ಆಡಳಿತ ಸುಧಾರಣೆಗೆ ‘ಒಂದು ರಾಷ್ಟ್ರ-ಒಂದು ಚುನಾವಣೆ' ಮಹತ್ವದ ಹೆಜ್ಜೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-03-04 14:22 GMT

ಬೆಂಗಳೂರು, ಮಾ. 4: ‘ಆಡಳಿತ ಸುಧಾರಣೆ ದಿಕ್ಕನಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ಒಂದು ಮಹತ್ವದ ಹೆಜ್ಜೆ. ಚುನಾವಣೆಯ ಯಶಸ್ಸು ಹಣಬಲದ ಮೇಲೆ ಅವಲಂಬಿತವಾಗದೆ, ವ್ಯಕ್ತಿತ್ವ, ಚಾರಿತ್ರ್ಯ ಹಾಗೂ ಅಭ್ಯರ್ಥಿಗಳ ವರ್ಚಸ್ಸು ಹಾಗೂ ವಿಶ್ವಾಸಾರ್ಹತೆಯನ್ನು ಅವಲಂಬಿಸುವಂತಾಗುತ್ತದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಮಾತನಾಡಿದ ಅವರು, ‘ಎಲ್ಲ್ಲ ರಾಜಕೀಯ ಪಕ್ಷಗಳು, ರಾಜ್ಯ ಸರಕಾರಗಳು ಸಂಸತ್ತಿನ ಉಭಯ ಸದನಗಳಲ್ಲಿ ಹಾಗೂ ವಿಧಾನಮಂಡಲಗಳಲ್ಲಿ ಚಿಂತನ-ಮಂಥನ ನಡೆಸಿದರೆ ಮಾತ್ರ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ' ಎಂದರು.

‘ಈ ನಿಯಮ ಜಾರಿಗೆ ಬಂದರೆ ಕೆಲವು ರಾಜಕೀಯ ಹೊಂದಾಣಿಕೆ ಅನಿವಾರ್ಯವಾಗುವುದು. ಲೋಕಸಭೆ-ವಿಧಾನಸಭೆಗಳ ಅವಧಿಯಲ್ಲಿ ಏರಿಳಿತಗಳಾಗಬಹುದು. ಇವೆಲ್ಲ ಪ್ರಾರಂಭಿಕ ಅಡಚಣೆಗಳಾಗಿದ್ದು, ಇವೆಲ್ಲವನ್ನೂ ಮೀರಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ' ಎಂದ ಅವರು, ‘ಒಂದು ರಾಷ್ಟ್ರ-ಒಂದು ಚುನಾವಣೆ ಜಾರಿಗೆ ತರುವುದು ದೊಡ್ಡ ಸವಾಲು ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಸ್ತೃತ ಚರ್ಚೆ ಮೂಲಕ ಸಾಧಕ-ಬಾಧಕಗಳನ್ನು ತಿಳಿದರೆ ಸ್ಪಷ್ಟತೆ ಮೂಡಲಿದೆ' ಎಂದು ಹೇಳಿದರು. 

‘ಏಕಕಾಲದಲ್ಲಿ ಚುನಾವಣೆಗಳು ನಡೆದಲ್ಲಿ ಆಡಳಿತ ಯಂತ್ರದ ಸುಗಮ-ದಕ್ಷ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ. ಕಾಲಕಾಲಕ್ಕೆ ಖಾಲಿಯಾಗುವ ಶಾಸಕರು, ಮತ್ತಿತರ ಸ್ಥಾನ ಗಳಿಸಬೇಕು. ಉಪಚುನಾವಣೆ ಇಲ್ಲದೆ ತುಂಬುವ ವ್ಯವಸ್ಥೆಗೆ ನಾಂದಿ ಹಾಡಬೇಕಾಗಿದೆ' ಎಂದ ಅವರು, ‘ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ಮತದಾರರ ಹಿತಕ್ಕೆ ಯಾವುದೇ ಧಕ್ಕೆಯಾಗದಂತೆ ಚುನಾವಣೆ ನಡೆಸುವುದು ಮುಖ್ಯ' ಎಂದರು.

‘ವೈವಿಧ್ಯತೆಯಲ್ಲಿ ಏಕತೆ ಸಾಧಿಸಿರುವ ನಮಗೆ ಚುನಾವಣೆಯಲ್ಲಿ ಏಕರೂಪ ಜಾರಿಗೆ ತರುವುದು ಕಷ್ಟವೇನಲ್ಲ. ಆ ನಿಟ್ಟಿನಲ್ಲಿ ಆಳವಾದ ಅಧ್ಯಯನ ಮತ್ತು ಸಮಾಲೋಚನೆ, ಸವಿಸ್ತಾರವಾದ ಚರ್ಚೆ ನಡೆಯಬೇಕು. ವಿಧಾನಮಂಡಲವು ಸಂಕ್ಷಿಪ್ತ ನಿರ್ಣಯ ಕೈಗೊಂಡು ಶಿಫಾರಸು ಮಾಡಲಿ' ಎಂದು ಯಡಿಯೂರಪ್ಪ ಇದೇ ವೇಳೆ ಆಶಯವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News