ಪಶ್ಚಿಮ ಬಂಗಾಳದಲ್ಲಿ ಅನಿಯಂತ್ರಿತ ಹಿಂಸಾಚಾರ ಎಂಟು ಹಂತಗಳಲ್ಲಿ ಮತದಾನಕ್ಕೆ ಕಾರಣ: ಕೇಂದ್ರ

Update: 2021-02-27 17:01 GMT

ಹೊಸದಿಲ್ಲಿ,ಫೆ.27: ಪ.ಬಂಗಾಳ ವಿಧಾನಸಭಾ ಚುನಾವಣೆಗಾಗಿ ಒಂದು ತಿಂಗಳ ಕಾಲ ಎಂಟು ಹಂತಗಳಲ್ಲಿ ಮತದಾನವನ್ನು ನಡೆಸುವ ಚುನಾವಣಾ ಆಯೋಗದ ನಿರ್ಧಾರವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ತೀವ್ರ ಟೀಕೆಗೆ ಗುರಿಯಾಗಿರಬಹುದು,ಆದರೆ ರಾಜ್ಯದಲ್ಲಿಯ ಅನಿಯಂತ್ರಿತ ಹಿಂಸಾಚಾರದಿಂದಾಗಿ ಅವರೇ ಅದನ್ನು ಅನಿವಾರ್ಯವಾಗಿಸಿದ್ದಾರೆ ಎಂದು ಕೇಂದ್ರವು ಪ್ರತಿಪಾದಿಸಿದೆ.

 ರಾಜ್ಯದಲ್ಲಿ ಎಂಟು ಹಂತಗಳ ಮತದಾನದ ಹಿಂದಿನ ಚುನಾವಣಾ ಆಯೋಗದ ತಾರ್ಕಿಕತೆಯನ್ನು ಪ್ರಶ್ನಿಸಿದ್ದ ಮಮತಾ,ಬಿಜೆಪಿಗೆ ಲಾಭವನ್ನುಂಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಆಣತಿಯ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದರು. 234 ವಿಧಾನಸಭಾ ಸ್ಥಾನಗಳಿರುವ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನವನ್ನು ನಡೆಸಬಹುದಾದರೆ 294 ಸ್ಥಾನಗಳಿರುವ ಪ.ಬಂಗಾಳದಲ್ಲಿ ಎಂಟು ಹಂತಗಳ ಮತದಾನದ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದರು.

ಭದ್ರತೆಯ ಕಾರಣಗಳಿಂದ ರಾಜ್ಯದಲ್ಲಿ ಎಂಟು ಹಂತಗಳಲ್ಲಿ ಮತದಾನವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ ಅರೋರಾ ಅವರು ವಿವರಿಸಿದ್ದಾರಾದರೂ,ಪ್ರಧಾನಿ ಮತ್ತು ಗೃಹಸಚಿವರತ್ತ ಬೆರಳು ತೋರಿಸುವ ಮುನ್ನ ಮಮತಾ ತನ್ನ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಾಜ್ಯದಲ್ಲಿ ಚುನಾವಣಾ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಬಿಜೆಪಿ ನಾಯಕರೋರ್ವರು ಹೇಳಿದರು. ರಾಜ್ಯದಲ್ಲಿ ಬಹುಹಂತಗಳಲ್ಲಿ ಮತದಾನ ಹೊಸದೇನಲ್ಲ. 2011ರಲ್ಲಿ ಆರು ಹಂತಗಳಲ್ಲಿ ಮತದಾನ ನಡೆದಿತ್ತು. 2016ರ ಚುನಾವಣೆಗಳಲ್ಲಿಯೂ ಆರು ಹಂತಗಳಲ್ಲಿ ಮತದಾನ ನಡೆಸಲಾಗಿತ್ತು,ಆದರೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೊದಲ ಹಂತದ ಮತದಾನವನ್ನು ಎರಡು ದಿನಗಳಾಗಿ ವಿಭಜಿಸಲಾಗಿತ್ತು. ಪರಿಣಾಮವಾಗಿ ಅದು ಏಳು ಹಂತಗಳ ಚುನಾವಣೆಯಾಗಿತ್ತು ಎಂದರು.

ಪ.ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳನ್ನು ಪರಸ್ಪರ ಹೋಲಿಸುವುದು ಸರಿಯಲ್ಲ. ಎರಡೂ ರಾಜ್ಯಗಳು ವಿಭಿನ್ನ ಸಮಸ್ಯೆಗಳನ್ನು ಹೊಂದಿವೆ. ಯಾವಾಗಲೂ ತಳಮಟ್ಟದ ಪರಿಸ್ಥಿತಿಯನ್ನು ಗಮನಿಸಿ ಮತದಾನದ ಹಂತಗಳನ್ನು ನಿರ್ಧರಿಸಲಾಗುತ್ತದೆ. ಪ.ಬಂಗಾಳವು ಹಿಂಸಾಚಾರದ ಇತಿಹಾಸ ಹೊಂದಿದ್ದರೆ,ತಮಿಳುನಾಡು ಚುನಾವಣೆ ವೆಚ್ಚಗಳ ಸಮಸ್ಯೆಯನ್ನು ಹೊಂದಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೋರ್ವರು ಹೇಳಿದರು.

ಕೇಂದ್ರೀಯ ಅರೆ ಮಿಲಿಟರಿ ಪಡೆಗಳಿಗೆ ಬೇಡಿಕೆಯಿಂದಾಗಿ ಚುನಾವಣೆಯನ್ನು ವಿವಿಧ ಹಂತಗಳಲ್ಲಿ ನಡೆಸಬೇಕಾಗುತ್ತದೆ. ಪಡೆಗಳು ರಾಜ್ಯದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ,ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಬೇಕಾಗುತ್ತದೆ. ಏಕ ಹಂತದಲ್ಲಿ ಚುನಾವಣೆಯನ್ನು ನಡೆಸುವಂತಾಗಲು ಸಾಕಷ್ಟು ಪಡೆಗಳನ್ನು ಒದಗಿಸಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದರು.

ತಾತ್ವಿಕವಾಗಿ ಈ ತರ್ಕ ಸರಿ ಅನ್ನಿಸಬಹುದು. ಆದರೆ ಸರಕಾರಿ ಅಧಿಕಾರಿಯೋರ್ವರು ಹೇಳುವಂತೆ ಇದು ಪಡೆಗಳ ಸಾಗಾಣಿಕೆ ಯನ್ನು ಆಧರಿಸಿರುವ ‘ಸಂಪೂರ್ಣ ಅಮಾಯಕ ’ನಿರ್ಧಾರವಲ್ಲ. ಪ್ರತಿ ಹಂತದ ಮತದಾನಕ್ಕೂ ಮುನ್ನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಉನ್ನತ ನಾಯಕರನ್ನು ಪ್ರಚಾರಕ್ಕೆ ನಿಯೋಜಿಸಲು ಬಿಜೆಪಿ ಉದ್ದೇಶಿಸಿದ್ದು,ಆಯೋಗದ ನಿರ್ಧಾರದಿಂದ ಆ ಪಕ್ಷಕ್ಕೆ ಖಂಡಿತವಾ ಗಿಯೂ ಲಾಭವಾಗಲಿದೆ. ದೇಶದಲ್ಲಿ ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಮಾತುಗಳನ್ನಾಡುತ್ತಿರುವ ಸರಕಾರಕ್ಕೆ ಕನಿಷ್ಠ ಒಂದು ರಾಜ್ಯದಲ್ಲಿ ಅಥವಾ ನಾಲ್ಕು ರಾಜ್ಯಗಳಲ್ಲಾದರೂ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News