ಉನ್ನತ ಶಿಕ್ಷಣದ ಬಗ್ಗೆ ಗೊಂದಲವಿದೆಯೇ? ಅಮೆರಿಕ,ಬ್ರಿಟನ್ ಮತ್ತು ಕೆನಡಾದಲ್ಲಿ ಅವಕಾಶಗಳ ಕುರಿತು ಮಾಹಿತಿಗಳಿಲ್ಲಿವೆ

Update: 2021-03-13 18:18 GMT
ಸಾಂದರ್ಭಿಕ ಚಿತ್ರ

ಅಮೆರಿಕ,ಬ್ರಿಟನ್ ಮತ್ತು ಕೆನಡಾ ದೇಶಗಳು ವಿದ್ಯಾರ್ಥಿಗಳ ಪಾಲಿಗೆ ಮೂರು ಜನಪ್ರಿಯ ಅಧ್ಯಯನ ತಾಣಗಳಾಗಿವೆ. ವಿಶ್ವದ ಅತ್ಯುತ್ತಮ ವಿವಿಗಳಲ್ಲಿ ಹೆಚ್ಚಿನವು ಈ ದೇಶಗಳಲ್ಲಿದ್ದು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವ್ಯಾಪಕ ಶ್ರೇಣಿಯ ಕಾಲೇಜುಗಳನ್ನು ಹೊಂದಿವೆ. ಯಾವ ದೇಶದಲ್ಲಿ ವ್ಯಾಸಂಗವನ್ನು ಮುಂದುವರಿಸಬೇಕು ಎನ್ನುವುದನ್ನು ನಿರ್ಧರಿಸಲು ನೆರವಾಗಬಲ್ಲ ಕೆಲವು ಪ್ರಮುಖ ಮಾಹಿತಿಗಳಿಲ್ಲಿವೆ.....

ಶಿಕ್ಷಣ ಶುಲ್ಕ

ಅಮೆರಿಕದಲ್ಲಿ ಸರಾಸರಿ ವಾರ್ಷಿಕ ಶಿಕ್ಷಣ ಶುಲ್ಕ 28,000 ಡಾ.ಗಳಷ್ಟಿದೆ,ಆದರೆ ನೀವು ಸರಕಾರಿ ಅಥವಾ ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ ಯಾವುದಕ್ಕೆ ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿ ಶಿಕ್ಷಣ ಶುಲ್ಕವು ವಾರ್ಷಿಕ 50,000 ಡಾ.ವರೆಗೂ ಹೆಚ್ಚುತ್ತದೆ.

ಬ್ರಿಟನ್‌ನಲ್ಲಿ ಸರಾಸರಿ ಶಿಕ್ಷಣ ಶುಲ್ಕವು ವಾರ್ಷಿಕ ಸುಮಾರು 20,000 ಡಾ.ಗಳಷ್ಟಿದೆ.

ನೀವು ಯಾವ ಕೋರ್ಸ್ ಮತ್ತು ವಿವಿಗೆ ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿ ಕೆನಡಾದಲ್ಲಿ ವಾರ್ಷಿಕ 7,500 ಡಾ.ಗಳಿಂದ ಹಿಡಿದು 26,000 ಡಾ.ವರೆಗೆ ಶಿಕ್ಷಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ,ಅಂದರೆ ಸರಾಸರಿ ವಾರ್ಷಿಕ ಶುಲ್ಕ 12,000 ಡಾ.ಗಳಷ್ಟಿದೆ.

