ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಿ: ಕೃಷಿ ಸಚಿವ ಬಿ.ಸಿ. ಪಾಟೀಲ್

Update: 2021-03-04 10:59 GMT

ತುಮಕೂರು: ಕೃಷಿಕರು ಸಾವಯವ ಪದ್ಧತಿಯನ್ನ ಅಳವಡಿಸಿಕೊಂಡು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಈ ಹಿಂದೆ ಸಿರಿಧಾನ್ಯಗಳು ಬಡವರ ಧಾನ್ಯಗಳಾಗಿದ್ದವು. ಆದರೆ ಇಂದು ಖಾಯಿಲೆಗಳ ಅಬ್ಬರದಿಂದ ಬಡವರ ಧಾನ್ಯಗಳು ಸಿರಿಧಾನ್ಯಗಳಾಗಿ ಮಾರ್ಪಟ್ಟಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಕೃಷಿ ಭವನ ಕಟ್ಟಡದ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಹಬ್ಬ ಕಾರ್ಯಕ್ರಮದಲ್ಲಿ ಕೃಷಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ಕೋವಿಡ್ ನಂತರ ಕೃಷಿ ಸುಧಾರಿಸಿದೆ. ಕೃಷಿ ಉಳಿದರೆ ರೈತರು ಉಳಿಯುತ್ತಾರೆ. ದೇಶ ಉಳಿಯುತ್ತದೆ. ಇಲ್ಲವಾದರೆ ದೇಶವೇ ನಾಶವಾಗುತ್ತದೆ. ಇಂತಹ ಮಹತ್ವವಿರುವ ಕೃಷಿ ಕಾಯಕವನ್ನು ನಾವು ಮರೆಯುತ್ತಿದೇವೆ. ಇದು ತುಂಬಾ ನೋವಿನ ಸಂಗತಿ. ರೈತರು ಕೊಡುಗೈ ದಾನಿಗಳು. ದೇಶಕ್ಕೆ ಅನ್ನವನ್ನು ಕೊಡುತ್ತಿದ್ದಾರೆ. ಆದರೆ ಬದಲಾದ ವಾತಾವರಣದ ಸಮಯದಲ್ಲಿ ಇಂದು ಕೃಷಿ ಪದ್ಧತಿಯಲ್ಲಿ ಬದಲಾವಣೆ ಬೇಕಿದೆ. ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕು. ಕೋಲಾರದಲ್ಲಿ ನೀರಾವರಿ ಕ್ಷೇತ್ರ ಕಡಿಮೆ ಇದ್ದರೂ ಸಹ ಅಲ್ಲಿನ ರೈತರು ಮಿಶ್ರ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ಆ ಭಾಗದಲ್ಲಿ ರೈತರ ಆತ್ಮಹ್ಯತೆಯು ಕಡಿಮೆ ಇದೆ. ಆದ್ದರಿಂದ ಈ ಭಾಗದ ರೈತರು ಇಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಿ ಎಂದು ಕಾರ್ಯಕ್ರಮದಲ್ಲಿದ್ದ ರೈತರಲ್ಲಿ ಸಚಿವರು ಮನವಿ ಮಾಡಿದರು.

ರಾಜ್ಯದಲ್ಲಿ 61 ಸಾವಿರ ಎಕರೆಗಳಲ್ಲಿ 41 ಸಾವಿರ ಮೆಟ್ರಿಕ್ ಟನ್ ಸಿರಿಧಾನ್ಯ ಬೆಳೆಯಲಾಗುತ್ತಿದೆ. ರಾಗಿ, ನವಣೆ ಆರಕ, ಉದ್ದು ಸೇರಿದಂತೆ ಅನೇಕ ಸಿರಿ ಧಾನ್ಯಗಳಲ್ಲಿ ಪೌಷ್ಠಿಕ ಅಂಶಗಳಿವೆ.ಪ್ರತಿಯೊಂದರಲ್ಲಿ ಹಲವಾರು ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಇದರ ಉಪಯುಕ್ತತೆ ಜನರಿಗೆ ತುಂಬಾ ಅವಶ್ಯಕವಾದ್ದರಿಂದ ಆರೋಗ್ಯದ ದೃಷ್ಠಿಯಿಂದ ಬಹಳ ಒಳ್ಳೆಯದು.ಕೋವಿಡ್ ನಂತರ ಸಿರಿಧಾನ್ಯಗಳ ಬೇಡಿಕೆ ಹೆಚ್ಚಿದೆ. ಈ ಪದಾರ್ಥಗಳಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಿರುವುದರಿಂದ ವಿದೇಶಗಳಿಂದ ದೇಶಿಯ ಸಾಂಬಾರ್ ಪದಾರ್ಥಗಳ ಬೇಡಿಕೆ ಹೆಚ್ಚುತ್ತಿದೆ. ಅಂತಹ ಮಹತ್ವ ಈ ಧಾನ್ಯಗಳಲ್ಲಿ ಇದೆ. ರೈತರು ಈ ನಿಟ್ಟಿನಲ್ಲಿ ಇಂತಂಹ ಸಿರಿಧಾನ್ಯಗಳನ್ನು ಬೆಳೆದು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು. ಅಲ್ಲದೇ ಕೋವಿಡ್‍ನಿಂದ ನಗರ ಪ್ರದೇಶದಿಂದ ಬಂದ ಗ್ರಾಮೀಣ ಭಾಗದ ಯುವಕರು ತಮ್ಮ ಪ್ರದೇಶಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಐದಾರು ರೈತರು ಒಗ್ಗೂಡಿ ಸಹಕಾರ ಮಾರುಕಟ್ಟೆಗಳನ್ನು ಸ್ಥಾಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು.

