ಕಟ್ಟಡ ಸುರಕ್ಷತೆ ನೆಪದಲ್ಲಿ ಖಾಸಗಿ ಶಾಲೆಗಳ ಮೇಲೆ ಶಿಕ್ಷಣ ಇಲಾಖೆಯಿಂದ ಕಠಿಣ ಕಾನೂನು: ಶಶಿಕುಮಾರ್ ಆರೋಪ

Update: 2021-03-10 13:45 GMT
ಶಶಿಕುಮಾರ್

ಬೆಂಗಳೂರು, ಮಾ.10: ಕೋವಿಡ್ ಆರ್ಥಿಕ ಸಂಕಷ್ಟದಿಂದ ಖಾಸಗಿ ಶಾಲೆಗಳು ಹೊರಬರಲು ಹೆಣಗಾಡುತ್ತಿರುವ ಹೊತ್ತಿನಲ್ಲಿ ಶಿಕ್ಷಣ ಇಲಾಖೆ ಕಟ್ಟಡ ಸುರಕ್ಷತೆಯ ಪ್ರಮಾಣ ಪತ್ರ, ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯಗೊಳಿಸುವ ನೆಪದಲ್ಲಿ ಕಠಿಣ ಕಾನೂನು ಜಾರಿ ಮಾಡಲು ಮುಂದಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ವಾರ್ತಾಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ. ಅದನ್ನು ಪಾಲಿಸಲೇಬೇಕಾಗುತ್ತದೆ. ಆದರೆ, ಈಗಾಗಲೇ ಕಟ್ಟಿರುವ ಹಳೆಯ ಶಾಲೆಗಳಿಗೆ ಕಟ್ಟಡದ ಛಾವಣಿಯಲ್ಲಿ ಕನಿಷ್ಠ 10ಸಾವಿರ ಲೀ. ಸಾಮಥ್ರ್ಯವಿರುವ ನೀರಿನ ತೊಟ್ಟಿ, ಶಾಲೆಯ ಮುಂಭಾಗವು ರಸ್ತೆಯಿಂದ 1/3 ಭಾಗದಷ್ಟು ನಿವೇಶನವು ಖಾಲಿ ಇರಬೇಕು ಎಂಬ ನಿಯಮ ಕಷ್ಟಕರವಾಗಿದೆ. ಇದ್ದದ್ದರಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳು ಬದ್ಧವಾಗಿವೆ ಎಂಬುದನ್ನು ಈಗಾಗಲೇ ಇಲಾಖೆಯ ಗಮನಕ್ಕೆ ತಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

2018ರ ನಂತರ ನಿರ್ಮಾಣಗೊಂಡಿರುವ ಖಾಸಗಿ ಶಾಲೆಗಳಲ್ಲಿ ಸರಕಾರ ಸೂಚಿಸಿರುವ ಎಲ್ಲ ನಿಯಮಗಳು ಪಾಲನೆಯಾಗಲಿ. ಆದರೆ, ಹಳೆಯ ಖಾಸಗಿ ಶಾಲೆಗಳಿಗೆ ಕಟ್ಟಡಗಳನ್ನು ಹೊಡೆದು ಹಾಕುವಂತಹ ಕಾನೂನುಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಇಲಾಖೆಗೆ ಸ್ಪಷ್ಟಪಡಿಸಿದ್ದರೂ ಪುನಃ ಹೊಸ ಶಾಲೆಗಳಿಗೆ ಅನ್ವಯಿಸಬೇಕಾದ ನಿಯಮಗಳನ್ನು ಹಳೆಶಾಲೆಗಳಿಗೆ ಸೇರಿಸಿ ಸುತ್ತೋಲೆ ಹೊರಡಿಸುತ್ತಿರುವುದು ಸರಿಯಲ್ಲವೆಂದು ಅವರು ತಿಳಿಸಿದ್ದಾರೆ. 

