ಕರ್ನಾಟಕ ಬಜೆಟ್ 2021: ರಾಜ್ಯ ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರ ಪ್ರತಿಕ್ರಿಯೆ ಏನು ?

Update: 2021-03-08 16:30 GMT

ಬೆಂಗಳೂರು, ಮಾ.8: ಕೊರೋನ ಸಂಕಷ್ಟ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ಇಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2021-22ನೆ ಸಾಲಿನ ಆಯವ್ಯಯ ಮಂಡಿಸಿದ್ದಾರೆ.

ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ರಾಜ್ಯ ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಯಡಿಯೂರಪ್ಪ ಮಂಡಿಸಿದ ಬಜೆಟ್ ಅತ್ಯುತ್ತಮವಾಗಿದ್ದು, ಯಾವುದೇ ಹೊಸ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹೊರಿಸದೆ ಪ್ರಗತಿಗೆ ಇಂಬು ಕೊಡುವ ಸಮತೋಲಿತ ಬಜೆಟ್‍ಅನ್ನು ಕೊಟ್ಟಿದ್ದಾರೆ. ಕೃಷಿ, ನೀರಾವರಿ, ಮಹಿಳೆ, ಸಮಾಜ ಕಲ್ಯಾಣ, ಹಿಂ.ವರ್ಗ, ಮೂಲಸೌಕರ್ಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಅಸಮತೋಲನ ನಿವಾರಣೆಗೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ನೀಡಿರುವುದು ಗಮನಾರ್ಹ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1,500 ಕೋಟಿ ರೂ, ನೀರಾವರಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಾಗಿದೆ.

-ಬಸವರಾಜ ಬೊಮ್ಮಾಯಿ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ

ಶಿಕ್ಷಣ ಗಟ್ಟಿಗೊಳಿಸುವ ಬಜೆಟ್ ಅಲ್ಲ: ಕೋವಿಡ್-19ರ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಶಾಲಾ ಶಿಕ್ಷಣವನ್ನು ಹೊರತರುವ ಮತ್ತು ಕಲಿಕೆಯನ್ನು ಗಟ್ಟಿಗೊಳಿಸುವ ಯಾವುದೇ ಪ್ರಸ್ತಾವಗಳು ರಾಜ್ಯ ಆಯವ್ಯಯದಲ್ಲಿ ಇಲ್ಲ. ಇದನ್ನು ಗಮನಿಸಿದರೆ, ಸಾರ್ವಜನಿಕ ಶಾಲಾ ಶಿಕ್ಷಣವನ್ನು ಬಲವರ್ಧನೆಗೊಳಿಸುವುದು ನಿಜವಾಗಿಯೂ ರಾಜ್ಯ ಸರಕಾರಕ್ಕೆ ಆದ್ಯತೆಯ ಕ್ಷೇತ್ರವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆಯವ್ಯಯದಲ್ಲಿ ಗಣನೀಯ ಪ್ರಮಾಣದ ಆರ್ಥಿಕ ಸಂಪನ್ಮೂಲಗಳನ್ನು ಹಂಚಿಕೆ ಮಾಡದೆ ಎನ್‍ಇಪಿ(ನೂತನ ಶಿಕ್ಷಣ ನೀತಿ)ಯನ್ನು ಅನುಷ್ಠಾನಗೊಳಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ವಿಫಲವಾಗಿದೆ.

-ನಿರಂಜನಾರಾಧ್ಯ, ಶಿಕ್ಷಣ ತಜ್ಞ

ನೀರಾವರಿ ನಿರ್ಲಕ್ಷಿಸಿದ ನಿರಾಶಾದಾಯಕ ಬಜೆಟ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ ಬಜೆಟ್‍ನಲ್ಲಿ ಯಾವುದೇ ಯೋಜನೆ, ಘೋಷಣೆ ಕಂಡುಬಂದಿಲ್ಲ. ಬಕಾಸುರನ ಹೊಟ್ಟೆಗೆ ಹಿಡಿ ಅನ್ನ ಹಾಕಿದಂತಾಗಿದೆ. ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ, ಇದು ನಿರಾಶಾದಾಯಕ ಬಜೆಟ್ ಆಗಿದೆ.