ಜೀವನ ವೆಚ್ಚ

ಬ್ರಿಟನ್‌ನಲ್ಲಿ ಬಾಡಿಗೆ ಮತ್ತು ಜೀವನ ವೆಚ್ಚಗಳು ವಾರ್ಷಿಕ 16,000 ಡಾ.ಗಳಿಂದ ಹಿಡಿದು 22,000 ಡಾ.ಗಳಷ್ಟಾಗುತ್ತದೆ. ಹೆಚ್ಚಿನ ಪದವಿ ಕೋರ್ಸ್‌ಗಳ (ಭಾಷೆಗಳು ಮತ್ತು ವೈದ್ಯಕೀಯ ಸಂಬಂಧಿತ ಕೋರ್ಸ್‌ಗಳನ್ನು ಹೊರತುಪಡಿಸಿ) ಅವಧಿ ಮೂರು ವರ್ಷಗಳಾಗಿವೆ. ಅಂದರೆ ಬ್ರಿಟನ್‌ನಲ್ಲಿ ಪದವಿ ಶಿಕ್ಷಣವನ್ನು ಮುಗಿಸಲು ಮೂರು ವರ್ಷಗಳಿಗೆ ಒಟ್ಟು ಜೀವನ ವೆಚ್ಚ 48,000 ಡಾ.ಗಳಿಂದ ಹಿಡಿದು 66,000 ಡಾ.ಗಳಷ್ಟಾಗುತ್ತದೆ. ನೀವು ಲಂಡನ್‌ನಂತಹ ಹೆಚ್ಚು ವೆಚ್ಚದಾಯಕ ನಗರದಲ್ಲಿ ವ್ಯಾಸಂಗ ಮಾಡಲು ಬಯಸಿದರೆ ಈ ವೆಚ್ಚವು ಇನ್ನಷ್ಟು ಹೆಚ್ಚಬಹುದು.

ಅಮೆರಿಕದಲ್ಲಿ ವಾರ್ಷಿಕ ಸರಾಸರಿ ಜೀವನ ವೆಚ್ಚ 16,000 ಡಾ.ಗಳಷ್ಟಿದ್ದರೂ,ನಿಮ್ಮ ವಿವಿ ಇರುವ ಪ್ರದೇಶ (ನಗರ ಅಥವಾ ಗ್ರಾಮೀಣ)ವನ್ನು ಮತ್ತು ನೀವು ಕ್ಯಾಂಪಸ್‌ನೊಳಗೆ ವಾಸವಿರುತ್ತೀರೋ ಅಥವಾ ಕ್ಯಾಂಪಸ್‌ನ ಹೊರಗೋ ಎನ್ನುವುದನ್ನು ಅವಲಂಬಿಸಿ ಹೆಚ್ಚುಕಡಿಮೆಯಾಗಬಹುದು.

ಕೆನಡಾದಲ್ಲಿ ವಿದ್ಯಾರ್ಥಿಗಳಿಗೆ ಸರಾಸರಿ ವಾರ್ಷಿಕ ಜೀವನ ವೆಚ್ಚ 10,000 ಡಾ.ಗಳಷ್ಟಿದೆ. ಅದು 8,550 ಡಾ.ಗಳಷ್ಟು ಕಡಿಮೆಗೂ ಇಳಿಯಬಹುದು ಅಥವಾ 13,000 ಡಾ.ಗಳನ್ನೂ ಮೀರಬಹುದು.

ವಿದ್ಯಾರ್ಥಿ ವೇತನಗಳು

ಕೆನಡಾದ ವಿವಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ವ್ಯಾಪಕ ವಿದ್ಯಾರ್ಥಿ ವೇತನಗಳು ಮತ್ತು ಆರ್ಥಿಕ ನೆರವಿನ ಆಯ್ಕೆಗಳು ಲಭ್ಯವಿವೆ. ಆದರೆ ವಿಷಾದದ ವಿಷಯವೆಂದರೆ ಬ್ರಿಟಿಷ್ ವಿವಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಇಂತಹ ಸೌಲಭ್ಯವಿಲ್ಲ. ಬ್ರಿಟನ್‌ನ ಉತ್ತಮ ವಿವಿಗಳಲ್ಲಿ ವಿದ್ಯಾರ್ಥಿವೇತನ ಅಥವಾ ಆರ್ಥಿಕ ನೆರವು ದೊರೆಯುವುದು ಅಪರೂಪ.

