ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ದೀಕ್ಷಾ'ಗೆ ಪ್ರಶಸ್ತಿ: ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಹ್ಯಾಟ್ರಿಕ್ ಸಾಧನೆ

Update: 2021-03-03 16:20 GMT

ಮಡಿಕೇರಿ, ಮಾ.3: ಸ್ವಸ್ತಿಕ್ ಎಂಟಟ್ರೈನ್ಮೆಂಟ್ ಸಹಯೋಗದೊಂದಿಗೆ ಅನಿಮಿಶ ಅರ್ಪಿಸಿರುವ ಅಂಧ ಬಾಲಕಿಯ ಜೀವನಾಧರಿತ ಮಡಿಕೇರಿಯ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ಮಿಸಿರುವ "ದೀಕ್ಷಾ" (ಮೂರು ಪುಟ್ಟ ಕಣ್ಣುಗಳ ಕಥೆ) ಕನ್ನಡ ಚಲನಚಿತ್ರಕ್ಕೆ ಕಲ್ಬುರ್ಗಿ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಲಭಿಸಿದೆ.

ನಿರ್ದೇಶಕ ಗಾರ್ಗಿ ಕಾರೇಹಕ್ಲು ರಚಿಸಿ, ನಿರ್ದೇಶಿಸಿರುವ “ದೀಕ್ಷಾ” ಚಿತ್ರಕ್ಕೆ ಕಲಾತ್ಮಕತೆಯೊಂದಿಗೆ ಮನೋರಂಜನೆಯ ಸ್ಪರ್ಷ ನೀಡಲಾಗಿದೆ. ದೃಷ್ಟಿ ಹೀನ ಬಾಲಕಿಯೊಬ್ಬಳು ವೈದ್ಯೆಯಾಗುವ ಕನಸು ಕಾಣುವ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಿಸುವ ಕಥೆಯನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

“ದೀಕ್ಷಾ” ಚಿತ್ರಕ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಗೆಲ್ಲುವ ಮೂಲಕ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ಪ್ರಶಸ್ತಿ ಗಳಿಕೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಕೊಡಗಿನ ನಿರ್ಮಾಪಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಸುಮಾರು 172 ಚಿತ್ರಗಳಲ್ಲಿ “ದೀಕ್ಷಾ” ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ ಪಡೆಯಿತು. ಯಶೋಧ ಪ್ರಕಾಶ್ ಅವರು ಈ ಹಿಂದೆ ಕೊಲ್ಕತ್ತ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಬಾಕೆಮನೆ" ಕೊಡವ ಚಿತ್ರಕ್ಕೆ ಮತ್ತು ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಸ್ಮಶಾನ ಮೌನ" ಕನ್ನಡ ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದಾರೆ. ಇದೀಗ ಬಹು ನಿರೀಕ್ಷೆ ಮೂಡಿಸಿರುವ “ದೀಕ್ಷಾ” ಚಿತ್ರ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದು, ಮೇ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರ ತಂಡ ತಿಳಿಸಿದೆ. 

ಗಾರ್ಗಿ ಕಾರೇಹಕ್ಲು ನಿರ್ದೇಶಿರುವ ಚಿತ್ರಕ್ಕೆ ವಿಠಲ್ ರಂಗದೋಳ್ ಸಂಗೀತ ನೀಡಿದ್ದು, ಪ್ರದೀಪ್ ಆರ್ಯನ್ ಛಾಯಾಗ್ರಹಣ ಮಾಡಿದ್ದಾರೆ. ಆನಂದ್ ಅನಿ ಸಂಕಲನ, ಡಾ.ನಾಗನಾಥ್ ವಿ.ಯಾದ್ಗೀರ್ ಸಹ ನಿರ್ದೇಶನ, ಸಂತೋಷ್ ಆನಂದಪುರ ಸಹ ಛಾಯಾಗ್ರಾಹಕ, ಮುಖ್ಯ ಸಹ ನಿರ್ದೇಶಕರಾಗಿ ಇತಿಹಾಸ ಶಂಕರ್, ಸಹ ನಿರ್ದೇಶಕರಾಗಿ ರಜನೀಶ್ ನಾವುಡ, ನಿರ್ಮಾಣ ನಿರ್ವಹಣೆ ಪುಟ್ಟರಾಜು ಜವಾಬ್ದಾರಿ ನಿಭಾಯಿಸಿದ್ದಾರೆ.

“ದೀಕ್ಷಾ”ಳಾಗಿ ಪ್ರಮುಖ ಪಾತ್ರದಲ್ಲಿ ಬೇಬಿ ಲಹರಿ ಅಭಿನಯಿಸಿದ್ದು, ಉಳಿದಂತೆ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಡಾ.ನಾಗೇಶ್, ಡಾ.ನಾಗನಾಥ್, ಎಸ್.ಆರ್.ವಿಜಯಲಕ್ಷ್ಮಿ, ಶ್ರೀದೇವಿ ಶಿವಮೊಗ್ಗ, ಬಾಳೆಯಡ ವಿಜಯ, ಸುದೀಂದ್ರ ರಾವ್, ಕುಮಾರ್ ಸಾರ, ಮಂಜುನಾಥ್ ದ್ಯಾಣತ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News