-ಎಸ್.ಆರ್.ಪಾಟೀಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ  

ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್: ಯಾವುದೇ ನಿರ್ದಿಷ್ಟ ಗುರಿ, ಕಾರಣ ಇಲ್ಲದಿರುವ ಬಜೆಟ್‍ನ್ನು ಸಿಎಂ ಯಡಿಯೂರಪ್ಪ ಮಂಡಿಸಿದ್ದಾರೆ. ಇದು ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್ ಆಗಿದೆ. ಸಿಎಂ ಬಿಎಸ್‍ವೈ 71 ಸಾವಿರ ಕೋಟಿ ಸಾಲ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಅಂಬೇಡ್ಕರ್, ಜಗಜೀವನ್ ಸೇರಿದಂತೆ ಕೆಲ ಕಾರ್ಪೋರೇಷನ್‍ಗಳಿಗೆ 500 ಕೋಟಿ ರೂ. ನೀಡಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ಘೋಷಿಸಬೇಕು.’

-ಡಾ.ಜಿ.ಪರಮೇಶ್ವರ್, ಮಾಜಿ ಉಪ ಮುಖ್ಯಮಂತ್ರಿ

ಮೇಲ್ವರ್ಗದವರನ್ನು ಮೆಚ್ಚಿಸುವ ಬಜೆಟ್: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಹಿತ ವಿವಿಧ ಸಮುದಾಯಗಳ ಒಟ್ಟು 16 ನಿಗಮಗಳಿಗೆ 500 ಕೋಟಿ ರೂ.ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ 500 ಕೋಟಿ ರೂ.ನೀಡುವ ಮೂಲಕ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ವಂಚನೆ ಮಾಡಿದ್ದಾರೆ. ಶೇ.22ರಷ್ಟಿರುವ ಎಸ್ಸಿ-ಎಸ್ಟಿಗಳು, ಶೇ.27ರಷ್ಟಿರುವ ಹಿಂದುಳಿದ ವರ್ಗಕ್ಕೆ ಈ ಬಜೆಟ್ ಮಾರಕ. ಮಠಾಧಿಪತಿಗಳು, ಮೇಲ್ವರ್ಗದವರನ್ನು ಮೆಚ್ಚಿಸುವ ಬಜೆಟ್ ಇದಾಗಿದೆ.

-ಲಕ್ಷ್ಮಿನಾರಾಯಣ ನಾಗವಾರ, ಸಂಚಾಲಕ ದಲಿತ ಸಂಘರ್ಷ ಸಮಿತಿ

ನೌಕರ ವಿರೋಧಿ ಬಜೆಟ್: ಕೊರೋನದಿಂದ ಉದ್ಯೋಗ ನಷ್ಟ ಮತ್ತು ಆದಾಯ ಕಳೆದುಕೊಳ್ಳುವ ಮೂಲಕ ಸಣ್ಣ ಕೈಗಾರಿಕೆಗಳು, ಅಸಂಘಟಿತ ವಲಯ ಮತ್ತು ಉತ್ಪಾದನಾ ವಲಯದ ಕಾರ್ಮಿಕರು ತತ್ತರಿಸಿಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಯವ್ಯಯವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಜನತೆಯಲ್ಲಿ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ವಿತ್ತೀಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಬೆಲೆ ಏರಿಕೆಯ ಬಾಧೆ ಇಳಿಸುವ, ಅಸಂಘಟಿತ ವಲಯ ಮತ್ತು ಕಾರ್ಮಿಕರಿಗೆ ಸಾಂತ್ವನ ನೀಡಲು ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಕ್ರಮಗಳನ್ನು ಕೈಗೊಳ್ಳದೆ, ರಾಜ್ಯ ಸರಕಾರ ಕೋವಿಡ್ ನೆಪವೊಡ್ಡಿ ಜನಸಾಮಾನ್ಯರು ಮತ್ತು ನೌಕರರ ಸಂಕಷ್ಟಗಳಿಗೆ ಆಯವ್ಯಯದಲ್ಲಿ ಯಾವುದೇ ಪರಿಹಾರ ಕ್ರಮಗಳನ್ನು ನೀಡಿಲ್ಲ. 

