ಅರಣ್ಯ ನಾಶಕ್ಕೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ: ಅರವಿಂದ ಲಿಂಬಾವಳಿ

Update: 2021-03-14 16:43 GMT

ಗದಗ, ಮಾ. 14: ಅರಣ್ಯಕ್ಕೆ ಬೆಂಕಿ ಬೀಳಲು ಮತ್ತು ಅರಣ್ಯ ನಾಶಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ರವಿವಾರ ಗದಗ ಜಿಲ್ಲೆಯ ಶೆಟ್ಟಿಕೆರೆ ಹಾಗೂ ಅದರ ಸುತ್ತಮುತ್ತಲ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಬೆಂಕಿ ಬಿದ್ದು ನಾಶವಾದ ಅರಣ್ಯಪ್ರದೇಶವನ್ನು ವೀಕ್ಷಿಸಿದರು.

ಆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಈಗಾಗಲೇ ಅರಣ್ಯ ನಾಶಕ್ಕೆ ಕಾರಣರಾದವರ ವಿರುದ್ಧ  ಕೇಸು ದಾಖಲು ಮಾಡಲಾಗಿದೆ. ಅವರ ಮೇಲೆ ಕಠಿಣವಾದ ಕ್ರಮ ಜರುಗಿಸಲಾಗುತ್ತದೆ. ಅರಣ್ಯ ಉಳಿಯಬೇಕಾದರೆ ಜನರು ಅರಣ್ಯ ಇಲಾಖೆಯ ಜೊತೆ ಕೈಜೋಡಿಸಿ ಅರಣ್ಯ ರಕ್ಷಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕುರಿಗಾಹಿಗಳು ತಮ್ಮ ಕುರಿಗಳಿಗಾಗಿ ಹುಲ್ಲು ಸಂಗ್ರಹಿಸಲು ಬರುತ್ತಾರೆ. ಅಂತಹವರನ್ನು ಕ್ರಿಮಿನಲ್ ಎಂದು ಹೇಳಲು ಬರುವುದಿಲ್ಲ. ಇಂತಹ ಕುರಿಗಾಹಿಗಳು ಬೇಸಿಗೆಯಲ್ಲಿ ಇಲಾಖೆಯೊಂದಿಗೆ ಕೈಜೋಡಿಸಿ ಅರಣ್ಯ ಸ್ವಚ್ಛಗೊಳಿಸಲು ಸಹಕರಿಸಬೇಕು ಎಂದರು. ಶೆಟ್ಟಿಗೆರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಬೆಳೆಸಲು ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಅಗತ್ಯವಾದ ಸೂಚನೆಯನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದೇನೆ ಎಂದರು.

ಜಿಲ್ಲೆಯಲ್ಲಿರುವ ಅರಣ್ಯ ಸಂಬಂಧಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಹಾಗೆಯೇ ಸಿಬ್ಬಂದಿಗಳಿಗೆ ಇರುವ ಸಮಸ್ಯೆ ಬಗ್ಗೆಯೂ ಚರ್ಚಿಸಿದ್ದೇನೆ. ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News