ಪ್ರಸಾರಕ್ಕೆ ತಡೆ ಕೋರಿ ಸಚಿವರ ಕೋರ್ಟ್ ಮೊರೆ: ಉಭಯ ಸದನಗಳಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನ

Update: 2021-03-08 18:35 GMT

ಬೆಂಗಳೂರು, ಮಾ.8: ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಡವರು, ಮಧ್ಯಮ ವರ್ಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಿಲುವಳಿ ಸೂಚನೆ ಮಂಡನೆ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ತನ್ನ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಮಾತನಾಡಿದ ಅವರು, ಶಾಸಕ ಸಂಗಮೇಶ್ವರ ಕುಟುಂಬ ಹಾಗೂ ಬೆಂಬಲಿಗರ ಮೇಲೆ ಕೊಲೆ ಯತ್ನ ಕೇಸು ಹಾಕಲಾಗಿದೆ. ಇದು ಸುಳ್ಳು ಕೇಸು. ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಬಂಧಿಸಬೇಕೆಂಬ ಏಕೈಕ ಉದ್ದೇಶದಿಂದ ಕೇಸು ದಾಖಲು ಮಾಡಿಸಲಾಗಿದೆ ಎಂದು ದೂರಿದರು.

ಸದನದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸಂಗಮೇಶ್ ಅವರನ್ನು ಒಂದು ವಾರ ಅಮಾನತು ಮಾಡಲಾಗಿದೆ. ಸ್ಪೀಕರ್ ಅವರಿಗೆ ಮನವಿ ಮಾಡಿದರೂ ಅಮಾನತು ಆದೇಶ ವಾಪಸ್ ಪಡೆದಿಲ್ಲ ಎಂದು ಅವರು ತಿಳಿಸಿದರು.

ಪೊಲೀಸ್ ದೌರ್ಜನ್ಯ ಖಂಡಿಸಿ ಮಾ.13ರಂದು ಶಿವಮೊಗ್ಗ ಚಲೋ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ನುಡಿದರು. ಸಿ.ಡಿ ಪ್ರಕರಣ, ಪ್ರಸಾರಕ್ಕೆ ತಡೆ ಕೋರಿ ಸಚಿವರಿಂದ ನ್ಯಾಯಾಲಯಕ್ಕೆ ಮೊರೆ, ಉಭಯ ಸದನದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಹಿರಿಯ ಮುಖಂಡರಾದ ಡಾ. ಜಿ. ಪರಮೇಶ್ವರ್, ಆರ್.ವಿ. ದೇಶಪಾಂಡೆ, ಕೆ.ಆರ್. ರಮೇಶ್ ಕುಮಾರ್, ಶ್ಯಾಮನೂರು ಶಿವಶಂಕರಪ್ಪ, ಸಿ.ಎಂ ಇಬ್ರಾಹಿಂ, ಕೆ.ಜೆ.ಜಾರ್ಜ್, ಕೆಪಿಸಿಸಿ  ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಧ್ರುವ ನಾರಾಯಣ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News