ಕಾಂಗ್ರೆಸ್ ಶಾಸಕ ಸಂಗಮೇಶ್ ಏನು ಅಪರಾಧ ಮಾಡಿದ್ದಾರೆ: ಸಿದ್ದರಾಮಯ್ಯ

Update: 2021-03-04 14:25 GMT
File Photo

ಬೆಂಗಳೂರು, ಮಾ.4: ಕಾಂಗ್ರೆಸ್ ಶಾಸಕ ಸಂಗಮೇಶ್ ಏನು ಅಪರಾಧ ಮಾಡಿದ್ದಾರೆ. ಈ ಸದನದಲ್ಲಿ ಬೆತ್ತಲೆ ಆಗಿರುವುದನ್ನು ನೋಡಿದ್ದೇವೆ. ಆಗ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ಸಂಗಮೇಶ್ ಕುಟುಂಬದ 7 ಸದಸ್ಯರ ವಿರುದ್ಧ 307 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದರು.

ಈ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್, ಅವರಿಗೆ ಅನ್ಯಾಯವಾಗಿದ್ದರೆ ನನ್ನ ಸಮಯ ಕೇಳಿ ಪ್ರತ್ಯೇಕವಾಗಿ ಚರ್ಚೆ ನಡೆಸಬಹುದಿತ್ತು. ಆದರೆ, ಇಲ್ಲಿ ಅವರು ನಡೆದುಕೊಂಡು ರೀತಿಯನ್ನು ಯಾವುದೆ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.

ಪೀಠಕ್ಕೆ, ಸದನಕ್ಕೆ ಅಗೌರವ ತೋರಿದ್ದರೆ ಕ್ರಮ ಕೈಗೊಳ್ಳಲಿ. ಆದರೆ, ಇಲ್ಲಿ ವಿಷಯ ಚರ್ಚೆನೇ ಆಗದೆ, ಕ್ರಮ ಕೈಗೊಂಡರೆ ಇದು ಪ್ರಜಾಪ್ರಭುತ್ವವೇ? ಸಂಗಮೇಶ್ ಅವರನ್ನು ಅಮಾನತ್ತು ಮಾಡಿರುವ ಆದೇಶವನ್ನು ಹಿಂಪಡೆಯಬೇಕು. ನಿಮ್ಮ ಮೇಲೆ ನಮಗೆ ವಿಶ್ವಾಸ ಹೋಗಿದೆ. ನೀವು ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಂಡರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾನೂನು ಬಾಹಿರವಾಗಿ ಮಾಡಿರುವ ಅಮಾನತ್ತನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ನಮ್ಮನ್ನೆಲ್ಲ ಅಮಾನತ್ತು ಮಾಡಿ, ಇತಿಹಾಸದಲ್ಲಿ ದಾಖಲು ಆಗಲಿ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್, ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯದ ಕುರಿತು ಚರ್ಚಿಸಲು ನಿಮ್ಮ ಪಕ್ಷದ ವಿಪ್ 19 ಜನ ಸದಸ್ಯರ ಹೆಸರುಗಳ ಪಟ್ಟಿ ನೀಡಿದ್ದಾರೆ.  ಈ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಿಮ್ಮ ನಿಲುವಾಗಿತ್ತು. ಆದರೆ, ಸಂಗಮೇಶ್ ಇಲ್ಲಿ ನಡೆದುಕೊಂಡ ರೀತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಪ್ರತಿಭಟಿಸಲು ಇದು ಸಮಯ, ಸಂದರ್ಭ ಅಲ್ಲ. ಬೇಜವಾಬ್ದಾರಿ ಆಗಿ ಅವರು ನಡೆದುಕೊಂಡ ರೀತಿಯಲ್ಲಿ ಅವರನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು. ಅಮಾನತು ಆದೇಶ ವಾಪಸ್ ತೆಗೆದುಕೊಳ್ಳಬೇಕು, ಇಲ್ಲವೇ ನಮ್ಮನ್ನೆಲ್ಲ ಅಮಾನತ್ತು ಮಾಡಿ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್‍ಗೆ ದೇಶದಲ್ಲಿ ಸುಧಾರಣೆ ಬೇಡ, ಇವರಿಗೆ ಈ ಸದನವನ್ನು ಹೈಜಾಕ್ ಮಾಡಲು ಬಿಡಬಾರದು. ಧರಣಿ ಮಾಡಲು ಬಿಡಬಾರದು. ಆಡಳಿತ ಪಕ್ಷದ ಶಾಸಕರಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ನೀಡಬೇಕು. ನಮ್ಮ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಎಂದು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಸದನದಲ್ಲಿ ಕಾಂಗ್ರೆಸ್ ಸದಸ್ಯರು ಪ್ರದರ್ಶಿಸುತ್ತಿರುವ ಅಶಿಸ್ತನ್ನು ದೇಶದ ಜನ ನೋಡುತ್ತಿದ್ದಾರೆ. ಅಮಾನತ್ತು ಆದೇಶವನ್ನು ಹಿಂಪಡೆಯಬಾರದು. ಶಿಸ್ತು ಬರಬೇಕಾದರೆ ಇಂತಹ ಕಠಿಣ ತೀರ್ಮಾನಗಳನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ, 4.30ರವರೆಗೆ ಸದನವನ್ನು ಮುಂದೂಡಿದರು. ಪುನಃ 4.50ಕ್ಕೆ ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು. ಜೆಡಿಎಸ್ ಸದಸ್ಯ ಎಚ್.ಕೆ.ಕುಮಾರಸ್ವಾಮಿ, ಮಧ್ಯಪ್ರವೇಶಿಸಿ ನಾವು ಚರ್ಚೆಗೆ ಸಿದ್ಧವಿದ್ದು, ನಮಗೆ ಅವಕಾಶ ಮಾಡಿಕೊಡಿ ಎಂದರು. ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಮಧ್ಯಪ್ರವೇಶಿಸಿ, ನಮ್ಮದು ಪ್ರಾದೇಶಿಕ ಪಕ್ಷ. ಇಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ಆದುದರಿಂದ, ಸಭಾತ್ಯಾಗ ಮಾಡುತ್ತಿರುವುದಾಗಿ ಹೇಳಿ, ಜೆಡಿಎಸ್ ಸದಸ್ಯರೆಲ್ಲ ಸದನದಿಂದ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News