"ಧರ್ಮದ ಕಾರಣಕ್ಕೆ ನೊಂದವರಿಗೆ ನ್ಯಾಯ ಒದಗಿಸಲು ತಾರತಮ್ಯ ಮಾಡಬಾರದು"

Update: 2021-03-04 11:26 GMT

ಚಿಕ್ಕಮಗಳೂರು, ಮಾ.4: ಪೊಲೀಸರು ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಸಮಸ್ಯೆಗಳೊಂದಿಗೆ ಬರುವ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಧರ್ಮದ ಕಾರಣಕ್ಕೆ ತಾರತಮ್ಯ ಮಾಡದೇ ನೊಂದವರಿಗೆ ನ್ಯಾಯ ಒದಗಿಸಲು ಪೊಲೀಸರ ಕರ್ತವ್ಯವಾಗಿದೆ ಎಂದು ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ದೇವಜ್ಯೋತಿ ರೇ ಹೇಳಿದರು.

ಗುರುವಾರ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 13ನೇ ತಂಡದ 4ನೇ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್‍ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸರು ಸಂತ್ರಸ್ಥರ ನಡುವೆ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದೆ ಸಮಾಜದ ಎಲ್ಲ ಜನತೆಯನ್ನು ಸಮಾನವಾಗಿ ಕಾಣುವ ಮೂಲಕ ಕಾನೂನಿನ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು. ಪೊಲೀಸ್ ಇಲಾಖೆ ಜನಸೇವೆಯಲ್ಲಿ ಮುಂಚೂಣಿಯಲ್ಲಿದೆ. ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಕಾರ್ಯನಿರ್ವಹಿಸಬೇಕು. ಇಲಾಖೆಯಲ್ಲಿ ಪೊಲೀಸ್ ಸಿಬ್ಬಂದಿ 30ರಿಂದ 36 ವರ್ಷಗಳ ಕಾಲ ಕಾರ್ಯನಿರ್ವಹಿಸುವ ಅವಧಿಯಲ್ಲಿ ಅನೇಕ ರೀತಿಯ ಅನುಭವಗಳ ಪರಿಚಯವಾಗುತ್ತದೆ. ಕೆಲವೊಮ್ಮೆ ಕಷ್ಟದ ಅನುಭವ ಇನ್ನೂ ಕೆಲವೊಮ್ಮೆ ಖುಷಿಯ ಅನುಭವಗಳು ಪರಿಚಯವಾಗುತ್ತದೆ. ಎಲ್ಲ ಸಂದರ್ಭಗಳು ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪೊಲೀಸರ ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆ ಕಾಣುತ್ತಿದೆ. ಉತ್ತಮ ತರಬೇತುದಾರರ ಪರಿಶ್ರಮದ ಫಲವಾಗಿ ಉತ್ತಮ ತರಬೇತಿ ನೀಡಲಾಗಿದೆ. ತರಬೇತಿ ಅವಧಿಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿರುವುದರಿಂದ ಎಲ್ಲರೂ ಇಲಾಖೆಯ ಪರಿವಾರದ ಪೂರ್ಣ ಸದಸ್ಯರಾಗಿತ್ತಾರೆ. ತರಬೇತಿ ಅವಧಿಯಲ್ಲಿ ಕಲಿತ ಶಿಸ್ತನ್ನು ತಮ್ಮ ಕಾರ್ಯ ನಿರ್ವಹಣೆಯ ಅವಧಿಯುದ್ದಕ್ಕೂ ಪಾಲಿಸಬೇಕು. ಇಲಾಖೆಯ ಗೌರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ.ಎಚ್ ಮಾತನಾಡಿ, ತರಬೇತಿ ಪಡೆದ ಇಲಾಖೆ ಸಿಬ್ಬಂದಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಸಮಾಜದ ಎಲ್ಲಾ ವರ್ಗದ ಜನರಿಗೆ ಕಾನೂನು ರೀತಿಯಲ್ಲಿ ನಿಷ್ಪಕ್ಷಪಾತವಾದ ಸೇವೆ ಸಲ್ಲಿಸಬೇಕು. ಬಡವರಿಗೆ ಹಾಗೂ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದ ಅವರು, ಎಂಟು ತಿಂಗಳ ತರಬೇತಿಯ ನಂತರದ ನಿರ್ಗಮನ ಪಥಸಂಚಲನ ಜೀವನದ ಬುನಾದಿಯಾಗಿದ್ದು, ಪೊಲೀಸ್ ಠಾಣೆಗಳ ಕೆಲಸದ ವೇಳೆ ಇನ್ನೂ ಹೆಚ್ಚಿನ ವಿಷಯವನ್ನು ಅರಿತು ಕರ್ತವ್ಯದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ಕಲಿತ ವಿದ್ಯೆ ನಿಂತ ನೀರಾಗದೇ ಹರಿಯುವ ನೀರಾಗಬೇಕು. ನಿರಂತರ ಕಲಿಕೆಯಲ್ಲಿ ಯಶಸ್ಸು ಸಾಧ್ಯ ಎಂದರು. 

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶೃತಿ ಎನ್.ಎಸ್ ಪಥ ಸಂಚಲನದ ವೇಳೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ತರಬೇತಿಯಲ್ಲಿ ಒಟ್ಟು 67 ಮಹಿಳಾ ಪ್ರಶಿಕ್ಷಣಾರ್ಥಿಗಳಿದ್ದು, ಒಳಾಂಗಣ, ಹೊರಾಂಗಣ ಹಾಗೂ ರೈಫಲ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ತರಬೇತಿಯ ಎಲ್ಲಾ ವಿಭಾಗದಲ್ಲಿ ಉತ್ತಮ ತರಬೇತಿ ನೀಡಿದ ಅಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ  ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News