ಇದೇ ನನ್ನ ಕೊನೆಯ ಚುನಾವಣೆ, ನನಗೆ ಟಿಕೆಟ್ ಕೊಡಿ: ಬಿಜೆಪಿ ವರಿಷ್ಠರಿಗೆ ಪ್ರಮೋದ್ ಮುತಾಲಿಕ್ ಮನವಿ

Update: 2021-03-07 15:40 GMT

ಬೆಂಗಳೂರು, ಮಾ. 7: ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದು, ಟಿಕೆಟ್‍ಗೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಂಬಂಧ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ದೊರೆಯುವ ವಿಶ್ವಾಸವಿದೆ. ಈಗಾಗಲೇ ನನಗೆ 66 ವರ್ಷ ವಯಸ್ಸಾಗಿದೆ, ಇದೇ ನನ್ನ ಕೊನೆ ಚುನಾವಣೆ. ಹೀಗಾಗಿ ನನಗೆ ಅವಕಾಶ ಕೊಡಿ ಎಂದು ಕೋರಿದ್ದೇನೆ ಎಂದರು.

ಇನ್ನೂ ಮೂರು ವರ್ಷ ಅವಧಿ ಇದ್ದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದ ಪ್ರಮೋದ್ ಮುತಾಲಿಕ್, ಒಂದು ವೇಳೆ ಟಿಕೆಟ್ ಸಿಗದೆ ಸುರೇಶ್ ಅಂಗಡಿಯವರ ಕುಟುಂಬದವರಿಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News