ನಟಿಯ ಚಿತ್ರದ ಅನಧಿಕೃತ ಬಳಕೆ: ತೆಲುಗು ಚಲನಚಿತ್ರವನ್ನು ಹಿಂದೆಗೆದುಕೊಳ್ಳಲು ಅಮೆಝಾನ್ ಪ್ರೈಮ್‌ಗೆ ಹೈಕೋರ್ಟ್ ಆದೇಶ

Update: 2021-03-03 17:28 GMT

ಮುಂಬೈ,ಮಾ.3: ಬಾಲಿವುಡ್ ನಟಿ ಸಾಕ್ಷಿ ಮಲಿಕ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಾಂಬೆ ಉಚ್ಚ ನ್ಯಾಯಾಲಯವು ‘V ’ ತೆಲುಗು ಚಲನಚಿತ್ರವನ್ನು ಹಿಂದೆಗೆದುಕೊಳ್ಳುವಂತೆ ಒಟಿಟಿ ಪ್ಲಾಟ್‌ಫಾರ್ಮ್ ಅಮೆಝಾನ್ ಪ್ರೈಮ್‌ಗೆ ಆದೇಶಿಸಿದೆ.

ನಿರ್ಮಾಣ ಸಂಸ್ಥೆ ವೆಂಕಟೇಶ್ವರ ಕ್ರಿಯೇಷನ್ಸ್ ತನ್ನ ಪೂರ್ವಾನುಮತಿಯನ್ನು ಪಡೆದುಕೊಳ್ಳದೆ ತನ್ನ ಭಾವಚಿತ್ರವನ್ನು ಸಿನೆಮಾದಲ್ಲಿ ಬಳಸಿದೆ ಎಂದು ಮಲಿಕ್ ದೂರಿನಲ್ಲಿ ಆರೋಪಿಸಿದ್ದರು. ಮಲಿಕ್ ಅವರ ಇನ್‌ಸ್ಟಾಗ್ರಾಂ ಖಾತೆಯಿಂದ ಸದ್ರಿ ಭಾವಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಅವರ ಪರ ವಕೀಲರು,ಚಿತ್ರವನ್ನು ಬಳಸಿಕೊಂಡ ರೀತಿಯು ಮಾನನಷ್ಟವನ್ನುಂಟು ಮಾಡಿದೆ ಎಂದು ವಾದಿಸಿದರು.

 ಭಾವಚಿತ್ರವನ್ನು ಪಡೆದುಕೊಳ್ಳುವ ಕೆಲಸವನ್ನು ಗುತ್ತಿಗೆ ಏಜೆನ್ಸಿಯೊಂದಕ್ಕೆ ವಹಿಸಿದ್ದೆ ಮತ್ತು ಅದು ಮಲಿಕ್‌ರಿಂದ ಪೂರ್ವಾನುಮತಿ ಪಡೆದುಕೊಂಡಿರಬಹುದೆಂದು ತಾನು ಭಾವಿಸಿದ್ದೆ ಎಂಬ ವೆಂಕಟೇಶ್ವರ ಕ್ರಿಯೇಷನ್ಸ್‌ನ ಸಮರ್ಥನೆಯನ್ನು ತಿರಸ್ಕರಿಸಿದ ನ್ಯಾಯಾಲಯವು, ಭಾವಚಿತ್ರವಿರುವ ಇಡೀ ಸನ್ನಿವೇಶವನ್ನೇ ತಕ್ಷಣವೇ ತೆಗೆಯುವಂತೆ ಆದೇಶಿಸಿತು.

ಪರಿಷ್ಕೃತ ಭಾಗವನ್ನು ಮಲಿಕ್ ಅವರಿಗೆ ತೋರಿಸಿದ ಬಳಿಕವಷ್ಟೇ ಮತ್ತೊಮ್ಮೆ ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಾಗಿ ನ್ಯಾ.ಗೌತಮ್ ಪಟೇಲ್ ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News