ಅಮೆರಿಕದಲ್ಲಿ ಅಧ್ಯಯನ ವೆಚ್ಚಕ್ಕೆ ಹೋಲಿಸಿದರೆ ಮೆರಿಟ್ ಸ್ಕಾಲರ್‌ಶಿಪ್ ಅವಕಾಶಗಳು ಕಡಿಮೆ. ಹಲವಾರು ವಿವಿಗಳು ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯವನ್ನು ಆಧರಿಸಿ ಶೇ.100ರವರೆಗೆ ಹಣಕಾಸು ನೆರವನ್ನು ಒದಗಿಸುತ್ತವೆ.

ಶಿಕ್ಷಣದ ಗುಣಮಟ್ಟ

ವಿಶ್ವದ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪೈಕಿ ಎಂಐಟಿ,ಹಾರ್ವರ್ಡ್ ಮತ್ತು ಸ್ಟಾನ್‌ಫೋರ್ಡ್ ಸೇರಿದಂತೆ ಐದು ಸಂಸ್ಥೆಗಳು ಅಮೆರಿಕದಲ್ಲಿಯೇ ಇವೆ. ಒಟ್ಟಾರೆಯಾಗಿ ಅಮೆರಿಕದ 170 ವಿವಿಗಳು ವಿಶ್ವದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಾಗಿ ಪರಿಗಣಿಸಲ್ಪಟ್ಟಿವೆ. ವರ್ಷವಿಡೀ ನಿರಂತರ ಮೌಲ್ಯಮಾಪನಗಳು ಮತ್ತು ವರದಿಗಳನ್ನು ಆಧರಿಸಿ ದರ್ಜೆಗಳನ್ನು ನೀಡಲಾಗುತ್ತದೆ. ವಿಶ್ವದ 20 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಿಟನ್‌ನ ಆಕ್ಸ್‌ಬ್ರಿಜ್‌ನಂತಹ ನಾಲ್ಕು ಸಂಸ್ಥೆಗಳು ಸೇರಿವೆ. ತರಗತಿಗಳು ಉಪನ್ಯಾಸ ಆಧಾರಿತವಾಗಿರುತ್ತವೆ ಮತ್ತು ಅಮೆರಿಕಕ್ಕಿಂತ ಭಿನ್ನವಾಗಿ ಇಲ್ಲಿ ಟರ್ಮ್‌ನ ಅಂತ್ಯದಲ್ಲಿಯ ಪರೀಕ್ಷೆಗಳಲ್ಲಿ ಅಂಕಗಳಿಕೆಯ ಆಧಾರದಲ್ಲಿ ಸಮಗ್ರ ಅಂತಿಮ ಗ್ರೇಡ್‌ನ್ನು ನೀಡಲಾಗುತ್ತದೆ. ಬ್ರಿಟನ್ ಮತ್ತು ಭಾರತಗಳ ಕಾನೂನು ವ್ಯವಸ್ಥೆಗಳು ಹೆಚ್ಚು ಕಡಿಮೆ ಒಂದೇ ರೀತಿಯಿರುವುದರಿಂದ ಬ್ರಿಟನ್ ನಿರ್ದಿಷ್ಟವಾಗಿ ಭಾರತದ ಪದವಿ ಶಿಕ್ಷಣದ ಆಕಾಂಕ್ಷಿಗಳನ್ನು ತನ್ನತ್ತ ಆಕರ್ಷಿಸುತ್ತದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಅಂತಿಮ ಡಿಗ್ರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ವಿಶ್ವದ ಅತ್ಯುತ್ತಮ ನೂರು ಶಿಕ್ಷಣ ಸಂಸ್ಥೆಗಳಲ್ಲಿ ಕೆನಡಾದ ಮೂರು ಸಂಸ್ಥೆಗಳು ಸೇರಿವೆ. ಟೊರೊಂಟೊ,ಬ್ರಿಟಿಷ್ ಕೊಲಂಬಿಯಾ ಮತ್ತು ಮೆಕ್‌ಗಿಲ್ ವಿವಿಗಳು ಬಿಜಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಎಸ್‌ಟಿಇಎಂ (ವಿಜ್ಞಾನ,ತಂತ್ರಜ್ಞಾನ,ಇಂಜಿನಿಯರಿಂಗ್ ಮತ್ತು ಗಣಿತ) ಕೋರ್ಸ್‌ಗಳನ್ನು ಮಾಡಲು ಅತ್ಯುನ್ನತ ವಿವಿಗಳಾಗಿವೆ. ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಕೆನಡಾ ಅಮೆರಿಕ ಮತ್ತು ಬ್ರಿಟನ್‌ಗಳ ನಡುವೆ ಇದೆ.

