ಮೋದಿ ಸರಕಾರದ ಅವಧಿಯುದ್ದಕ್ಕೂ ಪ್ರತಿಭಟನೆ ಮುಂದುವರಿಸಲು ರೈತರು ಸಿದ್ಧ: ನರೇಂದ್ರ ಟಿಕಾಯತ್

Update: 2021-03-10 08:25 GMT

ಹೊಸದಿಲ್ಲಿ: ಮೂರು ಕೃಷಿ ಕಾಯಿದೆಗಳ ವಾಪಸಾತಿಗೆ ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ಕಳೆದ ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮೋದಿ ಸರಕಾರದ ಉಳಿದ ಮೂರೂವರೆ ವರ್ಷ ಅವಧಿಯುದ್ದಕ್ಕೂ  ತಮ್ಮ ಹೋರಾಟ ಮುಂದುವರಿಸಲು ಸಿದ್ಧವಿದ್ದಾರೆ ಹಾಗೂ  ಕೇಂದ್ರ ಯಾವುದೇ ರೀತಿಯಲ್ಲಿ ಪ್ರಯತ್ನಿಸಿದರೂ ಈ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಖ್ಯಾತ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಅವರ ಪುತ್ರ  ನರೇಂದ್ರ ಟಿಕಾಯತ್ ಹೇಳಿದ್ದಾರೆ.

ತಮ್ಮ ತಂದೆ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್‍ನಲ್ಲಿ ಯಾವುದೇ ಅಧಿಕೃತ ಹುದ್ದೆ ಹೊಂದಿರದೇ ಇರುವ ಹಾಗೂ ಕುಟುಂಬದ ಕೃಷಿ ಕಾರ್ಯಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿರುವ ನರೇಂದ್ರ ಅವರು ತಮ್ಮ ಇಬ್ಬರು ಹಿರಿಯ ಸೋದರರಾದ  ಹಾಗೂ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ನರೇಶ್ ಮತ್ತು ರಾಕೇಶ್ ಟಿಕಾಯತ್ ಅವರಂತೆಯೇ ರೈತರ ಸಮಸ್ಯೆ ಕುರಿತಂತೆ ತಮ್ಮ ಅಭಿಪ್ರಾಯವನ್ನು ನೇರಾನೇರವಾಗಿ ವ್ಯಕ್ತಪಡಿಸುತ್ತಾರೆ.

ಮುಝಫ್ಫರನಗರದ ಸಿಸೌಲಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ 45 ವರ್ಷದ ನರೇಂದ್ರ, ತಮ್ಮ ಕುಟುಂಬದ ಯಾವುದೇ ಒಬ್ಬ ಸದಸ್ಯ ಕೂಡ ಯವುದೇ ತಪ್ಪು ಮಾಡಿದ್ದಾರೆಂದು ಸಾಬೀತಾದಲ್ಲಿ ಇಡೀ ಟಿಕಾಯತ್ ಕುಟುಂಬ ಪ್ರತಿಭಟನಾ ಸ್ಥಳವನ್ನು ತ್ಯಜಿಸುವುದಾಗಿ ಹೇಳಿದ ಅವರು  ತಮ್ಮ ಕುಟುಂಬ  ಪ್ರತಿಭಟನೆಯಿಂದ ಹಣ ಮತ್ತು ಆಸ್ತಿ ಸಂಪಾದಿಸಿದೆ ಎಂಬ ಕೆಲ ಆರೋಪಗಳನ್ನು ನಿರಾಕರಿಸಿದ್ದಾರೆ.

"ನಾನು ಮನೆಯಲ್ಲಿದ್ದರೂ ನನ್ನ ಕಣ್ಣೆಲ್ಲಾ ಪ್ರತಿಭಟನಾ ಸ್ಥಳದಲ್ಲಿದೆ" ಎಂದ ಅವರು ತಾವು ಆಗಾಗ  ಅಲ್ಲಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದರು.

ತಮ್ಮ ಎಲ್ಲಾ ಬೇಡಿಕೆಗಳು ಸಂಪೂರ್ಣವಾಗಿ ಈಡೇರಿದ ನಂತರವಷ್ಟೇ ರೈತರು ಪ್ರತಿಭಟನಾ ಸ್ಥಳದಿಂದ  ತೆರಳುತ್ತಾರೆ  ಹಾಗೂ ಯಾವುದೇ ಭರವಸೆ ಹಾಗೂ ಭಾಗಶಃ ಬೇಡಿಕೆ ಪೂರೈಕೆಗೆ ಅವರು  ಬಗ್ಗುವುದಿಲ್ಲ ಎಂದು ಅವರು ಹೇಳಿದರು.

"ಕೃಷಿ ಉತ್ಪನ್ನಗಳನ್ನು ಎಂಎಸ್‍ಪಿಗೆ ಖರೀದಿಸಲಾಗುವುದೆಂದು ಸತತ ಹೇಳುವ ಸರಕಾರಕ ಲಿಖಿತ ಭರವಸೆ ಏಕೆ ನೀಡುತ್ತಿಲ್ಲ?" ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News