ಶ್ವೇತಭವನ ಬಜೆಟ್ ಮುಖ್ಯಸ್ಥೆ ಹುದ್ದೆಯಿಂದ ಹಿಂದೆ ಸರಿದ ನೀರಾ ಟಂಡನ್

Update: 2021-03-03 04:46 GMT
Photo source: Twitter(@neeratanden)

ವಾಷಿಂಗ್ಟನ್, ಮಾ.3: ಪ್ರಮುಖ ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಸೆನೆಟ್ ಸದಸ್ಯರಿಂದ ತಮ್ಮ ವಿವಾದಾತ್ಮಕ ಟೀಕೆಗಳಿಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜೋ ಬೈಡೆನ್ ಆಡಳಿತದಲ್ಲಿ ಶ್ವೇತಭವನದ ವ್ಯವಸ್ಥಾಪನೆ ಮತ್ತು ಬಜೆಟ್ ಕಚೇರಿಯ ಮುಖ್ಯಸ್ಥೆಯಾಗಿದ್ದ ಭಾರತ ಮೂಲದ ನೀರಾ ಟಂಡನ್ ತಮ್ಮ ಹುದ್ದೆಯಿಂದ ಹಿಂದೆ ಸರಿದಿದ್ದಾರೆ.

ಬೈಡೆನ್ ಆಡಳಿತದ ಮೊಟ್ಟಮೊದಲ ಹೈಪ್ರೊಫೈಲ್ ಸೋಲು ಇದಾಗಿದೆ. ಕ್ಯಾಬಿನೆಟ್‌ಗೆ ನೇಮಕಗೊಂಡಿದ್ದ 23 ಮಂದಿಯ ಪೈಕಿ 11 ಮಂದಿಯ ನೇಮಕವನ್ನು ಉಭಯ ಪಕ್ಷಗಳ ಬೆಂಬಲದೊಂದಿಗೆ ಸೆನೆಟ್ ಅನುಮೋದಿಸಿದೆ.

"ದುರಾದೃಷ್ಟವಶಾತ್, ಇದೀಗ ಸೆನೆಟ್ ದೃಢೀಕರಣದ ಯಾವುದೇ ಸಾಧ್ಯತೆ ಕಾಣಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಿಮ್ಮ ಇತರ ಆದ್ಯತೆಗಳಿಂದ ವಿಮುಖವಾಗುವಂಥ ನನ್ನ ನೇಮಕಾತಿಯ ಪರಿಗಣನೆ ಮುಂದುವರಿಸಬೇಕೆಂದು ನಾನು ಬಯಸುತ್ತಿಲ್ಲ" ಎಂದು ಟಂಡನ್ ಬೈಡೆನ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

"ನೀರಾ ಅವರ ಸಾಧನೆಗಳ ದಾಖಲೆ, ಅನುಭವ ಮತ್ತು ಯೋಚನೆಗಳ ಬಗ್ಗೆ ನನಗೆ ಅತ್ಯುನ್ನತ ಗೌರವ ಇದೆ. ಆದ್ದರಿಂದ ನನ್ನ ಆಡಳಿತದಲ್ಲಿ ನಿಭಾಯಿಸಬಹುದಾದ ಬೇರೆ ಜವಾಬ್ದಾರಿಯನ್ನು ನಾನು ನೀಡಲಿದ್ದೇನೆ" ಎಂದು ಬೈಡೆನ್ ಹೇಳಿಕೆ ನೀಡಿದ್ದಾರೆ.

ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ ಪಶ್ಚಿಮ ವರ್ಜೀನಿಯಾ ಸೆನೆಟ್ ಸದಸ್ಯ ಜೋ ಮಂಚಿನ್ ಮತ್ತು ಹಲವು ಮಂದಿ ರಿಪಬ್ಲಿಕನ್ ಸದಸ್ಯರು ನೀರಾ ಟ್ವೀಟ್‌ಗಳ ವಿರುದ್ಧ ಕಳೆದ ತಿಂಗಳು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅವರ ನೇಮಕಾತಿಯ ದೃಢೀಕರಣ ಸಂದೇಹಾಸ್ಪದವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News