ನಾವು ಆರೆಸ್ಸೆಸ್ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-03-04 14:09 GMT

ಬೆಂಗಳೂರು, ಮಾ.4: ಈ ದೇಶದ ಪ್ರಧಾನಿಯೆ ಆರೆಸ್ಸೆಸ್ ನವರು. ಹೌದು ನಾವು ಆರೆಸ್ಸೆಸ್ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ಆರೆಸ್ಸೆಸ್ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶಭರಿತವಾಗಿ ಮಾತನಾಡಿದರು.

ಗುರುವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕವೂ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದಾಗ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ನೀವು(ಕಾಂಗ್ರೆಸ್) ನೆಲಕಚ್ಚಿದ್ದೀರಾ. ಇಲ್ಲಿ ಎಲ್ಲೋ 60 ಜನ ಇದ್ದೀರಿ ಅಷ್ಟೇ. ಅಷ್ಟಕ್ಕೇ ಇಷ್ಟು ಕಿರುಚುತ್ತಿದ್ದೀರಾ ಎಂದು ಕಿಡಿಗಾರಿದರು.

ನಿಮಗೆ ಏನು ಅನ್ಯಾಯ ಆಗಿದೆ? ರಾಜ್ಯದ ಜನತೆ ನೋಡುತ್ತಿದ್ದಾರೆ ನೀವು ಏನು ಮಾಡುತ್ತಿದ್ದೀರಾ ಎಂದು. ಯಾವುದು ಕಾನೂನು ಬಾಹಿರ ಆದೇಶ. ಸ್ಪೀಕರ್‍ಗೆ ಕ್ರಮ ಕೈಗೊಳ್ಳುವ ಅಧಿಕಾರ ಇಲ್ಲವೇ? ಬಟ್ಟೆ ಬಿಚ್ಚಿಕೊಂಡು ನಿಂತರೆ ಸುಮ್ನೆ ಇರಬೇಕಾ? ಹೋಗ್ರೀರೀ, ನೀವು ವಿರೋಧ ಪಕ್ಷದ ನಾಯಕರು ಇದಕ್ಕೆ ಬೆಂಬಲ ಕೊಡುವುದು ನಾಚಿಕೆಗೇಡಿನ ಸಂಗತಿ. ಇದು ಬೇಜವಾಬ್ದಾರಿಯ ಪರಮಾವಧಿ ಎಂದು ಮುಖ್ಯಮಂತ್ರಿ ಕಿಡಿಗಾರಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್, ಅಶಿಸ್ತನ್ನು ರಾಜ್ಯದ ಜನತೆ ಹಾಗೂ ಸಭಾಧ್ಯಕ್ಷನಾಗಿ ನಾನು ಒಪ್ಪಲು ಸಾಧ್ಯವಿಲ್ಲ. ಅಶಿಸ್ತು ಬೆಂಬಲಿಸಬೇಡಿ, ನಾವೆಲ್ಲರೂ ಸೇರಿ ಸದನದ ಮೌಲ್ಯ ಹೆಚ್ಚಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರ ಪೈಕಿ ಯಾರೊ ಒಬ್ಬರು ಆರೆಸ್ಸೆಸ್ ಅನ್ನು ಉಲ್ಲೇಖಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಸ್ಪೀಕರ್, ಆರೆಸೆಸ್ಸ್ ಅನ್ನು ಇಲ್ಲಿ ಯಾಕೆ ಚರ್ಚೆಗೆ ತರುತ್ತೀರಾ? ನಮ್ಮ ವಿಷಯಗಳ ಬಗ್ಗೆ ಚರ್ಚೆ ಮಾಡೋಣ ಎಂದರು. ಅದಕ್ಕೆ ಸಿಎಂ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಬಳಿಕ ಸ್ಪೀಕರ್, ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸೇರುವಂತೆ ಮುಂದೂಡಿದರು.

ಸದನದ ಗೌರವಕ್ಕೆ ಚ್ಯುತಿ ಬರುವಂತೆ ಯಾವ ಸದಸ್ಯರೂ ಮಾತನಾಡುವಂತಿಲ್ಲ. ಸ್ಪೀಕರ್ ಆಗಿ ಈ ಸ್ಥಾನದಿಂದ ನಾನು ರೂಲಿಂಗ್ ನೀಡಿದ ನಂತರ ಅದರ ಬಗ್ಗೆ ಮಾತನಾಡಲು ಅವಕಾಶವಿಲ್ಲ. ಈ ವಿಚಾರದಲ್ಲಿ ಯಾವ ರೂಲಿಂಗ್ ನೀಡಬೇಕೋ ಅದನ್ನು ನೀಡಲಾಗಿದೆ. ಆದುದರಿಂದ, ಸದಸ್ಯರು ಧರಣಿ ಕೈ ಬಿಟ್ಟು ತಮ್ಮ ತಮ್ಮ ಸ್ಥಾನಕ್ಕೆ ಹೋಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

ಮಧ್ಯಾಹ್ನ 3.35ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಶಾಸಕ ಸಂಗಮೇಶ್ ಅವರನ್ನು ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಸ್ಪೀಕರ್‍ಗೆ ಆಗ್ರಹಿಸಿ ಧರಣಿ ಆರಂಭಿಸಿದರು. ಈ ಮಧ್ಯೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಲಿಂಗಾಯತರ ಮೀಸಲಾತಿ ಬೇಡಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಸ್ಪೀಕರ್ ಪ್ರತಿಕ್ರಿಯಿಸಿ ಸೋಮವಾರದ ನಂತರ ಅವಕಾಶ ಕಲ್ಪಿಸುವುದಾಗಿ ಹೇಳಿದರು. ಕಾಂಗ್ರೆಸ್ ಸದಸ್ಯರ ಧರಣಿಗೆ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನಿತರರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News