಿದ್ದಾರೆ, ಅಕ್ರಮ ಸ್ಫೋಟಕ ದಂಧೆ ಎಗ್ಗಿಲ್ಲದೆ ಸಾಗಿದೆ. ತಾವು ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಅಸಹಾಯಕತನ ತೋರುತ್ತಿದ್ದೀರಿ. ಇದು ನಿಮ್ಮ ವಯೋಸಹಜ ದಣಿವಾ ಅಥವಾ ಗಣಿ ಲಾಬಿಗೆ ಮಣಿದಿದ್ದಾ ಯಡಿಯೂರಪ್ಪನವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರಾಜ್ಯದಲ್ಲಿ ಸಂಭವಿಸಿದ ಪ್ರವಾಹ, ಆಗಿರುವ ನಷ್ಟ. 2019ರಲ್ಲಿ ಅಂದಾಜು 35,000 ಕೋಟಿ ರೂ., 2020ರಲ್ಲಿ ಅಂದಾಜು 30,000 ಕೋಟಿ ರೂ., ಕೇಂದ್ರ ಕೊಟ್ಟಿದ್ದು ಕೇವಲ 1869 ಕೋಟಿ ರೂ. ಇದಕ್ಕಿಂತ ಒಂದು ರೂಪಾಯಿಯೂ ಹೆಚ್ಚು ತರಲಾಗಲಿಲ್ಲ ನಿಮ್ಮ ಕೈಯ್ಯಲ್ಲಿ. ಕೇಂದ್ರಕ್ಕಿರುವ ದ್ವೇಷ ನಿಮ್ಮ ಮೇಲೋ, ರಾಜ್ಯದ ಮೇಲೋ ಯಡಿಯೂರಪ್ಪ ಅವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಹಿಂದೆ ಮುಖ್ಯಮಂತ್ರಿ ಆದಿರಿ. ಗಣಿ ಹಗರಣ, ಚೆಕ್ ಮೂಲಕ ಲಂಚ, ಡಿನೋಟಿಫಿಕೇಷನ್ ಹಗರಣ, ಅಕ್ರಮ ಆಸ್ತಿ, ಕುಟುಂಬ ಹಸ್ತಕ್ಷೇಪ. ಈ ಬಾರಿ ಮುಖ್ಯಮಂತ್ರಿ ಆದಿರಿ. ಆರ್‍ಟಿಜಿಎಸ್ ಮೂಲಕ ಲಂಚ, ಕೊರೋನ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಕುಟುಂಬ ಹಸ್ತಕ್ಷೇಪ. ಯಡಿಯೂರಪ್ಪ ಅವರೇ, ನೀವು ಪ್ರತಿ ಬಾರಿಯೂ ಕಳಂಕಿತ ಮುಖ್ಯಮಂತ್ರಿಯಾದಿರಿ ಎಂದು ಕಾಂಗ್ರೆಸ್ ಟೀಕಿಸಿದೆ.

ರಾಜ್ಯ ಬಿಜೆಪಿ ಪಕ್ಷದ್ದು ಬಾಯಲ್ಲಿ ಬಡಾಯಿ, ಆಂತರಿಕ ಲಡಾಯಿ, ಭ್ರಷ್ಟಾಚಾರದ ಕಮಾಯಿ. ಇವುಗಳಲ್ಲೆ ಮುಳುಗಿದ ಸರಕಾರ ವೃದ್ಧರು, ವಿಧವೆಯರು, ಅಂಗವಿಕಲರಿಗೆ ಆಸರೆಯಾದ ಮಾಸಾಶನ ನೀಡದೆ ಸಂಕಷ್ಟಕ್ಕೆ ದೂಡಿದೆ. ಅನಗತ್ಯ ಕಾರು ಖರೀದಿಗೆ ಹಣ ವ್ಯಯಿಸುವ ಸರಕಾರಕ್ಕೆ ಅಸಹಾಯಕರ ನೆರವಿಗೆ ಹಣವಿಲ್ಲವೇ ಅಥವಾ ಕಾಳಜಿ ಇಲ್ಲವೇ ಎಂದು ಕಂದಾಯ ಸಚಿವ ಆರ್.ಅಶೋಕ್‍ರನ್ನು ಕಾಂಗ್ರೆಸ್ ಟ್ವೀಟರ್ ನಲ್ಲಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News