ಪರಿಷತ್‍ನಲ್ಲಿ ಸಚಿವರ ಗೈರು: ಕಲಾಪ ಸೋಮವಾರಕ್ಕೆ ಮುಂದೂಡಿಕೆ; ಬಸವರಾಜ ಹೊರಟ್ಟಿ

Update: 2021-03-10 12:05 GMT

ಬೆಂಗಳೂರು, ಮಾ.10: ಸದನಕ್ಕೆ ಸಚಿವರು ಗೈರು ಆಗಿದ್ದರಿಂದ ವಿಧಾನಪರಿಷತ್ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಸೋಮವಾರಕ್ಕೆ ಮುಂದೂಡಿದ್ದಾರೆ. 

ಬುಧವಾರ ಪರಿಷತ್‍ನ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾನಾಯಕ ಎಸ್.ಆರ್.ಪಾಟೀಲ್ ಹಾಗೂ ಬಿ.ಕೆ.ಹರಿಪ್ರಸಾದ್, ಬಜೆಟ್ ಮೇಲೆ ಚರ್ಚಿಸುವ ಸಮಯದಲ್ಲಿ ಸದನದಲ್ಲಿ ಒಬ್ಬ ಸಚಿವರು ಇಲ್ಲದಿದ್ದರೆ ನಾವು ಯಾರನ್ನು ಉದ್ದೇಶಿಸಿ ಮಾತನಾಡಬೇಕೆಂದು ಪ್ರಶ್ನಿಸಿದ್ದಾರೆ. 

ಈ ವೇಳೆ ಪ್ರತಿಕ್ರಿಯಿಸಿದ ಸಭಾನಾಯಕ ಶ್ರೀನಿವಾಸ ಪೂಜಾರಿ, ಸದನದಲ್ಲಿ ಹಾಜರಾಗಬೇಕಿದ್ದ ಸಚಿವರು ತೋಟಗಾರಿಕೆ ಸಚಿವ ಆರ್.ಶಂಕರ್ ಮನೆಗೆ ಊಟಕ್ಕೆ ಹೋಗಿದ್ದಾರೆ. ತಡವಾಗಿ ಬರಲಿದ್ದಾರೆ ಎಂದರು. ಹಾಗಾದರೆ, ಸದನವನ್ನು 10ನಿಮಿಷ ಮುಂದೂಡಿಕೆ ಮಾಡುತ್ತೇನೆಂದು ಸಭಾಪತಿ ತಿಳಿಸಿದ್ದಾರೆ. 

ಇದಕ್ಕೆ ಸಭಾನಾಯಕ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಸದಸ್ಯ ರವಿಕುಮಾರ್ ಪ್ರತಿಕ್ರಿಯಿಸಿ, ನಾಳೆ(ಮಾ.11) ಶಿವರಾತ್ರಿ ಪ್ರಯುಕ್ತ ಕೆಳ ಮನೆಯ ಸದನವನ್ನು ಇಂದು ಮಧ್ಯಾಹ್ನದಿಂದಲೇ ಸೋಮವಾರದವರೆಗೆ ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ಪರಿಷತ್‍ನ್ನೂ ಸೋಮವಾರದ ವರೆಗೆ ಮುಂದೂಡಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ. 

ಈ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸದನವನ್ನು ಮುಂದೂಡುವುದಾದರೆ ಸೂಕ್ತ ಕಾರಣ ಕೊಟ್ಟು ಮುಂದೂಡಬೇಕೆಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದನಕ್ಕೆ ಸಚಿವರು ಗೈರು ಆಗಿದ್ದಾರೆಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿ, ವಿಧಾನಪರಿಷತ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News