ಹುಲಿ ಸೆರೆ ಕಾರ್ಯಾಚರಣೆ ವಿಫಲ: ಮಡಿಕೇರಿಯಲ್ಲಿ ರೈತ ಸಂಘಟನೆ, ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

Update: 2021-03-15 18:37 GMT

ಮಡಿಕೇರಿ, ಮಾ.15: ಮೂರು ಮಾನವ ಜೀವ ಬಲಿ ಮತ್ತು ಸಾಲು ಸಾಲು ಜಾನುವಾರುಗಳ ಸಾವಿಗೆ ಕಾರಣವಾಗಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿಲ್ಲವೆಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಅರಣ್ಯ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಾನವ ಜೀವಹಾನಿಯಾದರೂ ಅರಣ್ಯ ಸಚಿವರು ಸ್ಥಳಕ್ಕೆ ಬಾರದೆ ಇರುವ ಕ್ರಮವನ್ನು ಖಂಡಿಸಿದರು. 

ರೈತ ಸಂಘದ ಹೋರಾಟಕ್ಕೆ ವಿವಿಧ ಸಂಘ, ಸಂಸ್ಥೆಗಳು ಹಾಗೂ ದಕ್ಷಿಣ ಕೊಡಗಿನ ಗ್ರಾಮಸ್ಥರು ಬೆಂಬಲ ಸೂಚಿಸಿ ವಾಹನ ಜಾಥಾದಲ್ಲಿ ಪಾಲ್ಗೊಂಡಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿದ ಪರಿಣಾಮ ಹೆದ್ದಾರಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. 

ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಅವರ ನೇತೃತ್ವದ ತಂಡ ತಕ್ಷಣ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ವನ್ಯಜೀವಿ ದಾಳಿಯ ಗಾಂಭೀರ್ಯತೆಯನ್ನು ಅರಿತು ಸರ್ಕಾರಕ್ಕೆ ಸೂಕ್ತ ಮಾಹಿತಿಯನ್ನು ರವಾನಿಸಬೇಕೆಂದು ಹೇಳಿದರು.  

ನಂತರ ಮಾತನಾಡಿದ ಮನುಸೋಮಯ್ಯ, ಪರಿಸರವನ್ನೇ ಪೂಜಿಸುತ್ತಾ ಬರುತ್ತಿರುವ ಕೊಡಗಿನ ಜನ ಇಲ್ಲಿಯವರೆಗೆ ಕಾಡುಗಳನ್ನು ಉಳಿಸಿ ಬೆಳೆಸಿದ್ದಾರೆ. ಪ್ರಾಣಿ, ಪಕ್ಷಿಗಳನ್ನು ದೇವರಂತೆ ಕಾಣುತ್ತಿದ್ದಾರೆ, ಆದರೆ ಪ್ರಾಣಿಗಳಿಂದಲೇ ಮನಷ್ಯರಿಗೆ ತೊಂದರೆಯಾಗುತ್ತಿರುವುದು ವಿಷಾದನೀಯ ಎಂದರು.

