ಕಚೇರಿ ಆವರಣದಲ್ಲಿ ಕುದುರೆ ಕಟ್ಟಲು ಅವಕಾಶ ಕೋರಿ ಮಹಾರಾಷ್ಟ್ರದ ಸರಕಾರಿ ಉದ್ಯೋಗಿಯಿಂದ ಜಿಲ್ಲಾಧಿಕಾರಿಗೆ ಮನವಿ

Update: 2021-03-03 18:16 GMT

ಮುಂಬೈ, ಮಾ. 3: ಜಿಲ್ಲಾಧಿಕಾರಿ ಕ್ಯಾಂಪಸ್‌ನಲ್ಲಿರುವ ತನ್ನ ಕಚೇರಿಗೆ ದಿನನಿತ್ಯ ಕುದುರೆಯಲ್ಲಿ ಆಗಮಿಸಲು ಬಯಸುತ್ತಿರುವುದರಿಂದ, ಕುದುರೆ ಕಟ್ಟಲು ಅವಕಾಶ ನೀಡುವಂತೆ ನಾಂದೇಡ್‌ನ ಮಹಾರಾಷ್ಟ್ರ ಸರಕಾರದ ಅಧಿಕಾರಿಯೋರ್ವರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದ್ದಾರೆ.

ನಾಂದೇಡ್‌ನ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಉದ್ಯೋಗ ಖಾತರಿ ಯೋಜನೆ ಇಲಾಖೆಯ ಉಪ ಲೆಕ್ಕಾಧಿಕಾರಿಯಾಗಿರುವ ಸತೀಶ್ ದೇಶ್‌ಮುಖ್ ಈ ವಿಭಿನ್ನ ಮನವಿ ಮಾಡಿದ್ದಾರೆ. ತನ್ನ ಬೆನ್ನುಮೂಳೆಯಲ್ಲಿ ಸಮಸ್ಯೆ ಇರುವುದರಿಂದ ದ್ವಿಚಕ್ರ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕುದುರೆ ಖರೀದಿಸಲು ಬಯಸಿದ್ದೇನೆ ಎಂದು ದೇಶಮುಖ್ ಪ್ರತಿಪಾದಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ವಿಪಿನ್ ಇಟಾಂಕರ್ ಅವರಿಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ. ಕೂಡಲೇ ಅವರ ಅರ್ಜಿಯ ಪ್ರತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‘‘ನನ್ನ ಬೆನ್ನು ಮೂಳೆಯಲ್ಲಿ ಕೆಲವು ಸಮಸ್ಯೆ ಇದೆ. ಆದುದರಿಂದ ಕಚೇರಿ ತಲುಪಲು ದ್ವಿಚಕ್ರ ವಾಹನ ಬಳಸಲು ಸಾಧ್ಯವಾಗುತ್ತಿಲ್ಲ. ಕಚೇರಿಗೆ ಸರಿಯಾದ ಸಮಯಕ್ಕೆ ತಲುಪಲು ನಾನು ಕುದುರೆ ಖರೀದಿಸಲು ನಿರ್ಧರಿಸಿದ್ದೇನೆ. ಆದುದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕುದುರೆ ಕಟ್ಟಲು ಅವಕಾಶ ನೀಡುವಂತೆ ಕೋರುತ್ತಿದ್ದೇನೆ’’ ಎಂದು ಮನವಿಯಲ್ಲಿ ದೇಶ್‌ಮುಖ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News