ಸಮಯವಿಲ್ಲದ ಸಿಎಂಗಳು ಹಣಕಾಸು ಇಲಾಖೆ ಏಕೆ ಇಟ್ಟುಕೊಳ್ಳುತ್ತೀರಿ?: ಎಚ್.ವಿಶ್ವನಾಥ್

Update: 2021-03-10 17:01 GMT

ಬೆಂಗಳೂರು, ಮಾ.10: ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆರ್ಥಿಕ ತಜ್ಞರಲ್ಲ. ಆದರೂ, ಬಜೆಟ್ ಮಂಡಿಸಿದ್ದಾರೆ. ಸಮಯ ಕೊಡಲು ಆಗುವುದಿಲ್ಲ ಎಂದು ಗೊತ್ತಿದ್ದರೂ ಮುಖ್ಯಮಂತ್ರಿಗಳು ಆದವರೂ ಹಣಕಾಸು ಇಲಾಖೆಯನ್ನು ಯಾಕೆ ತಮ್ಮ ಬಳಿ ಇಟ್ಟುಕೊಳ್ಳುತ್ತೀರಿ? ಆ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸಿ ಎಂದು ಸರಕಾರದ ವಿರುದ್ಧ ಆಡಳಿತ ಪಕ್ಷದ ನಾಯಕ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.  

ಬುಧವಾರ ವಿಧಾನ ಪರಿಷತ್‍ನಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ವೀರೇಂದ್ರ ಪಾಟೀಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ಸಿಎಂ ಆಗಿದ್ದಾಗ ಹಾಗೂ ದೇಶದ ಪ್ರಧಾನಿ ಆದಾಗಲೂ ಹಣಕಾಸು ಇಲಾಖೆಯನ್ನು ತಮ್ಮ ಬಳಿ ಇರಿಸಿಕೊಳ್ಳದೇ ಬೇರೆ ಅವರಿಗೆ ಇಲಾಖೆಯ ಜವಾಬ್ದಾರಿ ವಹಿಸಿದ್ದರು. ಮುಖ್ಯಮಂತ್ರಿಗಳಿಗೆ ಬಿಡುವಿಲ್ಲದ ಕೆಲಸಗಳು ಇರುತ್ತವೆ. ಇದರ ನಡುವೆ ಹಣಕಾಸು ಇಲಾಖೆಯ ನಿರ್ವಹಣೆ ಕಷ್ಟಸಾಧ್ಯ. ಈ ಸಂಬಂಧ ಈ ಹಿಂದೆ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿ ಚರ್ಚಿಸಿದ್ದಾಗ ನಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು ಎಂದರು.

ರಾಜ್ಯದ 33 ಇಲಾಖೆಗಳ ಪೈಕಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ, ಹಣಕಾಸು ಹಾಗೂ ಕಾನೂನು ಇಲಾಖೆಗಳು ಮುಖ್ಯವಾಗಿವೆ. ಎರಡು ಇಲಾಖೆಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಇವೆ. ಆರ್ಥಿಕ ಪರಿಸ್ಥಿತಿ ನಿಭಾಯಿಸಿ ರಾಜ್ಯವನ್ನು ಮುನ್ನಡೆಸುವ ಹಣಕಾಸು ಇಲಾಖೆಯ ಕೆಲಸವಾಗಿದ್ದು, ಬರೀ ಸಾಲ ಮಾಡುವ ಮೂಲಕ ಸಾರ್ವಜನಿಕರಿಗೆ ಹೊರೆ ಹಾಕಲಾಗುತ್ತಿದೆ. 