ಶಿಕ್ಷಣ ಇಲಾಖೆಯ ಕಠಿಣ ಕಾನೂನುಗಳಿಂದ ಖಾಸಗಿ ಶಾಲೆಗಳ ಮೇಲಾಗುತ್ತಿರುವ ಸಮಸ್ಯೆಯನ್ನು ಈಗಾಗಲೇ ವಿಧಾನಪರಿಷತ್ ಸದಸ್ಯರ ಗಮನಕ್ಕೆ ತಂದಿದ್ದು, ಹಳೆ ಶಾಲೆಗಳು ಕನಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸಲಿವೆ. ಹಾಗೂ 2018ರ ನಂತರ ಎಲ್ಲ ಖಾಸಗಿ ಶಾಲೆಗಳು ಸರಕಾರದ ಹೊರ ನಿಯಮಗಳನ್ನು ಪಾಲಿಸಲು ಸಿದ್ಧವಿದೆ ಎಂಬುದನ್ನು ಖಚಿತಪಡಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ದಂಧೆಗೆ ಅವಕಾಶ ಆಗಲಿದೆ: ಹಳೆ ಶಾಲಾ ಕಟ್ಟಡಗಳಿಗೂ ಎಲ್ಲ ನಿಯಮಗಳನ್ನು ಕಡ್ಡಾಯಗೊಳಿಸಿದರೆ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಇಲಾಖೆ ಅಧಿಕಾರಿಗಳ ನಡುವೆ ದಂಧೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಹಳೆಯ ಶಾಲೆಗಳಿಗೆ ಕನಿಷ್ಠ ಸುರಕ್ಷತೆಯನ್ನು ಹೊರತು ಪಡಿಸಿ, ಕಠಿಣ ನಿಯಮಗಳನ್ನೊಳಗೊಂಡಿರುವ ಹೊಸ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ. 

'ಇಲಾಖೆಯ ಗಧಾಪ್ರಹಾರ'
ರಾಜ್ಯ ಸರಕಾರ ತನ್ನ ಅಧೀನದಲ್ಲಿ ನಡೆಸುವ ಸರಕಾರಿ ಶಾಲೆಗಳಲ್ಲಿ ಕಟ್ಟಡ ಸುರಕ್ಷತಾ ಸಂಬಂಧ ಎಲ್ಲ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಆದರೆ, ಹಳೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕನಿಷ್ಠ ಸುರಕ್ಷತೆಯನ್ನು ಕಾಯ್ದುಕೊಂಡಿದ್ದೇವೆ. ಹೊಸ ಖಾಸಗಿ ಶಾಲೆಗಳಲ್ಲಿ ಎಲ್ಲ ಆಧುನಿಕ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಆದರೂ ಶಿಕ್ಷಣ ಇಲಾಖೆ ನಮ್ಮ ಮೇಲೆ ಗಧಾಪ್ರಹಾರ ಮಾಡುವುದನ್ನು ನಿಲ್ಲಿಸುತ್ತಿಲ್ಲ.
-ಶಶಿಕುಮಾರ್, ಕಾರ್ಯದರ್ಶಿ, ಖಾಸಗಿ ಶಾಲೆಗಳ ಒಕ್ಕೂಟ

ಸುತ್ತೋಲೆಯಲ್ಲಿ ಏನಿದೆ?
ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಅನುದಾನಕ್ಕೆ ಒಳಪಡಿಸುವ, ಮಾನ್ಯತೆ ನವೀಕರಿಸುವ, ಹೆಚ್ಚುವರಿ ವಿಭಾಗಗಳಲ್ಲಿ ಅನುಮತಿಸುವ, ಶಾಲಾ ನೋಂದಣಿ ಹಾಗೂ ಹುದ್ದೆಗಳ ಭರ್ತಿ, ನೇಮಕಾತಿ ಅನುಮೋದನೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‍ನ ಅರ್ಜಿ ಸಂಖ್ಯೆ 483/2004ರ ಪ್ರಕರಣದಲ್ಲಿ ಎ.13, 2009ರಂದು ನೀಡಿರುವ ತೀರ್ಪಿನನ್ವಯ ಶಾಲಾ ಕಟ್ಟಡ ಸುರಕ್ಷತೆಯ ಪ್ರಮಾಣ ಪತ್ರವನ್ನು ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯಿಂದ ನ್ಯಾಷನಲ್ ಬಿಲ್ಡಿಂಗ್ ಕೋಡ್ ಪ್ರಮಾಣ ಪತ್ರವನ್ನು ಪಡೆಯಬೇಕು. ಹಾಗೂ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಇಲ್ಲದಿದ್ದರೆ, ಮಾನ್ಯತೆ ನವೀಕರಿಸಲು ಅವಕಾಶ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News