ಅಸ್ಸಾಂನಲ್ಲಿ ಟೀ ಎಲೆಗಳನ್ನು ಕಿತ್ತು, ಚಹಾ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಪ್ರಿಯಾಂಕಾ ಗಾಂಧಿ

Update: 2021-03-02 07:54 GMT

ಹೊಸದಿಲ್ಲಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಸ್ಸಾಂನ ಬಿಸ್ವಾನಾಥ್ ನಲ್ಲಿ ಚಹಾ ಎಲೆಗಳನ್ನು ಕಿತ್ತರಲ್ಲದೆ, ಚಹಾ ತೋಟದ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಪ್ರಿಯಾಂಕಾ ಚಹಾ ಎಲೆಗಳನ್ನು ಕೀಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೀರೆ ಉಟ್ಟಿದ್ದ 49ರ ವಯಸ್ಸಿನ ಪ್ರಿಯಾಂಕಾ ಚಹಾ ಎಲೆ ಕೀಳುವಾಗ ಬೆನ್ನಿನ ಮೇಲೆ ಬುಟ್ಟಿಯನ್ನು ಇಟ್ಟುಕೊಂಡಿದ್ದರು. ಅದೇ ರೀತಿ ತಲೆಯ ಮೇಲೆ ಸ್ಕಾರ್ಫ್ ಇಟ್ಟು ಅದರ ಮೇಲೆ ಬ್ಯಾಂಡ್ ಕಟ್ಟಲಾಗಿತ್ತು. ಬುಟ್ಟಿ ಹಾಗೂ ತಲೆ ಮೇಲಿನ ಬ್ಯಾಂಡ್ ನ್ನು ಸಮತೋಲದಲ್ಲಿರಿಸಲು ಪ್ರಿಯಾಂಕಾ ಯಶಸ್ವಿಯಾದರು.

ಪ್ರಿಯಾಂಕಾ ಚಹಾ ಎಲೆಯನ್ನು ಕೀಳುವ ವೀಡಿಯೊವನ್ನು ನ್ಯೂಸ್ ಏಜೆನ್ಸಿ ಎಎನ್ ಐ ಹಂಚಿಕೊಂಡಿದ್ದು, ಸಧುರು ಟೀ ತೋಟದಲ್ಲಿ ಚಹಾ ಎಲೆಯನ್ನು ಹೇಗೆ ಕೀಳಬೇಕೆನ್ನುವ ಕುರಿತಾಗಿ ಪ್ರಿಯಾಂಕಾ ಅಲ್ಲಿದ್ದ ಕೆಲಸಗಾರರಿಂದ ಸಲಹೆ ಸೂಚನೆ ಪಡೆದರು.

ಟೀ ತೋಟದಲ್ಲಿ ಟೀ ಎಲೆಗಳನ್ನು ಕೀಳುತ್ತಿರುವ ಪ್ರಿಯಾಂಕಾ ಅವರ ಫೋಟೊ ಹಾಗೂ ವೀಡಿಯೊಗೆ ಎಲ್ಲೆಡೆ ಸ್ವಾಗತ ಲಭಿಸಿತು. ಕಾಂಗ್ರೆಸ್ ಫೋಟೊ ಹಾಗೂ ವೀಡಿಯೊವನ್ನು ಹಂಚಿಕೊಂಡಿತ್ತು.

ಎರಡು ದಿನಗಳ ರಾಜ್ಯ ಭೇಟಿಯಲ್ಲಿರುವ ಪ್ರಿಯಾಂಕಾ ಮಾ.27ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ.

ಅಸ್ಸಾಂನಲ್ಲಿ ಸುಮಾರು 10 ಲಕ್ಷ ಟೀ ಕಾರ್ಮಿಕರಿದ್ದು, ಅಸ್ಸಾಂನ ಪ್ರಮುಖ ವೋಟ್ ಬ್ಯಾಂಕ್ ಆಗಿದ್ದಾರೆ. ಈ ಕಾರ್ಮಿಕರು ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದರು. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟೀ ಕೆಲಸಗಾರರ ದಿನದ ಸಂಬಳವನ್ನು 365 ರೂ. ನೀಡಲಿದೆ ಎಂದು ಭರವಸೆ ನೀಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News