ತೆಂಗು, ಅಡಿಕೆ, ಗೇರು ಬೆಳೆಗಳ ಅಭಿವೃದ್ಧಿಗೆ ಸಹಾಯಧನ: ಸಚಿವ ಬಿ.ಸಿ.ಪಾಟೀಲ್

Update: 2021-03-10 12:46 GMT

ಬೆಂಗಳೂರು, ಮಾ. 10: ಕರಾವಳಿ ಪ್ರದೇಶದಲ್ಲಿ ತೋಟಗಾರಿಕೆ ಅಭಿವೃದ್ಧಿಗೆ ತೆಂಗು, ಅಡಿಕೆ ಮತ್ತು ಗೇರು ಬೆಳೆಗಳ ಅಭಿವೃದ್ಧಿಗೆ ಸರಕಾರ ನೆರವು ನೀಡುತ್ತಿದೆ. ತೆಂಗು ಪುನಃಶ್ಚೇತನ ಕಾರ್ಯಕ್ರಮದಡಿ ರೈತರಿಗೆ ಪ್ರತಿ ಹೆಕ್ಟೇರ್‍ಗೆ 53,500 ರೂ.ಸಹಾಯಧನ ನೀಡಲಾಗುತ್ತಿದೆ. ತೆಂಗಿನ ತೋಟದ ವಿಸ್ತರಣೆಗೆ ಮತ್ತು ಹೊಸ ತೋಟಕ್ಕೆ 15 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ತೋಟಗಾರಿಕೆ ಸಚಿವರ ಪರವಾಗಿ ಉತ್ತರಿಸಿದ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯ ಪ್ರಶ್ನೋತ್ತದ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಉಮಾನಾಥ್ ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ರೈತರಿಗೆ ಸಹಾಯಧನ ನೀಡಲಾಗುತ್ತಿದೆ. ಗೇರು ಸಮಗ್ರ ತೋಟಗಾರಿಕಾ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರಂತೆ 28,820 ಹೆಕ್ಟೇರ್‍ಗೆ, ಎಸ್ಸಿ-ಎಸ್ಟಿ ವರ್ಗದವರಿಗೆ 51,878 ರೂ.ಸಹಾಯಧನ ನೀಡಲಾಗುತ್ತಿದೆ ಎಂದರು.

ತೆಂಗು, ಅಡಿಕೆ ಮತ್ತು ಗೇರು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಸಸ್ಯ ಸಂರಕ್ಷಣಾ ಔಷಧ ಖರೀದಿಗೆ ಸಹಾಯ ಧನ ನೀಡಿ ಉತ್ತೇಜನ ನೀಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸದರಿ ಬೆಳೆಗಳನ್ನು ಬೆಳೆಯಲು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News