ಪ್ರವೇಶ ಮತ್ತು ಅರ್ಜಿ ಸಲ್ಲಿಕೆ ವಿಧಾನ

ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಮಾತ್ರವಲ್ಲದೆ ನಾಯಕತ್ವ ಗುಣ,ಸಮುದಾಯ ಸೇವೆ,ವಿಶ್ಲೇಷಣಾತ್ಮಕ ಸಾಮರ್ಥ್ಯ ಇತ್ಯಾದಿಗಳ ಮೌಲ್ಯಮಾಪನ ನಡೆಸುವ ವ್ಯಾಪಕ ಅರ್ಜಿ ಸಲ್ಲಿಕೆ ವಿಧಿವಿಧಾನಗಳನ್ನು ಅಮೆರಿಕವು ಹೊಂದಿದೆ. ಎಸ್‌ಎಟಿ,ಎಸಿಟಿ,ಎಪಿಯಂತಹ ಪ್ರಮಾಣಿತ ಪರೀಕ್ಷೆಗಳು,ವಿವಿಧ ಪ್ರಬಂಧಗಳು,ಶಿಕ್ಷಕರ ಶಿಫಾರಸುಗಳು,ಸಂದರ್ಶನಗಳು ಇತ್ಯಾದಿಗಳು ಉನ್ನತ ಅಮೆರಿಕನ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾವಕಾಶವನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದಕ್ಕೆ ಹೋಲಿಸಿದರೆ ಬ್ರಿಟನ್‌ನಲ್ಲಿ ಅರ್ಜಿ ಸಲ್ಲಿಕೆ ವಿಧಾನವು ಹೆಚ್ಚು ಸರಳವಾಗಿದೆ. ವಿದ್ಯಾರ್ಥಿಗಳು ಕೇವಲ ತಾವು ಏನನ್ನು ಕಲಿಯಬಯಸಿದ್ದೇವೆ ಎನ್ನುವುದರ ಬಗ್ಗೆ ವಿವರಗಳುಳ್ಳ ಸ್ಟೇಟ್‌ಮೆಂಟ್ ಆಫ್ ಪರ್ಪಸ್ ಅಥವಾ ಉದ್ದೇಶದ ಹೇಳಿಕೆ ಮತ್ತು ಶಿಕ್ಷಕರ ಶಿಫಾರಸಿನೊಂದಿಗೆ ಯುಸಿಎಎಸ್ ಪೋರ್ಟಲ್‌ನ ಮೂಲಕ ಐದು ಬ್ರಿಟನ್ ವಿವಿಗಳಿಗೆ ಅರ್ಜಿ ಸಲ್ಲಿಸಬಹುದು.

 ಕೆನಡಾದಲ್ಲಿ ವ್ಯಾಸಂಗವನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳು ಪ್ರತಿಯೊಂದು ವಿವಿಗೂ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ (ಒಂಟಾರಿಯೊ ಪ್ರದೇಶದ ವಿವಿಗಳು ‘ಒಯುಎಸಿ’ ಎಂಬ ಸಾಮಾನ್ಯ ಅರ್ಜಿ ನಮೂನೆಯನ್ನು ಹೊಂದಿವೆ). ಪ್ರತಿ ವಿವಿಗೂ ಕೆಲವು ಪ್ರಬಂಧಗಳು ಮತ್ತು/ಅಥವಾ ವೀಡಿಯೊ ಉತ್ತರಗಳೊಂದಿಗೆ ಲಿಪ್ಯಂತರಗಳು ಮತ್ತು ಶಿಫಾರಸು ಪತ್ರವನ್ನು ಸಲ್ಲಿಸುವುದು ಅಗತ್ಯವಾಗುತ್ತದೆ.

