ಉತ್ತರ ಪ್ರದೇಶ: ಮಗಳ ತಲೆ ಕತ್ತರಿಸಿ ಠಾಣೆಗೆ ಒಯ್ಯಲು ಯತ್ನಿಸಿದ ತಂದೆ !

Update: 2021-03-04 17:40 GMT

ಲಕ್ನೊ, ಮಾ. 3: ಉತ್ತರಪ್ರದೇಶದ ಹರ್ದೋಯಿ ಜಿಲ್ಲೆಯ ಗ್ರಾಮವೊಂದರಲ್ಲಿ ವ್ಯಕ್ತಿಯೋರ್ವರು ತನ್ನ 17 ವರ್ಷದ ಪುತ್ರಿಯ ತಲೆ ಕತ್ತರಿಸಿ ಹತ್ಯೆಗೈದಿದ್ದಾರೆ. ಆಕೆಯ ರುಂಡವನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಆತನ ವರ್ತನೆಯನ್ನು ನೋಡಿ ಗ್ರಾಮದ ಜನತೆ ಆಘಾತಗೊಂಡಿದ್ದಾರೆ.

ಲಕ್ನೋದಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಪಾಂಡೇತರ ಗ್ರಾಮದ ರಸ್ತೆಯಲ್ಲಿ ಸರ್ವೇಶ್ ಕುಮಾರ್ ರುಂಡವನ್ನು ಹಿಡಿದುಕೊಂಡು ಸಾಗುತ್ತಿರುವುದನ್ನು ಸ್ಥಳೀಯರೊರ್ವರು ಗಮನಿಸಿದರು. ಅನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳು ಆತನ್ನು ಬಂಧಿಸಿದರು.

ಮಗಳು ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಆದುದರಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆಯ ರುಂಡ ಬೇರ್ಪಡಿಸಿ ಹತ್ಯೆಗೈದಿದ್ದೇನೆ. ದೇಹ ಮನೆಯಲ್ಲೇ ಇದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಸರ್ವೇಶ್ ಹೆಸರಿನ ವ್ಯಕ್ತಿ ಪುತ್ರಿಯನ್ನು ಹತ್ಯೆಗೈದಿದ್ದ. ಆತ ಪುತ್ರಿಯ ಕತ್ತರಿಸಿದ ರುಂಡವನ್ನು ಹಿಡಿದುಕೊಂಡು ರಸ್ತೆಯಲ್ಲಿ ಸಾಗುತ್ತಿರುವುದನ್ನು ಸ್ಥಳೀಯರು ನೋಡಿ ಮಾಹಿತಿ ನೀಡಿದರು. ಮಾಹಿತಿ ತಿಳಿದ ಕೂಡಲೇ ನಾವು ಸ್ಥಳಕ್ಕೆ ತಲುಪಿ ತಡೆದವು. ಆತನನ್ನು ಕಸ್ಟಡಿಗೆ ತೆಗೆದುಕೊಂಡೆವು. ಆದರೆ, ರುಂಡವನ್ನು ಪೊಲೀಸರು ಅಸಮರ್ಪಕವಾಗಿ ಕೊಂಡೊಯ್ಯುತ್ತಿರುವುದನ್ನು ತೋರಿಸುವ ಚಿತ್ರವನ್ನು ಗಂಭಿರವಾಗಿ ಪರಿಗಣಿಸಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ’’ ಎಂದು ಹರ್ದೋಯಿಯಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

2019ರಲ್ಲಿ ಅತ್ಯಧಿಕ ಅಪರಾಧ ಪ್ರಕರಣಗಳು ದಾಖಲಾಗಿರುವ ರಾಜ್ಯಗಳಲ್ಲಿ ಉತ್ತರಪ್ರದೇಶದ ಮೊದಲನೇ ಸ್ಥಾನದಲ್ಲಿದೆ ಎಂದು ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೊ ಬಿಡುಗಡೆ ಮಾಡಿದ ಇತ್ತೀಚೆಗಿನ ದತ್ತಾಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News