ಶಾಸಕ ಸಂಗಮೇಶ್ ಅಮಾನತು ವಿರೋಧಿಸಿ ಸದನದಲ್ಲಿ ಕಾಂಗ್ರೆಸ್ ಧರಣಿ: ಕಲಾಪ ಮುಂದೂಡಿದ ಸ್ಪೀಕರ್

Update: 2021-03-05 06:05 GMT

ಬೆಂಗಳೂರು, ಮಾ,5: ಕಾಂಗ್ರೆಸ್ ಸದಸ್ಯ ಬಿ.ಕೆ.ಸಂಗಮೇಶ್ ಅವರನ್ನು ಒಂದು ವಾರಗಳ ಕಾಲ ವಿಧಾನಸಭೆಯಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಶುಕ್ರವಾರವೂ ಕೂಡಾ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ವಿಧಾನಸಭೆಯ ಕಲಾಪದಲ್ಲಿ ಅಂಗಿ(ಶರ್ಟ್) ಬಿಚ್ಚಿ, ಅಸಭ್ಯವಾಗಿ ವರ್ತಿಸಿ, ಸ್ಪೀಕರ್ ಪೀಠ ಮತ್ತು ಸದನಕ್ಕೆ ಅಗೌರವ ತೋರಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಬಿ.ಕೆ.ಸಂಗಮೇಶ್ ಅವರನ್ನು ಒಂದು ವಾರಗಳ ಕಾಲ ವಿಧಾನಸಭೆಯಿಂದ ಅಮಾನತು ಮಾಡಲಾಗಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದಲ್ಲದೇ, ಧಿಕ್ಕಾರದ ಘೋಷಣೆ ಕೂಗಿದರು.

ಈ ಸಂದರ್ಭ ಸ್ಪೀಕರ್ ಕಾಗೇರಿ ಸದಸ್ಯರಲ್ಲಿ ಧರಣಿ ಕೈಬಿಟ್ಟು ತಮ್ಮ ಖುರ್ಚಿಗೆ ಮರಳಲು ಸೂಚನೆ ನೀಡಿದರು. ಆದರೆ ಇದನ್ನು ಕೇಳದ ಸದಸ್ಯರು ತಮ್ಮ ಧರಣಿ ಮುಂದುವರಿಸಿದರು. ಕೊನೆಗೆ ಸ್ಪೀಕರ್ ಸದನವನನ್ನು 12 ಗಂಟೆಗೆ ಮುಂದೂಡಿದರು.

ಗುರುವಾರ ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ' ವಿಷಯ ಚರ್ಚೆಗೆ ವಿರೋಧಿಸಿ ಕಾಂಗ್ರೆಸ್ ಸದಸ್ಯರ ಧರಣಿಯಿಂದ ಕೆಲಕಾಲ ಮುಂದೂಡಲಾಗಿದ್ದ ಸದನ ಮಧ್ಯಾಹ್ನ 1.20ಕ್ಕೆ ಪುನಃ ಸಮಾವೇಶಗೊಂಡಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾಂಗ್ರೆಸ್ ಸದಸ್ಯ ಸಂಗಮೇಶ್ ಅವರ ಅಮಾನತು ತೀರ್ಮಾನವನ್ನು ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News