‘ಒಂದು ದೇಶ, ಒಂದು ಚುನಾವಣೆ’ ಆರೆಸ್ಸೆಸ್ ಅಜೆಂಡಾ: ಸಿದ್ದರಾಮಯ್ಯ

Update: 2021-03-04 14:51 GMT

ಬೆಂಗಳೂರು, ಮಾ.4: ಒಂದು ದೇಶ ಒಂದು ಚುನಾವಣೆ ಎಂಬುದು ಆರೆಸ್ಸೆಸ್‍ನ ಅಜೆಂಡಾ. ವಾಸ್ತವದಲ್ಲಿ ಇದು ಒಂದು ದೇಶ, ಒಂದು ಚುನಾವಣೆ ಅಲ್ಲ ‘ಒನ್ ನೇಷನ್, ಒನ್ ಲೀಡರ್’(ಒಂದು ದೇಶ, ಒಬ್ಬ ನಾಯಕ) ಆಗಿದೆ. ಇದರ ಬದಲು ರಾಜ್ಯ ಸರಕಾರ ಚುನಾವಣಾ ವ್ಯವಸ್ಥೆಯಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಚರ್ಚಿಸುವುದಾದರೆ, ನಾವು ನಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಡೆಯುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಕೇಂದ್ರ ಸರಕಾರಕ್ಕೆ ಸಂಬಂಧಿಸಿದವು. ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿರುವುದು ಕೂಡ ಕೇಂದ್ರ ಸರಕಾರ. ಹೀಗಿರುವಾಗ ವಿಧಾನ ಮಂಡಲ ಅಧಿವೇಶನದಲ್ಲಿ ‘ಒಂದು ದೇಶ ಒಂದು ಚುನಾವಣೆ' ಎಂಬ ವಿಚಾರವನ್ನು ಚರ್ಚಿಸುವುದರಿಂದ ಆಗುವ ಉಪಯೋಗ ಏನು? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಕೇವಲ ಪ್ರಚಾರದ ದೃಷ್ಟಿಯಿಂದ ‘ಒಂದು ದೇಶ ಒಂದು ಚುನಾವಣೆ' ಎಂಬ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡಿದ್ದಾರೆ. ನಿಯಮಾವಳಿಗಳ ಪ್ರಕಾರ ಈ ವಿಷಯದ ಚರ್ಚೆಗೆ ಅವಕಾಶವಿಲ್ಲ, ಹೀಗಾಗಿ ನಾವು ವಿರೋಧ ಮಾಡಿದ್ದೇವೆಯೇ ಹೊರತು ಚರ್ಚೆ ನಡೆಸಲಾಗದೆ ಅಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.

ಭದ್ರಾವತಿ ಶಾಸಕ ಸಂಗಮೇಶ್ ಅವರು ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವಂತೆ ವರ್ತಿಸಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಆಡಳಿತ ಪಕ್ಷದವರು ನಡೆಸುತ್ತಿರುವ ಅನ್ಯಾಯ, ದಬ್ಬಾಳಿಕೆಗಳಿಂದ ನೊಂದು ಸದನದಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ಪುತ್ರ ಸಂಸದ ರಾಘವೇಂದ್ರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಂಗಮೇಶ್ ಮತ್ತು ಅವರ ಕುಟುಂಬದವರ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ಕೊಲೆ ಯತ್ನದ ಮೊಕದ್ದಮೆಯನ್ನು ದಾಖಲಿಸುವಂತೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದ ಶಾಸಕ ಸಂಗಮೇಶ್ ಅವರನ್ನು ಒಂದು ವಾರದ ಕಾಲ ಸದನದಿಂದ ವಜಾ ಮಾಡಿರುವ ಸ್ಪೀಕರ್ ಅವರ ಆದೇಶವನ್ನು ನಾನು ಖಂಡಿಸುತ್ತೇನೆ. ಸಂಗಮೇಶ್ ಅವರಿಗಾಗಲೀ, ಪ್ರತಿಪಕ್ಷದ ನಾಯಕನಾದ ನನಗಾಗಲೀ ಮಾತನಾಡಲು ಅವಕಾಶ ನೀಡದೆ ವಿಧಾನ ಸಭಾಧ್ಯಕ್ಷರು ಏಕಪಕ್ಷೀಯವಾಗಿ ಕೈಗೊಂಡಿರುವ ನಿರ್ಣಯ ಅಸಂವಿಧಾನಿಕ. ಸಂಗಮೇಶ್ ಅವರ ಮೇಲೆ ದಾಖಲಿಸಲಾಗಿರುವ ಸುಳ್ಳು ಮೊಕದ್ದಮೆಯನ್ನು ವಾಪಾಸು ಪಡೆದು ಸರಕಾರ ಕ್ಷಮಾಪಣೆ ಕೇಳಬೇಕು ಮತ್ತು ಅವರನ್ನು ಸದನದಿಂದ ವಜಾಗೊಳಿಸಿರುವ ನಿರ್ಣಯವನ್ನು ಕೂಡ ಹಿಂಪಡೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News