-ಎನ್.ಇ.ನಟರಾಜ್, ಅಧ್ಯಕ್ಷ ಅಖಿಲ ಕರ್ನಾಟಕ ಸರಕಾರಿ ನೌಕರರ ಒಕ್ಕೂಟ

ಸ್ಪಷ್ಟ ಸಂದೇಶ ನೀಡಿದ್ದಾರೆ: ಸಿಎಂ ಬಿಎಸ್‍ವೈ ಎಂಟನೆ ಬಾರಿಗೆ ಮಂಡಿಸಿರುವ ಬಜೆಟ್‍ನಲ್ಲಿ ಮಹಿಳಾ ಉದ್ಯಮಿಗಳು ಹಾಗೂ ಎರಡನೆ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಸ್ಪಷ್ಟ ದೂರದರ್ಶಿತ್ವ ಮತ್ತು ಮಾರ್ಗದರ್ಶಿಗಳನ್ನು ನೀಡಿದ್ದಾರೆ. ಜಾಗತಿಕ ಹೂಡಿಕೆದಾರರ ಸಮ್ಮೇಳನ ಆಯೋಜನೆ ಮತ್ತು ಕೃಷಿ ಭೂಮಿಯನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಭೂ ಕಂದಾಯ ಅಧಿನಿಯಮ ತಿದ್ದುಪಡಿಯ ಭರವಸೆ ನೀಡುವ ಮೂಲಕ ರಾಜ್ಯ ಕೈಗಾರಿಕಾಭಿವೃದ್ದಿಗೆ ಸಜ್ಜಾಗಿದೆ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.

-ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ

ಎಲ್ಲ ಕ್ಷೇತ್ರಕ್ಕೂ ನ್ಯಾಯ: ಕೋವಿಡ್ ಸಹಿತ ಹಲವು ಸವಾಲುಗಳ ನಡುವೆಯೂ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡಿಸಿರುವ ಬಜೆಟ್‍ನಲ್ಲಿ ಎಲ್ಲ ಕ್ಷೇತ್ರಕ್ಕೂ ನ್ಯಾಯ ಒದಗಿಸಲಾಗಿದ್ದು, ಇದು ಆರ್ಥವ್ಯವಸ್ಥೆಗೆ ಪುನಶ್ಚೇತನ ನೀಡಲಿದೆ. ಜೊತೆಗೆ ರಾಜ್ಯದಲ್ಲಿ ಇನ್ನಷ್ಟು ಆರ್ಥಿಕ ಚಟುವಟಿಕೆಗಳಿಗೆ ‘ವೇಗವರ್ಧಕ' ನೀಡುವುದರಲ್ಲಿ ಅನುಮಾನವೇ ಇಲ್ಲ. ಜನಸಾಮಾನ್ಯರು ಹಾಗೂ ಮಧ್ಯಮವರ್ಗದರಿಗೆ ಹೊರೆಯಾಗದಂತೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸದೆ, ಬಡವರು, ಶೋಷಿತರು, ದೀನದಲಿತರು, ಕಾರ್ಮಿಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರಿಗೂ ಸಂತೃಪ್ತಿಪಡಿಸುವ ಮೂಲಕ ಐತಿಹಾಸಿಕ ಬಜೆಟ್ ಮಂಡನೆ ಮಾಡಿದ್ದಾರೆ'

ಮುರುಗೇಶ್ ಆರ್.ನಿರಾಣಿ ಗಣಿ ಮತ್ತು ಭೂ ವಿಜ್ಞಾನ ಸಚಿವ

ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಯಡಿಯೂರಪ್ಪ ಮಂಡಿಸಿರುವ ಬಜೆಟ್ ಪೂರಕವಾಗಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ಸಮತೋಲನ ಸಾಧಿಸುವಲ್ಲಿ ಈ ಬಜೆಟ್ ಯಶಸ್ವಿಯಾಗಿದೆ. ಸಾರಿಗೆ ವಲಯಕ್ಕೂ ಹಲವು ಹೊಸ ಕಾರ್ಯಕ್ರಮಗಳೊಂದಿಗೆ ಪುನಶ್ಚೇತನ ನೀಡುವ ಪ್ರಯತ್ನ ನಡೆಸಿರುವ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿಗಳು

