ಕಡ್ಡಾಯ ಮತದಾನ ಜಾರಿ ಮಾಡಬೇಕು: ಸ್ಪೀಕರ್ ಕಾಗೇರಿ

Update: 2021-03-04 12:04 GMT

ಬೆಂಗಳೂರು, ಮಾ. 4: ‘ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವುದರಿಂದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಏರು ಮಟ್ಟದಲ್ಲಿ ತೆಗೆದುಕೊಂಡು ಹೋಗಬಹುದು. ಶೇಕಡವಾರು ಮತದಾನದಲ್ಲಿ ತೀವ್ರ ಕುಸಿತದ ಹಿನ್ನೆಲೆಯಲ್ಲಿ ಕಡ್ಡಾಯ ಮತದಾನ ಜಾರಿ ಮಾಡಬೇಕು' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ವಿಶೇಷ ಚರ್ಚೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸದಸ್ಯರ ಧರಣಿ ಗದ್ದಲದ ಮಧ್ಯೆ ಪ್ರಸ್ತಾವಿಕ ಭಾಷಣ ಮಾಡಿದ ಅವರು, ‘ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಶ್ರಮ, ಸಮಯ ಮತ್ತು ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ. ಮೂಲಸೌಕರ್ಯ, ಸಿಬ್ಬಂದಿ ರಕ್ಷಣಾ ವೆಚ್ಚ, ಮತ ಎಣಿಕೆ ಎಲ್ಲದರಲ್ಲೂ ದೇಶದ ಆರ್ಥಿಕತೆಯ ಹೊರೆ ಕಡಿತಗೊಳ್ಳಲಿದೆ' ಎಂದು ಹೇಳಿದರು.

‘ಒಂದೇ ಮತಪಟ್ಟಿ ರೂಪಿಸಿಕೊಳ್ಳುವ ಅದಕ್ಕೆ ಆಧಾರ್ ಅಳವಡಿಸುವ ಕೆಲಸ ನಡೆಯುತ್ತಿದೆ. ಏಕಕಾಲದಲ್ಲಿ ಚುನಾವಣೆಗಳಿಂದ ರಾಜ್ಯದ ರಾಜಕೀಯ ಪಕ್ಷಗಳ ಬಲಾಬಲಗಳು ಹಾಗೂ ಲೆಕ್ಕಾಚಾರ ಮತ್ತೆ ಮತ್ತೆ ಏರುಪೇರಾಗುವುದು ಮತ್ತು ಆದುದರಿಂದ ರಾಜ್ಯದ ಸ್ಥಿತಿಗತಿಗಳು ಬದಲಾಗಿ ಅತಂತ್ರತೆ ತಲೆದೋರುವ ಸನ್ನಿವೇಶ ಇರುವುದಿಲ್ಲ' ಎಂದು ಅವರು ತಿಳಿಸಿದರು.

‘ರಾಷ್ಟ್ರ ಮತ್ತು ರಾಜ್ಯದ ಚುನಾವಣಾ ವಿಷಯಗಳು ಬೇರೆ ಬೇರೆ ನಿಲುವುಗಳಿಗೆ ಮತದಾರರು ಪ್ರಬುದ್ಧರಾಗಿದ್ದಾರೆ. ಆದಾಗ್ಯೂ ಮಾಧ್ಯಮಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬಹುದು' ಎಂದ ಅವರು, ‘1951ರ ಜನಪ್ರತಿನಿಧಿ ಕಾಯ್ದೆ ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ. ಚುನಾವಣೆ ವಿಧಿ ವಿಧಾನಗಳು, ಅಪರಾಧ ಹಿನ್ನೆಲೆಯವರು ಸ್ಪರ್ಧಿಸುವ ಬಗ್ಗೆ ಮೊದಲಾದ ಸುಧಾರಣೆಗಳು ಈ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ. ಹಣ ಮತ್ತು ಜಾತಿ ಬಲದಿಂದ ಚುನಾವಣೆಗೆ ಸ್ಪರ್ಧಿಸುವ ಮತ್ತು ನಡೆಯುವ ಚುನಾವಣೆಗಳಿಗೆ ಸುಧಾರಣೆ ತರಬಹುದಾಗಿದೆ' ಎಂದು ಹೇಳಿದರು.

‘ರಾಜಕೀಯ ಇಚ್ಛಾಶಕ್ತಿ ಮತ್ತು ಸಹಮತದ ಅಗತ್ಯವಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷವೆಂದು ಮಾನ್ಯತೆ ಪಡೆದಿರುವವರ ಜತೆ ಚರ್ಚಿಸಬೇಕಿದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಮತ್ತು ಎಲ್ಲರ ಸಹಮತಿ ಅಗತ್ಯ' ಎಂದ ಅವರು, ‘ಬಹುಪಕ್ಷ ವ್ಯವಸ್ಥೆ, ಮೈತ್ರಿ ಸರಕಾರಗಳು ಮಧ್ಯಂತರ ಚುನಾವಣೆಗಳ ಈ ಕಾಲದಲ್ಲಿ ಚುನಾವಣೆಯಲ್ಲಿ ಏಕರೂಪತೆ ತರಲು ಬಯಸುವುದು ಒಂದು ದೊಡ್ಡ ಸವಾಲು. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರ ಸದಾ ಚುನಾವಣೆ ಗುಂಗಿನಲ್ಲಿರುವುದು ಮತ್ತೊಂದು ಸಮಸ್ಯೆ. ಈ ಸವಾಲು ಮತ್ತು ಸಮಸ್ಯೆಗಳ ನಡುವೆ ಚುನಾವಣೆ ವ್ಯವಸ್ಥೆ ಸುಧಾರಣೆಗೆ ವ್ಯಾಪಕ ಚರ್ಚೆಯಾಗಬೇಕು' ಎಂದು ನುಡಿದರು.

‘ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವನೆಯ ಎಲ್ಲ ಮಗ್ಗಲುಗಳ ಮೇಲೆ ಬೆಳಕು ಚೆಲ್ಲುವಂತಹ ವ್ಯಾಪಕ ಸಾರ್ವಜನಿಕ ಚರ್ಚೆ ನಡೆಯಬೇಕು. ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಂಸತ್‍ನ ಉಭಯ ಸದನಗಳಲ್ಲೂ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಅವರು ತಿಳಿಸಿದರು.

‘ಒಂದು ರಾಷ್ಟ್ರ ಒಂದು ಚುನಾವಣೆ ಪದ್ಧತಿಯು ಮುಖ್ಯವಾದ ಪ್ರಶ್ನೆಯಲ್ಲ. ಆದರೆ, ಈ ವಿಷಯವನ್ನು ಸುದೀರ್ಘವಾಗಿ ಚರ್ಚಿಸಿ ದೇಶದ ಹಿತದೃಷ್ಟಿಯಿಂದ ಮುಂಬರುವ ರಾಷ್ಟ್ರೀಯ ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಪರಿಣಾಮಕಾರಿಯಾಗಿ ಹೇಗೆ ಅನುಷ್ಠಾನಗೊಳಿಸಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲಿ, ಉತ್ತಮ ಸಲಹೆ-ಸೂಚನೆಗಳನ್ನು ಪರಿಗಣಿಸಿ ಕೇಂದ್ರ ಸರಕಾರ ಸಕಾರಾತ್ಮಕವಾಗಿ ತೀರ್ಮಾನಕ್ಕೆ ಬರಲು ಅನುಕೂಲವಾಗಲಿದೆ'
-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News