ನ್ಯಾಯಾಧೀಶರನ್ನು ಟೀಕಿಸುವ ಹೊಸ ಪ್ರವೃತ್ತಿ ಆತಂಕಕಾರಿ: ರವಿಶಂಕರ್ ಪ್ರಸಾದ್

Update: 2021-02-27 16:41 GMT

ಪಾಟ್ನ, ಫೆ.27: ತಮ್ಮ ಅರ್ಜಿಗಳ ಬಗ್ಗೆ ಅನುಕೂಲಕರ ತೀರ್ಪು ಪ್ರಕಟಿಸದ ನ್ಯಾಯಾಧೀಶರ ಕುರಿತು ಕೆಲವು ಕಾನೂನು ಕಾರ್ಯಕರ್ತರು ಆಕ್ಷೇಪಾರ್ಹ ಟೀಕೆ, ಟಿಪ್ಪಣಿ ಮಾಡುವ ಆತಂಕಾರಿ ಹೊಸ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಪಾಟ್ನ ಹೈಕೋರ್ಟ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರವಿಶಂಕರ್ ಪ್ರಸಾದ್, ತೀರ್ಪಿನ ತಾರ್ಕಿಕತೆಯನ್ನು ನಾವು ಖಂಡಿತವಾಗಿಯೂ ಟೀಕಿಸಬಹುದು. ಆದರೆ ನಾನು ಗಮನಿಸಿರುವ ಹೊಸ ಪ್ರವೃತ್ತಿಯನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ ಎಂದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಸಂದರ್ಭ ತಮಗೆ ಅನುಕೂಲಕರ ತೀರ್ಪು ಪ್ರಕಟಿಸದ ನ್ಯಾಯಾಧೀಶರನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪದ ಬಳಸಿ ಟೀಕಿಸುವುದನ್ನು ಉಲ್ಲೇಖಿಸಿದ ಸಚಿವರು, ‘ಸುಪ್ರೀಂಕೋರ್ಟ್, ಹೈಕೋರ್ಟ್ ಅಥವಾ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾಗಲಿ, ಪ್ರಕರಣವನ್ನು ತಮ್ಮ ತಿಳುವಳಿಕೆಯ ಮತ್ತು ಪರಿಶೀಲನೆಯ ಆಧಾರದಲ್ಲಿ ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ವಿರುದ್ಧ ಟ್ರೋಲ್ ಮಾಡುವುದು, ಸರಣಿ ಟೀಕೆಯ ವ್ಯವಸ್ಥೆ ಮಾಡುವುದು ಸ್ವೀಕಾರಾರ್ಹವಲ್ಲ’ ಎಂದರು.

ತಾನು ಕೂಡಾ ಪಾಟ್ನ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿದ್ದೆ ಎಂದು ಹೇಳಿದ ಅವರು, ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಲಾದ ಹೊಸ ಮಾರ್ಗಸೂಚಿಗಳು ಅತ್ಯಗತ್ಯವಾಗಿದೆ ಎಂದರು. ‘ಸ್ವಾತಂತ್ರವನ್ನು ನಾವು ಬೆಂಬಲಿಸುತ್ತೇವೆ. ಅದೇ ರೀತಿ ಟೀಕೆ, ಭಿನ್ನಾಭಿಪ್ರಾಯಗಳನ್ನೂ ಬೆಂಬಲಿಸುತ್ತೇವೆ. ಆದರೆ ಇಲ್ಲಿರುವುದು ಸಾಮಾಜಿಕ ಮಾಧ್ಯಮದ ದುರ್ಬಳಕೆಯ ವಿಷಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನಿಂದನೆ, ಅವಹೇಳನಕ್ಕೆ ಒಳಗಾದವರ ಅಸಮಾಧಾನ ಪರಿಹರಿಸುವ ವ್ಯವಸ್ಥೆಯ ಅಗತ್ಯವಿದೆ’ ಎಂದು ರವಿಶಂಕರ್ ಪ್ರಸಾದ್ ಹೇಳಿದರು. ಅಖಿಲ ಭಾರತ ನ್ಯಾಯಾಂಗ ಸೇವೆ ಎಂಬ ಹೊಸ ವಿಭಾಗವನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಯುಪಿಎಸ್‌ಸಿ ನಡೆಸುವ ಪರೀಕ್ಷೆಯಲ್ಲಿ ಅತ್ಯುತ್ತಮ ಕಾನೂನು ಪರಿಣತರನ್ನು ನ್ಯಾಯಾಧೀಶರನ್ನಾಗಿ ನೇಮಿಸಲು ಇದು ಪೂರಕವಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News