ಶಿಕ್ಷಣ ಕ್ಷೇತ್ರ ಕಡೆಗಣಿಸಿದ ಬಜೆಟ್: ರಾಜ್ಯ ಬಿಜೆಪಿ ಸರಕಾರ ಈ ಬಜೆಟ್‍ನಲ್ಲಿ ಕೇವಲ 29,688 ಕೋಟಿ ರೂ. ಶೇ.11ರಷ್ಟು ಹಣವನ್ನು ಶಿಕ್ಷಣಕ್ಕೆ ನೀಡುವ ಮೂಲಕ ತನ್ನ ಶಿಕ್ಷಣ ವಿರೋಧಿ, ವಿದ್ಯಾರ್ಥಿ ದ್ರೋಹಿ ನೀತಿಯನ್ನು ಮುಂದುವರಿಸಿದೆ. ಮತ್ತೆ ಮಠಗಳಿಗೆ, ಜಾತಿವಾರು ಪ್ರತಿಮೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂ.ಮೀಸಲಿಡುವ ಮೂಲಕ ಬಿಜೆಪಿ ಸರಕಾರಕ್ಕೆ ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿ ಮತ್ತು ಅಭಿವೃದ್ಧಿ ಕಣ್ಣೋಟವಿಲ್ಲ ಎಂಬುದು ಈ ಬಜೆಟ್‍ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

-ಅಮರೇಶ್ ಕಡಗದ ಎಸ್‍ಎಫ್‍ಐ ರಾಜ್ಯಾಧ್ಯಕ್ಷ

ರಾಜ್ಯ ಸರಕಾರದ 2.5 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯದಲ್ಲಿ ಸ್ಲಂ ಜನರಿಗೆ ನೀಡಿರುವ ಪಾಲು ನಿರಾಶಾದಾಯಕವಾಗಿದೆ. ವಸತಿ ಇಲಾಖೆಗೆ ನೀಡಿರುವ ಹಣದ 2,990 ಕೋಟಿ ರೂ.ಅನುದಾನದ ಅಡಿಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಎಷ್ಟು ಹಣವನ್ನು ಒದಗಿಸಲಾಗಿದೆ ಎಂಬ ಸ್ಪಷ್ಟತೆ ಇಲ್ಲ. ಬಜೆಟ್ ಮಂಡನೆಗೂ ಪೂರ್ವದಲ್ಲಿ ಸ್ಲಂ ಜನಾಂದೋಲನ ಸಲ್ಲಿಸಿದ್ದ ಬೇಡಿಕೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಲಕ್ಷಿಸಿದ್ದಾರೆ.

-ಎ. ನರಸಿಂಹಮೂರ್ತಿ, ರಾಜ್ಯ ಸಂಚಾಲಕರ, ಸ್ಲಂ ಜನಾಂದೋಲನ ಕರ್ನಾಟಕ

ಇದು ಜನಪರ ಹಾಗೂ ರೈತಪರ ಬಜೆಟ್ ಆಗಿದ್ದು, ಕೊರೋನ ಸಂಕಷ್ಟ ಕಾಲದಲ್ಲೂ ಆರ್ಥಿಕವಾಗಿ ಚೇತರಿಕೆ ಸಿಗುವಂತಹ ಬಜೆಟ್ ಅನ್ನು ಸಿಎಂ ಮಂಡಿಸಿದ್ದಾರೆ. ಈ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಸಹಕಾರಿ ವಲಯದ ಮೂಲಕವೂ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದು, ರೈತರಿಗೆ ಹಾಗೂ ನಾಗರಿಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ.

- ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಭಿವೃದ್ಧಿ ಕಡೆಗೆ ದಾಪುಗಾಲು ಇಟ್ಟಿದ್ದಾರೆ. ಕರ್ನಾಟಕ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಡಿಯಲ್ಲಿ ಹಾಸನ, ವಿಜಯಪುರ, ಶಿವಮೊಗ್ಗ, ವಿಮಾನ ನಿಲ್ದಾಣಗಳನ್ನು ಅಭಿವೃದ್ದಿ ಪಡಿಸಲು ಅನುದಾನ ನೀಡಿದ್ದಾರೆ. ಅಲ್ಲದೆ, ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಇಂಡಸ್ಟ್ರಿಯಲ್ ಟೌನ್‍ಶಿಪ್‍ನ್ನು ನಿರ್ಮಿಸಲು ಕನಿಷ್ಠ 500 ಎಕರೆ ಜಮೀನಿನಲ್ಲಿ ಅಭಿವೃದ್ಧಿ ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ, ಯಡಿಯೂರಪ್ಪ ತಮ್ಮ ಬಜೆಟ್‍ನಲ್ಲಿ ಹಲವಾರು ಹೊಸ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ.

-ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಅಧ್ಯಕ್ಷ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಮಂಡಿಸಿರುವ ಬಜೆಟ್‍ನಲ್ಲಿ ಹಿಂದುಳಿದ ವರ್ಗಗಳ ಸಂಪೂರ್ಣವಾಗಿ ಕಡೆಗಣಿಸಿ ನಿರ್ಲಕ್ಷ್ಯ ತೋರಿ, ನೇರವಾಗಿ ಮೇಲ್ವರ್ಗದ ಪ್ರಬಲ ಜಾತಿಗಳ ಅಭಿವೃದ್ಧಿ ಯೋಜನೆ ಬಜೆಟ್ ಆಗಿದ್ದು, ಈ ಬಜೆಟ್ ಸಾಮಾಜಿಕ ನ್ಯಾಯದ ಅರ್ಥ ಕಳೆದುಕೊಂಡಿದೆ. ಇದರಿಂದ ಸಾಮಾಜಿಕ ನ್ಯಾಯದ ಸಂಕೇತವಾದ ಅಭಿವೃದ್ಧಿ ಮತ್ತು ಶಾಂತಿ ಅಸಾಧ್ಯ. ಹಿಂ.ವರ್ಗಗಳ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ., ಲಿಂಗಾಯತ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 500 ಕೋಟಿ ರೂ.ಇದು ಹಿಂದುಳಿದ ವರ್ಗಕ್ಕೆ ಸರಕಾರ ತೋರುತ್ತಿರುವ ನಿರ್ಲಕ್ಷ್ಯತೆ ಸರಿಯಲ್ಲ

-ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ

ಕೃಷಿ ಕ್ಷೇತ್ರ ಕಡೆಗಣನೆ: ರಾಜ್ಯ ಬಜೆಟ್‍ನಲ್ಲಿ ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಕಳೆದ ಬಾರಿಗಿಂತ ಸುಮಾರು 600 ಕೋಟಿ ರೂ.ಕಡಿಮೆ ಅನುದಾನ ನೀಡಲಾಗಿದೆ. ಕೃಷಿಕರನ್ನು ಆರ್ಥಿಕವಾಗಿ ಸ್ವಾವಲಂಬನೆಗೊಳಿಸುವ ನಿಟ್ಟಿನಲ್ಲಿ ಉಪಯುಕ್ತ ಕಾರ್ಯಕ್ರಮಗಳಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಹಣವನ್ನು ಮೀಸಲಿಟ್ಟಿಲ್ಲ. 22 ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸುಮಾರು 10ರಿಂದ 12 ಸಾವಿರ ಕೋಟಿ ರೂ.ವೆಚ್ಚ ಆಗಬಹುದು. ಇಷ್ಟು ಹಣ ರಾಜ್ಯ ಸರಕಾರಕ್ಕೆ ಹೊರೆ ಆಗುವುದಿಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಸಾವಯವ ಕೃಷಿ ಉತ್ತೇಜಿಸಲು ಮೀಸಲಿಟ್ಟಿರುವ 500 ಕೋಟಿ ರೂ. ಆರೆಸ್ಸೆಸ್ ಕಾರ್ಯಕರ್ತರ ಪಾಲಾಗಲಿದೆ. ಹಾಗೂ ಕೃಷಿ ಮಾರುಕಟ್ಟೆಯನ್ನು ಶುಲ್ಕವನ್ನು ಶೇ.1.5ರಿಂದ 0.60ಕ್ಕೆ ಇಳಿಸಿರುವುದು ಒಳ್ಳೆಯ ಬೆಳವಣಿಗೆಯಾದರೂ ಮಾರುಕಟ್ಟೆಗಳ ಬಲವರ್ಧನೆಗೆ ಯಾವುದೇ ಕ್ರಮವಿಲ್ಲ.

-ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಅಧ್ಯಕ್ಷ

ಬಡವರ ನೆರವಿಗೆ ಬಾರದ ಸರಕಾರ

ಬಿಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ ಜನವಿರೋಧಿ ಹಾಗೂ ನಿರಾಶದಾಯಕ. ಗಗನಕ್ಕೆ ಏರಿರುವ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಸಿಲಿಂಡರ್ ಮೇಲಿನ ರಾಜ್ಯ ಮಾರಾಟ ತೆರಿಗೆಯನ್ನು ಬಜೆಟ್‍ನಲ್ಲಿ ಇಳಿಸುತ್ತಾರೆಂದು ನಂಬಿದ್ದ ಜನರಿಗೆ ತೀವ್ರ ನಿರಾಶೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನರ ಬದುಕು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಬಡಜನರ ನೆರವಿಗೆ ಸರಕಾರ ಬಾರದೆ ಇರುವುದು ಜನರಿಗೆ ಬಗೆದ ದ್ರೋಹವಾಗಿದೆ.

-ಡಿ.ಬಸವರಾಜ್, ಕೆಪಿಸಿಸಿ ವಕ್ತಾರ

ಅನುಷ್ಠಾನದ್ದೇ ಅನುಮಾನ: ರಾಜ್ಯ ಬಜೆಟ್ ಕೆಲವೇ ಕ್ಷೇತ್ರಗಳಿಗೆ ಮತ್ತು ಜಿಲ್ಲೆಗಳಿಗೆ ಮೀಸಲಾಗಿದೆ. ನಿರುದ್ಯೋಗ, ಪರಿಸರ, ನೆರೆ-ಬರ ಪರಿಹಾರ ನಿಗ್ರಹದಂತಹ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ. ಮಹಿಳೆಯರ ಅಭಿವೃದ್ದಿ, ಪ್ರವಾಸೋದ್ಯಮ, ಕೃಷಿ ಮಾರುಕಟ್ಟೆ ಮತ್ತು ಪ್ರಾಥಮಿಕ ಆರೋಗ್ಯದ ಬಗ್ಗೆ ಒತ್ತು ಕೊಟ್ಟಿರುವುದು ಆಶಾದಾಯಕವಾಗಿದೆ. ಆದರೆ, ಎಂದಿನಂತೆ ಘೋಷಣೆ ಆದ ನಂತರ ಅದರ ಅನುಷ್ಠಾನದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಎದ್ದು ಕಾಣುತ್ತಿದ್ದು, ರಾಜ್ಯದ ಆಡಳಿತದಲ್ಲಿನ ದೊಡ್ಡ ಕೊರತೆಯಾಗಿದೆ. ಹೀಗಾಗಿ ಎಲ್ಲಕ್ಕಿಂತ ಮೊದಲು ಆಡಳಿತ ವ್ಯವಸ್ಥೆ ಸುಧಾರಣೆಯಾಗಲಿ.

-ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಸಮಿತಿ ಪಕ್ಷ

ಹೊರೆ ಇಲ್ಲ, ಜನರ ಒಳಿತಿಗೆ ಎಲ್ಲ ಎನ್ನುವ ಧ್ಯೇಯ

ಕೋವಿಡ್‍ನಿಂದ ಉಂಟಾದ ಆರ್ಥಿಕ ಸವಾಲುಗಳ ನಡುವೆಯೂ ಜನರಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದ ಹಾಗೂ ಕೃಷಿ, ಶಿಕ್ಷಣ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಪೂರಕವಾದ ಸಮಗ್ರ ದೃಷ್ಟಿಕೋನದ ಸಮತೋಲಿತ 2021ನೇ ಸಾಲಿನ ಮುಂಗಡಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದಾರೆ. ಸಾಮಾಜಿಕ ನ್ಯಾಯವನ್ನು ಈ ಬಜೆಟ್ ಎತ್ತಿ ಹಿಡಿದಿದ್ದು, 30 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ. ರಾಜ್ಯದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ 52,529 ಕೋಟಿ ರೂ.ಗಳ ಅನುದಾನವನ್ನೂ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಕ್ವಾಂಟಂ ತಂತ್ರಜ್ಞಾನ ಅಭಿವೃದ್ಧಿಗೆ 10 ಕೋಟಿ ರೂ. ಮೀಸಲಿಟ್ಟು ಸಂಶೋಧನಾ ಪಾರ್ಕ್ ಸ್ಥಾಪನೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಬೆಂಗಳೂರು ನಗರವನ್ನು ‘ಜಿಯೋಸ್ಪೆಷಿಯಲ್ ಹಬ್’ ಅನ್ನಾಗಿ ರೂಪಿಸುವ ಘೋಷಣೆ ಆಗಿದೆ. ಜಿಯೋಸ್ಪೆಷಿಯಲ್ ತಂತ್ರಜ್ಞಾನಕ್ಕೆ ಮಹತ್ವ ಕೊಡುವುದು ಇದರ ಉದ್ದೇಶ. ಜತೆಗೆ, ಏರೋಸ್ಪೇಸ್, ಆವಿಷ್ಕಾರ, ನವೋದ್ಯಮಗಳ ಸ್ಥಾಪನೆಗೂ ಒತ್ತು ಕೊಡಲಾಗಿದೆ

-ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

ಪಶುಪಾಲನೆಗೆ ಪಾಲನೆಗೆ ಬಜೆಟ್ ನಲ್ಲಿ ಉತ್ತೇಜನ: ಹೈನುಗಾರಿಕೆಯನ್ನು ಉತ್ತೇಜಿಸಲು ಹೊರ ರಾಜ್ಯಗಳ ವಿವಿಧ ದೇಸಿ ತಳಿಗಳನ್ನು ರಾಜ್ಯದ ರೈತರಿಗೆ ಪರಿಚಯಿಸಲು "ಸಮಗ್ರ ಗೋಸಂಕುಲ ಅಭಿವೃದ್ಧಿ" ಪರಿಚಯಿಸಿದ್ದು ರಾಜ್ಯದ ಹೈನೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲೆಗೊಂದು ಗೋಶಾಲೆ ತೆರೆಯುತ್ತಿರುವುದು ಗೋವುಗಳ ಸಂರಕ್ಷಣೆಗೆ ಸಾಕಷ್ಟು ಸಹಕಾರಿಯಾಗಲಿದೆ. 

-ಪ್ರಭು ಚವ್ಹಾಣ್, ಪಶುಸಂಗೋಪನೆ ಸಚಿವ

ಎಲ್ಲ ಕ್ಷೇತ್ರಕ್ಕೂ ನ್ಯಾಯ ಒದಗಿಸಲಾಗಿದೆ: ಮುಖ್ಯಮಂತ್ರಿ ಯಡಿಯೂರಪ್ಪ ಸವಾಲುಗಳ ನಡುವೆಯೂ ಇಂದು ಮಂಡಿಸಿದ 2021-22ನೇ ಸಾಲಿನ ಬಜೆಟ್ ನಲ್ಲಿ ಎಲ್ಲ ಕ್ಷೇತ್ರಕ್ಕೂ ನ್ಯಾಯ ಒದಗಿಸಲಾಗಿದ್ದು, ಇದು ಆರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡಲಿದೆ. ಜೊತೆಗೆ ರಾಜ್ಯದಲ್ಲಿ ಇನ್ನಷ್ಟು ಆರ್ಥಿಕ ಚಟುವಟಿಕೆಗಳಿಗೆ ವೇಗವರ್ಧಕ ನೀಡುವುದರಲ್ಲಿ ಅನುಮಾನವೇ ಇಲ್ಲ.

-ಮುರುಗೇಶ್ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ

ಕೋವಿಡ್ ಸಂಕಷ್ಟ ಕಾಲದಲ್ಲೂ ಸಮತೋಲಿತ ಬಜೆಟ್

ಕೋವಿಡ್ ವಿಷಮ ಕಾಲಘಟ್ಟದ ಸಂದರ್ಭದಲ್ಲೂ ಮುಖ್ಯಮಂತ್ರಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮತೋಲಿತ ಆಯವ್ಯಯ ಮಂಡಿಸಿದ್ದಾರೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಅಭ್ಯಸಿಸಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲುದ್ದೇಶಿಸಿರುವ ನಿರ್ಧಾರವು ಸಾಂಕೇತಿಕವಾಗಿದೆಯಾದರೂ ಇತಿಹಾಸವನ್ನು ಸ್ಮರಿಸುವ ಮಹತ್ವಪೂರ್ಣ ವಿಷಯವಾಗಿದ್ದು, ನಮ್ಮ ವಿದ್ಯಾರ್ಥಿಗಳನ್ನು ಗೌರವಿಸುವ ಸಂಗತಿಯಾಗಿದೆ . 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾವು ಈಗಾಗಲೇ ನೀಲನಕ್ಷೆ ತಯಾರಿಸುತ್ತಿದ್ದು, ಈ ಸಾಲಿನಲ್ಲಿ 50 ಕೆಪಿಎಸ್ ಶಾಲೆಗಳ ಸರ್ಮತೋಮುಖ ಅಭಿವೃದ್ಧಿಗೆ ಹೆಚ್ಚುವರಿಯಾಗಿ 100 ಕೋಟಿ ರೂ.ಗಳನ್ನು ನೀಡಿರುವುದು ಶೈಕ್ಷಣಿಕ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಒಂದು ಅನುಕೂಲಕರ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ.

