63 ಸಾವಿರ ಕ್ವಿಂಟಾಲ್ ಅಕ್ಕಿ ಜಪ್ತಿ, 786 ಪ್ರಕರಣ ದಾಖಲು: ಸಚಿವ ಉಮೇಶ್ ಕತ್ತಿ

Update: 2021-03-09 18:32 GMT

ಬೆಂಗಳೂರು, ಮಾ.9: ಕಳೆದ ಮೂರು ವರ್ಷಗಳಲ್ಲಿ ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ರಮವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಮಾಡುತ್ತಿರುವ ಸಂಬಂಧ 786 ಪ್ರಕರಣಗಳನ್ನು ದಾಖಲಿಸಿ, ಸುಮಾರು 63 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕೇಳಿದ ಪ್ರಶ್ನಗೆ ಉತ್ತರಿಸಿದ ಸಚಿವರು, ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿ ಜತೆಗೆ ಗೋಧಿ, ಸಕ್ಕರೆ, ರಾಗಿ, ತೋಗರಿ ಬೇಳೆ, ಕಡಲೆ ಕಾಳು ಕೂಡ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಲಾಗಿದೆ ಎಂದು ತಿಳಿಸಿದರು.

ಇದುವರೆಗೂ 2.20 ಲಕ್ಷ ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಮಾಡಿ 3 ಕೋಟಿ 7 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಯಾರೆಲ್ಲ ಕಾನೂನು ಬಾಹಿರವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ತಾವಾಗಿಯೇ ಸರಕಾರಕ್ಕೆ ಒಪ್ಪಿಸಿ ಕ್ರಿಮಿನಲ್ ಪ್ರಕರಣ ಮತ್ತು ದಂಡ ದಾಖಲಿಸಿಕೊಳ್ಳುವುದರಿಂದ ವಿನಾಯಿತಿ ಪಡೆಯಬಹುದು ಎಂದು ಹೇಳಿದರು.

ಅರ್ಹ ಫಲಾನುಭವಿಗಳು ಎಷ್ಟು ಮಂದಿ ಇದ್ದರೂ ಅವರಿಗೆ ಪಡಿತರ ಆಹಾರ ಧಾನ್ಯಗಳನ್ನು ನೀಡಲಾಗುವುದು. ಆದರೆ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕೊರೋನ ಸಂದರ್ಭದಲ್ಲಿ ನೀಡುತ್ತಿದ್ದ ಪಡಿತರ ಆಹಾರ ಧಾನ್ಯಗಳನ್ನು ಹೆಚ್ಚು ಮಾಡಬೇಕೆ ಹೊರತು ಅದನ್ನು ಕಡಿಮೆ ಮಾಡಿರುವ ಸರಕಾರದ ಕ್ರಮ ತುಘಲಕ್ ದರ್ಬಾರ್ ಬಿಂಬಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News