 ಕೆನಡಾ ಮತ್ತು ಬ್ರಿಟನ್ ಅಂತಿಮ ಬೋರ್ಡ್ ಅಂಕಗಳಿಗೆ ಸಂಬಂಧಿಸಿದ ಷರತ್ತುಗಳೊಂದಿಗೆ ತಮ್ಮ ಅಂತಿಮ ಪ್ರವೇಶ ನಿರ್ಧಾರಗಳನ್ನು ತಿಳಿಸುತ್ತವೆ. ಆದರೆ ಅಮೆರಿಕವು ಬೋರ್ಡ್ ಪರೀಕ್ಷೆಗಳು ಮುಗಿಯುವ ಮುನ್ನವೇ ವಿದ್ಯಾರ್ಥಿಗಳಿಗೆ ಬೇಷರತ್ ಪ್ರವೇಶವನ್ನು ನೀಡುತ್ತದೆ. ಕೆನಡಾ ಮತ್ತು ಅಮೆರಿಕ ಮುನ್ನಂದಾಜಿನ ಅಂಕಗಳು ಸೇರಿದಂತೆ 9ರಿಂದ 12ನೇ ಗ್ರೇಡ್‌ನ ಲಿಪ್ಯಂತರಗಳನ್ನು ಕೇಳುತ್ತವೆ,ಆದರೆ ಬ್ರಿಟನ್ ಕೇವಲ 10ನೇ ಗ್ರೇಡ್‌ನ ಅಂತಿಮ ಹಂತದ ಮತ್ತು 12ನೇ ಗ್ರೇಡ್‌ನ ಮುನ್ನಂದಾಜಿನ ಅಂಕಗಳನ್ನು ಕೇಳುತ್ತವೆ.

ವೀಸಾ ಪಡೆಯುವುದು ಹೇಗೆ?

ಅಮೆರಿಕಕ್ಕಾಗಿ ವಿದ್ಯಾರ್ಥಿ ವೀಸಾ ಪಡೆಯುವ ಮತ್ತು ಉಳಿಸಿಕೊಳ್ಳುವ ಪ್ರಕ್ರಿಯೆಯು ಸಂಕೀರ್ಣವಾಗಿದ್ದು,ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.

ಬ್ರಿಟನ್ ವೀಸಾ ನೀಡಲು ಪಾಯಿಂಟ್ ಆಧಾರಿತ ಸುದೀರ್ಘ ವ್ಯವಸ್ಥೆಯನ್ನು ಹೊಂದಿದೆ.

ಕೆನಡಾದ ವೀಸಾಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸರಳವಾಗಿದ್ದು,ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ.

ಉದ್ಯೋಗಾವಕಾಶಗಳು

ಕೆನಡಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪೋಸ್ಟ್ ಗ್ರಾಜ್ಯುಯೇಶನ್ ವರ್ಕ್ ಪರ್ಮಿಟ್ (ಪಿಜಿಡಬ್ಲ್ಯುಪಿ) ಯೋಜನೆಯ ಮೂಲಕ ಪದವಿಯ ಬಳಿಕ ತನ್ನ ರಾಷ್ಟ್ರದಲ್ಲಿ ಗರಿಷ್ಠ ಮೂರು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ನೀಡುತ್ತದೆ. ಇದು ಕೆನಡಾದಲ್ಲಿ ಉದ್ಯೋಗ ಹುಡುಕಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವುದು ಮಾತ್ರವಲ್ಲ, ಖಾಯಂ ನಿವಾಸಿ ಸ್ಥಾನಮಾನ ಮತ್ತು ಸಂಭಾವ್ಯ ಪೂರ್ಣ ಪೌರತ್ವವನ್ನು ಪಡೆಯಲು ಮಾರ್ಗವನ್ನು ತೆರೆಯುತ್ತದೆ.