ಕೈಗಾರಿಕಾ ವಲಯಕ್ಕೆ ಉತ್ತೇಜನ

ಕೈಗಾರಿಕಾ ಉದ್ದೇಶಕ್ಕಾಗಿ ಉದ್ಯಮಗಳು ಭೂ ಮಾಲೀಕರಿಂದ ನೇರವಾಗಿ ಭೂ ಸ್ವಾಧೀನ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿರುವ ಪ್ರಸ್ತಾಪವು ರಾಜ್ಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಸಮರ್ಪಕ ಹೆಜ್ಜೆಯಾಗಿದೆ. ಪೀಣ್ಯ ಕೈಗಾರಿಕಾ ಟೌನ್ ಶಿಪ್‍ಗೆ ರೂ.100 ಕೋಟಿ, ಚೆನ್ನೈ-ಬೆಂಗಳೂರು-ಮುಂಬೈ ಕಾರಿಡಾರ್, ಯಾದಗಿರಿಯಲ್ಲಿ ಬಲ್ಕ್ ಡ್ರಗ್ಸ್ ಪಾರ್ಕ್, ಬಾದಾಮಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್, ಬಿಜಾಪುರದಲ್ಲಿ ಕೃಷಿ ಉತ್ಪನ್ನಗಳ ಪಾರ್ಕ್ ಮತ್ತು ಬೀದರ್‍ನಲ್ಲಿ ಅಗ್ರಿಕಲ್ಚರ್ ಇಂಪ್ಲಿಮೆಂಟ್ಸ್ ಪಾರ್ಕ್‍ಗಳನ್ನು ಈ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಕ್ರಮ.

-ಕೆ.ಬಿ. ಅರಸಪ್ಪ, ಅಧ್ಯಕ್ಷರು ಕಾಸಿಯಾ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒತ್ತು

ಪ್ರಸ್ತುತ ವಾರ್ಷಿಕ ಸಾಲಿನ ಆಯವ್ಯಯದಲ್ಲಿ ರಾಜ್ಯ ಅಲ್ಪಸಂಖ್ಯಾತರ ಏಳಿಗೆಗೆ 1500 ಕೋಟಿ ರೂ. ಘೋಷಣೆ ಮಾಡಿರುವುದು ಸಂತಸವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ. ಮುಖ್ಯವಾಗಿ 400 ಸರಕಾರಿ ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲು ಸರಕಾರಿ ಆದೇಶ ಹೊರಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈ ಚಟುವಟಿಕೆಯನ್ನು ಆರಂಭಿಸಲಾಗುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

-ಅಬ್ದುಲ್ ಅಝೀಂ, ಅಧ್ಯಕ್ಷ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ

ಜಾತಿ ಸಮುದಾಯಗಳ ಓಲೈಕೆ, ರೈತರ ನಿರ್ಲಕ್ಷ್ಯ

ಜಾತಿ ಸಮುದಾಯಗಳ ಓಲೈಕೆಗೆ ಹಣ ಮೀಸಲಿಡುವ ಮೂಲಕ, ಕೃಷಿಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಯಾವುದೇ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ನಿರ್ಲಕ್ಷಿಸಿದ್ದಾರೆ, ಹೊಸ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಆವರ್ತ ನಿಧಿ ನಿಗದಿಗೊಳಿಸಿದೆ, ಕೃಷಿ ಉತ್ಪನ್ನಗಳ ಅಡಮಾನ ಸಾಲಕ್ಕೆ ಕೇವಲ ಐದು ಕೋಟಿ ಮೀಸಲಾಗಿರಿಸಿ ಕೃಷಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.

-ಕುರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News