ಹಿಂದಿನ ಬಜೆಟ್‍ನಲ್ಲಿ ಎಷ್ಟು ಅನುದಾನ ಖರ್ಚಾಗಿದೆ. ನೀರಾವರಿ ಯೋಜನೆಗಳು ಎಷ್ಟಾಗಿವೆ. ಮೂಲಸೌಕರ್ಯ ಎಷ್ಟರ ಮಟ್ಟಿಗೆ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. ಆಗ ಕಳೆದ ಬಜೆಟ್ ಮತ್ತು ಪ್ರಸಕ್ತ ಸಾಲಿನ ಬಜೆಟ್ ಅನ್ನು ಹೋಲಿಕೆ ಮಾಡಿ ಚರ್ಚೆ ಮಾಡಿದರೆ ರಾಜ್ಯದ ಜನರಿಗೂ ತಿಳಿಯುತ್ತದೆ. ಆದರೆ, ಆರ್ಥಿಕ ಇಲಾಖೆ ಅಧಿಕಾರಿಗಳು ಸಿಎಂಗೆ ಟೋಪಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಹಿನ್ನೆಲೆ ಜನಪ್ರತಿನಿಧಿಗಳ ವೇತನವನ್ನು ಶೇ.30ರಷ್ಟು ಕಡಿತ ಮಾಡಲಾಯಿತು. ಆದರೆ, ಅಧಿಕಾರಿಗಳಿಗೆ ಸಂಪೂರ್ಣ ವೇತನ ನೀಡಲಾಯಿತು. ಇದು ಎಷ್ಟರ ಮಟ್ಟಿಗೆ ಸರಿ? ಅವರಿಗೂ ಕಡಿತವಾಗಲಿ. ರಾಜ್ಯದಲ್ಲಿ 7 ಲಕ್ಷಕ್ಕೂ ಹೆಚ್ಚಿನ ಸರಕಾರಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸಂಬಳ ಹಾಗೂ ಸಾರಿಗೆಗೆ 37291 ಕೋಟಿ ರೂ., ಪಿಂಚಣಿಗೆ 22,211 ಕೋಟಿ ರೂ., ಸಾಲದ ಮೇಲಿನ ಬಡ್ಡಿಗೆ 22,216 ಕೋಟಿ ರೂ., ಸಬ್ಸಿಡಿಗೆ 24 ಸಾವಿರ ಕೋಟಿ ರೂ. ಹಾಗೂ ಇತರೆ ವೆಚ್ಚಕ್ಕಾಗಿ 1.79 ಲಕ್ಷ ಕೋಟಿ ರೂ. ತೆಗೆದಿಡಬೇಕಾಗುತ್ತದೆ. 2.46 ಲಕ್ಷ ಕೋಟಿ ರೂ.ದಲ್ಲಿ ಎಷ್ಟು ಅಭಿವದ್ಧಿ ಕಾರ್ಯ ಮಾಡಲು ಸಾಧ್ಯ? ಹೀಗಾಗಿ, ವೆಚ್ಚ ಕಡಿಮೆ ಮಾಡಿ, ಆದಾಯ ಕ್ರೋಡೀಕರಣದತ್ತ ಚಿತ್ತ ಹರಿಸಬೇಕು. ಈ ಖಾತೆ ಸಿಎಂ ಬಳಿ ಇರುವುದಕ್ಕಿಂತ ಆರ್ಥಿಕ ತಜ್ಞರಿಗೆ ವಹಿಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಡಿಸಿದರು. ಕೊನೆಯಲ್ಲಿ ಸಿಎಂ ಅವರು ಮಂಡಿಸಿದ ಬಜೆಟ್ ಅನ್ನು ಸ್ವಾಗತಿಸಿದರು.

'ವಿಧಾನಸೌಧ ದಲ್ಲಾಳಿಗಳ ಅಡ್ಡೆ': ವಿಧಾನಸೌಧ ದಲ್ಲಾಳಿಗಳ ಅಡ್ಡೆಯಾಗುತ್ತಿದೆ. ಇಲ್ಲಿ ಜನಸಾಮಾನ್ಯರಿಗಿಂತ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದೆ. ಒಂದು ಬಾರಿ ವಿಧಾನಸೌಧದ ಬಾಗಿಲನ್ನು ಮುಚ್ಚಿ ಒಳಗೆ ಇರುವವರೆನ್ನೆಲ್ಲ ವಿಚಾರಣೆಗೊಳಪಡಿಸಿದರೆ ಯಾರು, ಯಾವ ಕಾರಣಕ್ಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಂಡರೆ ವಿಧಾನಸೌಧದಲ್ಲಿ ನಡೆಯುತ್ತಿರುವ ಲೂಟಿಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಮಧ್ಯವರ್ತಿಗಳೆ ಹೆಚ್ಚಾಗಿ ತುಂಬಿದ್ದಾರೆ ಎಂದು ಆರೋಪಿಸಿದರು.

'ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ': ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ವಿರೋಧ ಪಕ್ಷಗಳು ಬಲವಾಗಿಲ್ಲ. ವಿರೋಧ ಪಕ್ಷಗಳು ಪ್ರಬಲವಾಗಿದ್ದರೆ ಮಾತ್ರ ಆಡಳಿತದಲ್ಲಿ ಆರೋಗ್ಯಕರ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯ ಎಂದರು.

'ಸಿಎಂ ರ್ಯಾಂಕ್ ಕೇಳಬಹುದು': ರಾಜ್ಯದಲ್ಲಿ 83 ನಿಗಮ ಮಂಡಳಿಗಳಿವೆ. ಇದರ ಅಧ್ಯಕ್ಷರಿಗೆ ಕ್ಯಾಬಿನೆಟ್ ರ್ಯಾಂಕ್ ನೀಡಲಾಗುತ್ತಿದೆ. ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ಈ ನಿಗಮ ಮಂಡಳಿಗಳಿಗೆ ಕ್ಯಾಬಿನೆಟ್ ರ್ಯಾಂಕ್ ನೀಡಿ ದುಂದು ವೆಚ್ಚಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದೊಂದು ದಿನ ಹಿರಿಯರು ನಮಗೆ ಮುಖ್ಯಮಂತ್ರಿ ರ್ಯಾಂಕೇ ಕೊಡಿ ಎಂದು ಬೇಡಿಕೆ ಇಟ್ಟರೂ ಆಶ್ಚರ್ಯವಿಲ್ಲ ಎಂದು ಹೇಳಿದರು 

‘ಪ್ರಸ್ತುತ ದಿನಗಳಲ್ಲಿ ಎಸ್ಟಿ, ಕುರುಬ, ಪಂಚಮಸಾಲಿ ಸೇರಿ ಎಲ್ಲ ಜಾತಿಗಳಲ್ಲೂ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಮೀಸಲಾತಿ ಸೌಲಭ್ಯಕ್ಕೆ ಕೆನೆಪದರ ಪದ್ಧತಿಯನ್ನು ಜಾರಿಗೆ ತನ್ನಿ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಗೋವಿಂದ ಕಾರಜೋಳ ಅವರಿಗೆ ಮೀಸಲಾತಿ ನೀಡಿದ್ದರೆ ಅದು ನ್ಯಾಯಯುತವಾದದ್ದು. ಆದರೆ, ಅವರ ಮಕ್ಕಳಿಗೂ ಮೀಸಲಾತಿ ಬೇಕು ಎಂದರೆ ಅದು ಸರಿ ಹೋಗುವುದಿಲ್ಲ.’
-ಎಚ್.ವಿಶ್ವನಾಥ್, ಬಿಜೆಪಿ ಮುಖಂಡ

"ನಿಮಗಿಂತ ಸುಂದರಿ ಅಲ್ಲ ಬಿಡಿ"
‘ವಿಧಾನಸೌಧ ನಿತ್ಯ ಸುಂದರಿ ಇದ್ದ ಹಾಗೆ. ಇದಕ್ಕೆ ಮಾರು ಹೋಗದವರೇ ಇಲ್ಲ. ಎಷ್ಟೋ ಜನ ಅದರಲ್ಲೂ ಉತ್ತರ ಕರ್ನಾಟಕದ ಭಾಗದವರು ಮನೆ ಮಠ ಮಾರಿ ಇಲ್ಲಿ ಬರಲು ಆಗದೆ ಪಿಶಾಚಿಗಳಾಗಿದ್ದಾರೆ ಎನ್ನುತ್ತಿದ್ದಂತೆಯೇ ಈ ವೇಳೆ ಸುಂದರನಾ ಅಥವಾ ಸುಂದರಿನಾ ಎಂದು ಭಾರತಿ ಶೆಟ್ಟಿ ಅವರು ವಿಶ್ವನಾಥ್ ಅವರನ್ನು ಕಾಲೆಳೆದರು. ಇದಕ್ಕೆ ವಿಧಾನಸೌಧ ನಿಮಗಿಂತ ಸುಂದರಿ ಅಲ್ಲ ಬಿಡಿ ಎಂದು ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹಾಸ್ಯ ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News