ಬ್ರಿಟನ್ ಸರಕಾರವು ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ತನ್ನ ವೀಸಾ ನಿಯಮಗಳನ್ನು ಇತ್ತೀಚಿಗೆ ಬದಲಿಸಿದೆ. ನೂತನ ನಿಯಮಗಳಂತೆ 2020ರಲ್ಲಿ ಅಥವಾ ಅದರ ನಂತರ ಬ್ರಿಟನ್‌ನಲ್ಲಿ ತಮ್ಮ ಅಧ್ಯಯನಗಳನ್ನು ಆರಂಭಿಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ನೂತನ ಪೋಸ್ಟ್-ಸ್ಟಡಿ ವರ್ಕ್ ವೀಸಾದ ಲಾಭವನ್ನು ಪಡೆಯುತ್ತಾರೆ. ಈ ವೀಸಾ ಪದವಿ ಶಿಕ್ಷಣದ ಬಳಿಕ ಉದ್ಯೋಗವನ್ನು ಹುಡುಕಿಕೊಳ್ಳಲು ಎರಡು ವರ್ಷಗಳ ಬ್ರಿಟನ್‌ನಲ್ಲಿಯೇ ಉಳಿಯಲು ಅವಕಾಶವನ್ನು ನೀಡುತ್ತದೆ.

ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಒಂದು ವರ್ಷ ಅವಧಿಯ ಆಪ್ಶನಲ್ ಪ್ರಾಕ್ಟಿಕಲ್ ಟ್ರೇನಿಂಗ್ (ಒಪಿಟಿ)ನ ಅವಕಾಶ ದೊರೆಯುತ್ತದೆ. ಎಸ್‌ಟಿಇಎಂ ವಿದ್ಯಾರ್ಥಿಗಳಿಗೆ ಮಾತ್ರ ಒಪಿಟಿಯ ಅವಧಿ ಮೂರು ವರ್ಷಗಳದ್ದಾಗಿರುತ್ತದೆ. ಈ ವರ್ಕ್ ಪರ್ಮಿಟ್‌ನ್ನು ವರ್ಕ್ ವೀಸಾ ಅಥವಾ ಎಚ್1ಬಿಗೆ ಪರಿವರ್ತಿಸಲು ವಿದ್ಯಾರ್ಥಿಗಳು ಯಾವುದಾದರೂ ಕಂಪನಿ ಅಥವಾ ಸಂಸ್ಥೆಯ ಪ್ರಾಯೋಜಕತ್ವವನ್ನು ಪಡೆದಿರಬೇಕಾಗುತ್ತದೆ ಮತ್ತು ಅದಿದ್ದರೂ ಲಾಟರಿ ಪ್ರಕ್ರಿಯೆಯು ಅತ್ಯಂತ ಅನಿರ್ದಿಷ್ಟವಾಗಿರುತ್ತದೆ ಮತ್ತು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ.

 ಬ್ರಿಟನ್ ಮತ್ತು ಕೆನಡಾದಲ್ಲಿ ಹೊಸ ಪದವೀಧರರಿಗೆ ವಾರ್ಷಿಕ ಸುಮಾರು 40,000 ಡಾ.ವೇತನ ದೊರೆತರೆ,ಅತ್ಯಂತ ಹೆಚ್ಚಿನ ಶಿಕ್ಷಣ ಶುಲ್ಕವನ್ನು ವಿಧಿಸುವ ಅಮೆರಿಕವು ವಾರ್ಷಿಕ ಸರಾಸರಿ 60,000 ಡಾ.ಗಳಷ್ಟು ಹೆಚ್ಚಿನ ವೇತನವನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News