ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಶಶಿಕಲಾ ಜೊಲ್ಲೆ

Update: 2021-03-03 16:36 GMT

ಬೆಂಗಳೂರು, ಮಾ.3: ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ, ಪಿಂಚಣಿ, ಬಜೆಟ್‍ನಲ್ಲಿ ಅನುದಾನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪಗೆ ಗಮನಕ್ಕೆ ತಂದು, ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಮನವಿ ಸಲ್ಲಿಸಿದ್ದಾರೆ. ಈ ಎಲ್ಲ ಬೇಡಿಕೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಲಾಗುವುದೆಂದು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಕೆಲವೊಂದು ಬೇಡಿಕೆಗಳು ಕೇಂದ್ರ ಸರಕಾರದ ಹಂತದಲ್ಲಿ ಪರಿಹರಿಸಬೇಕಾಗುತ್ತದೆ. ಇವೆಲ್ಲವುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಹಂತ, ಹಂತವಾಗಿ ಬಗೆಹರಿಸಲಾಗುವುದೆಂದು ಅವರು ತಿಳಿಸಿದ್ದಾರೆ. ಈ ವೇಳೆ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News