ಎಸಿಬಿ ದಾಳಿ ಪ್ರಕರಣ: 9 ಸರಕಾರಿ ಅಧಿಕಾರಿಗಳ ಬಳಿ 18.24 ಕೋಟಿ ರೂ. ಸಂಪತ್ತು

Update: 2021-03-10 13:53 GMT

ಬೆಂಗಳೂರು, ಮಾ.10: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿಗೊಳಗಾಗಿದ್ದ ಒಂಭತ್ತು ಸರಕಾರಿ ಅಧಿಕಾರಿಗಳ ಚರ ಮತ್ತು ಸ್ಥಿರ ಆಸ್ತಿ ಮೌಲ್ಯವನ್ನು ಎಸಿಬಿ ಪತ್ತೆಹಚ್ಚಿದ್ದು, ಒಟ್ಟು 18,24,72,783 ರೂ.ನಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಕಂಡುಬಂದಿದೆ.

ಮಂಗಳವಾರ 9 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 11 ಜಿಲ್ಲೆಗಳ, 28 ಸ್ಥಳಗಳಲ್ಲಿ ಒಟ್ಟು 52 ಎಸಿಬಿ ಅಧಿಕಾರಿಗಳು ಹಾಗೂ 174 ಸಿಬ್ಬಂದಿಗಳಿಂದ ಏಕಕಾಲಕ್ಕೆ ಶೋಧನೆ ಕೈಗೊಳ್ಳಲಾಗಿತ್ತು. ಆನಂತರ ಚರ ಮತ್ತು ಸ್ಥಿರ ಆಸ್ತಿ ಮೌಲ್ಯದ ಸಂಪತ್ತು ಕುರಿತು ಮಾಹಿತಿ ಸಂಗ್ರಹಿಸಿದಾಗ ಬಹುಕೋಟಿ ಆದಾಯ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.

ಯಾದಗಿರಿಯ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತರ್ ಅವರ ನಿವಾಸ ಮತ್ತು ಕಚೇರಿ ಮೇಲೆ ಕಾರ್ಯಾಚರಣೆ ಕೈಗೊಂಡು ತನಿಖೆ ನಡೆಸಿದಾಗ ಒಟ್ಟು ಸಂಪತ್ತಿನ ಮೌಲ್ಯ 1,39,64,873 ರೂ. ಇದೆ. ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರ ಸಂಪತ್ತಿನ ಮೌಲ್ಯ ಒಟ್ಟು 2,36,69,000 ರೂ., ಬೆಳಗಾವಿ ಸರ್ಕಲ್ ಉಪ ಮುಖ್ಯ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಹಣಮಂತ ಶಿವಪ್ಪ ಚಿಕ್ಕಣ್ಣನವರ ಒಟ್ಟು ಸಂಪತ್ತಿನ ಮೌಲ್ಯ 2,74,68,339 ರೂ. ಬೆಳಕಿಗೆ ಬಂದಿದೆ.

ಅದೇ ರೀತಿ, ಮೈಸೂರು ನಗರ ಮತ್ತು ಗ್ರಾಮಾಂತರ ಯೋಜನೆಯ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ. ವಡ್ಡರ್ ಅವರ ಸಂಪತ್ತಿನ ಮೌಲ್ಯ ಒಟ್ಟು 49,40,000 ರೂ., ಮೈಸೂರು ಜಿಲ್ಲೆ ಚೆಸ್ಕಾಂ ಅಧೀಕ್ಷಕ ಅಭಿಯಂತರ ಮುನಿಗೋಪಾಲರಾಜು ಅವರ ಒಟ್ಟು ಸಂಪತ್ತಿನ ಮೌಲ್ಯ 2,06,09,066 ರೂ. ಪತ್ತೆಯಾಗಿದೆ.

ಮೈಸೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯ ಎಫ್‍ಡಿಎ ಚನ್ನವೀರಪ್ಪ ಅವರ ನಿವಾಸ ಮತ್ತು ಕಚೇರಿ ಮೇಲೆ ಕಾರ್ಯಾಚರಣೆ ಕೈಗೊಂಡು ತನಿಖೆ ನಡೆಸಿದಾಗ 82,23,331 ರೂ. ಸಂಪತ್ತಿನ ಮೌಲ್ಯ ಪತ್ತೆಯಾಗಿದೆ.

ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್(ಬಿಎಂಟಿಎಫ್) ಪೊಲೀಸ್ ನಿರೀಕ್ಷಕ ವಿಕ್ಟರ್ ಸೈಮನ್ ಅವರ ಸಂಪತ್ತಿನ ಮೌಲ್ಯ 2,28,20,000 ರೂ. ಹಾಗೂ ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆ ಸಹಾಯಕ ನಿರ್ದೇಶಕ ಕೆ. ಸುಬ್ರಮಣ್ಯಂ ಅವರ ಸಂಪತ್ತಿನ ಮೌಲ್ಯ ಒಟ್ಟು 4,37,51,599 ರೂ. ಬೆಳಕಿಗೆ ಬಂದಿದೆ. ಇನ್ನು, ಹಾವೇರಿ ಜಿಲ್ಲೆಯ ಫ್ಯಾಕ್ಟರೀಸ್ ಮತ್ತು ಬಾಯ್ಲರ್ಸ್ ವಿಭಾಗದ ಉಪನಿರ್ದೇಶಕ ಕೆ.ಎಂ.ಪ್ರಥಮ್ ಅವರ ಒಟ್ಟು ಸಂಪತ್ತಿನ ಮೌಲ್ಯವೂ 1,70,26,575 ರೂ. ಇದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

ಮುಂದುವರೆದ ಶೋಧ
ಬೆಳಗಾವಿ ಸರ್ಕಲ್ ಉಪ ಮುಖ್ಯ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಹಣಮಂತ ಶಿವಪ್ಪ ಚಿಕ್ಕಣ್ಣನವರ ಮನೆಯಲ್ಲಿ ಎಸಿಬಿ ತನಿಖಾಧಿಕಾರಿಗಳು ಬುಧವಾರವೂ ಶೋಧ ಕಾರ್ಯ ಮುಂದುವರೆಸಿದ್ದು, ಆರೋಪಿಯ ಪುತ್ರ ತುಷಾರ ಹಣಮಂತ ಚಿಕ್ಕಣ್ಣನವರ ಹೆಸರಿನಲ್ಲಿರುವ ಶಾಂತಿನಾಥ ಹೋಮ್ಸ್ ಅಪಾರ್ಟ್‍ಮೆಂಟ್ ಕೆಳಮಹಡಿಯ ಆರ್‍ಟಿ ಎಜನ್ಸಿಸ್ ಅಂಗಡಿಯಲ್ಲಿನ ವಸ್ತುಗಳ ಲೆಕ್ಕ ಪತ್ರಗಳ ಪರಿಶೀಲನೆಯನ್ನು ಜಿಎಸ್ಟಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News