ರೈತರ ಆದಾಯ ದ್ವಿಗುಣಗೊಳಿಸಲು ಸಿ.ಎಫ್.ಟಿ.ಆರ್.ಐ ನಿಂದ ಜನವರಿ 11 ರಿಂದ ಮಾರ್ಚ್ 31ರವರೆಗೆ ರೈತರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಮೋದಿಯವರು “ಒಂದು ಜಿಲ್ಲೆ ಒಂದು ಉತ್ಪನ್ನ’’ ಯೋಜನೆಯಡಿ 10 ಸಾವಿರ ಕೋಟಿ.ರೂಗಳನ್ನು ಆಹಾರ ಸಂಸ್ಕರಣೆಗೆ ಮೀಸಲಿರಿಸಿದ್ದಾರೆ. ಅದರಿಂದ ರೈತರು ಇದರ ಪ್ರಯೋಜನಾ ಪಡೆದುಕೊಳ್ಳಬೇಕು ಎಂದರು.

ಸಿರಿಧಾನ್ಯ ಹಬ್ಬ ಮತ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ, ಜೆ.ಸಿ.ಮಾಧುಸ್ವಾಮಿ, ಪ್ರಕೃತಿ ನಮಗೆಲ್ಲ ಬಹು ದೊಡ್ಡ ವಿಜ್ಞಾನಿ, ವೈದ್ಯ, ವಿನ್ಯಾಸಕಾರ, ಮಾರ್ಗದರ್ಶಕ. ಪ್ರಕೃತಿಗಿಂತ ದೊಡ್ಡವರು ಯಾರು ಇಲ್ಲ. ಹಾಗೆಯೇ ಆಯಾ  ಪ್ರದೇಶಕ್ಕನುಗುಣವಾಗಿ ಮಳೆ, ಬೆಳೆ ಆಗುತ್ತಿದೆ. ಆದರೆ ಇಂದು ನಾವು ಅದರ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದೇವೆ. ಅದಕ್ಕೆ ಪರಿಣಾಮಗಳನ್ನು ಎದುರಿಸಿದ್ದೇವೆ. ತುಳಿತಕ್ಕೆ ಒಳಗಾಗಿ, ಅಕ್ಷರದಿಂದ ದೂರ ಉಳಿದು ಗುಲಾಮಗಿರಿಯ ಹಿನ್ನೆಲೆಯಿಂದ ನಾವು ಇಂತಹ ಸ್ಥಿತಿಯಲ್ಲಿದ್ದೇವೆ. ಬ್ರಿಟಿಷರು ಬಿಟ್ಟು ಹೋಗಿರುವ ಸಂಸ್ಕೃತಿ, ಊಟ, ಉಡುಗೆ, ಆಚರಣೆಗಳನ್ನು ಅನುಕರಣೆ ಮಾಡಿ ಆಹಾರ ಪದ್ಧತಿಯಲ್ಲಿ ಇಂದು ಬದಲಾವಣೆಗಳಾಗಿವೆ. ಆದ್ದರಿಂದ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಪುನಃ ದೇಶಿಯ ಸಂಸ್ಕೃತಿಯನ್ನು ಪ್ರತಿಷ್ಠಾಪಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ಜಿಲ್ಲೆಯ ಸಿದ್ದಮ್ಮ, ಕೃಷ್ಣಮೂರ್ತಿ,ಕರಿಯಪ್ಪ ಇವರಿಗೆ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News