ಫೆ.21 ರಿಂದ ಹುಲಿ ಸೆರೆ ಕಾರ್ಯಾಚರಣೆ ಪ್ರಾರಂಭವಾಗಿದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಕಾಣ ಸಿಗುವ ಹುಲಿಗಳು ಅರಣ್ಯ ಅಧಿಕಾರಿಗಳಿಗೆ ಕಂಡುಬರುತ್ತಿಲ್ಲ. 150 ಸಿಬ್ಬಂದಿ, ಆರು ಆನೆ ಹಾಗೂ ವೈದ್ಯಾಧಿಕಾರಿಗಳು ಸೇರಿ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಇಲ್ಲಿಯವರೆಗೆ ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಬಂದು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿಲ್ಲ ಎಂದು ಮನುಸೋಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಾಚರಣೆಯ ಹೆಸರಿನಲ್ಲಿ ಜನಸಾಮಾನ್ಯರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತಮ್ಮ ಜೀವನೋಪಯಕ್ಕಾಗಿ ಕೃಷಿಕರು ಹಸುಗಳನ್ನು ಸಾಕಿದ್ದಾರೆ. ಆದರೆ ನಿರಂತರ ಹುಲಿ ದಾಳಿ ನಡೆಸಿ ಹಸುಗಳನ್ನು ಕೊಲ್ಲುತ್ತಿದ್ದು, ಸರ್ಕಾರ ಭಿಕ್ಷೆಯ ರೂಪದಲ್ಲಿ ರೂ.10 ಸಾವಿರವನ್ನು ಪರಿಹಾರವಾಗಿ ನೀಡುತ್ತಿದೆ. ಇದರ ಬದಲು ಮತ್ತೊಂದು ಹಸುವನ್ನು ನೀಡಿದರೆ ರೈತರ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೊಡಗಿನ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಮೈಸೂರಿಗೆ ಮಾತ್ರ ಸೀಮಿತವಾಗಿರುವ ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರದಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಬೇಕು, ತೋಟಗಳಲ್ಲಿರುವ ಕಾಡು ಆನೆಗಳನ್ನು ತಕ್ಷಣವೇ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು, ಆನೆ, ಹುಲಿ ಸಂತತಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿರುವ ವನ್ಯ ಜೀವಿಗಳನ್ನು ತಡೆಯಲು ಸೋಲಾರ್ ಬೇಲಿ, ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣ ಅಥವಾ ಕಂದಕ ನಿರ್ಮಿಸಬೇಕು, ಶಾಲಾ ವಿದ್ಯಾರ್ಥಿಗಳು, ತೋಟ ಕಾರ್ಮಿಕರು, ಸಾರ್ವಜನಿಕರು ಭಯಭೀತರಾಗಿದ್ದು, ಇಲಾಖೆಯಿಂದ ಸಾರಿಗೆ ವ್ಯವಸ್ಥೆ ಮತ್ತು ಗನ್ ಮೆನ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವನ್ಯಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರವಾಗಿ ರೂ.50 ಲಕ್ಷ ನೀಡಬೇಕು, ಜಾನುವಾರುಗಳ ಪರಿಹಾರವನ್ನು ಐದು ಪಟ್ಟು ಹೆಚ್ಚಿಸಬೇಕು ಮತ್ತು ಸ್ಥಳದಲ್ಲೇ ನೀಡಬೇಕು, ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗಾಗಿ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಶಾಶ್ವತವಾಗಿ ಕಲ್ಪಿಸಬೇಕು, ವನ್ಯಜೀವಿಗಳಿಂದ ಮಾನವ ಪ್ರಾಣ ಕಳೆದುಕೊಂಡರೆ ವಿಮೆ ಪರಿಹಾರ ಅರಣ್ಯ ಇಲಾಖೆಯ ಮೂಲಕ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಜಿಲ್ಲೆಯ ಜನ ಪ್ರತಿದಿನ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದು, ಶಾಸ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಹೋರಾಟ ನಡೆಸುವಂತಾಗಬೇಕು ಎಂದರು. 

ಶಾಸಕರು, ಸಂಸದರು ತಕ್ಷಣ ಎಚ್ಚೆತ್ತುಕೊಂಡು ಅರಣ್ಯ ಸಚಿವರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ಕೊಡಗಿನ ಜನತೆಗೆ ಹಾಗೂ ಬೆಳೆಗಾರರಿಗೆ  ಶಾಂತಿಯುತವಾಗಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಸಹಾಯಕತೆ ತೋರುತ್ತಿರುವುದೇ ಈ ಅನಾಹುತಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು. 

ಅರಣ್ಯ ಸಚಿವರು ಇನ್ನಾದರೂ ಅಧಿವೇಶನವನ್ನು ಬಿಟ್ಟು ಕೊಡಗಿಗೆ ಆಗಮಿಸಿ ಇಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತಾಗಬೇಕು ಎಂದರು. ಕೊಡಗಿನಲ್ಲಿ ಇಲ್ಲಿಯವರೆಗೆ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ರೈತರು ಕುರ್ಚಿಗಾಗಿ ಹೋರಾಟ ನಡೆಸದೆ, ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ. ಹುಲಿ ಜೀವಕ್ಕೆ ಬೆಲೆ ಕೊಡುವ ಅಧಿಕಾರಿಗಳು ಮನುಷ್ಯರ ಪ್ರಾಣಕ್ಕೆ ಬೆಲೆ ಕೊಡಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಮುಂದೆಯೂ ಕಾನೂನಿನಡಿಯಲ್ಲಿ ಕೆಲಸ ಮಾಡಿದರೆ ಒನ್ನೂ ಇಪ್ಪತ್ತು ವರ್ಷಗಳು ಕಳೆದರೂ ಇದೆ ವಾತಾವರಣ ಸೃಷ್ಠಿಯಾಗಲಿದ್ದು, ಶಾಸಕರು, ಸಂಸದರು ಕೊಡಗಿನ ಪರಿಸ್ಥಿತಿಯನ್ನು ಅರಿತು ವೈಜ್ಞಾನಿಕ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಸಚಿವರು ಕೂಡಲೇ ಕೊಡಗಿಗೆ ಆಗಮಿಸಿ ರೈತಾಪಿ ವರ್ಗದ ಸಮಸ್ಯೆಗನ್ನು ಕೇಳಿ ಕ್ರಮ ಕೈಗೊಂಡಲಿ ಮುಂದಿನ ದಿನಗಳಲ್ಲಿಯೂ ಜನರಿಂದ ಉತ್ತಮ ಬೆಂಬಲ ಸಿಗಲಿದೆ ಎಂದರು.  

ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪುಗೌಡ ಮಾತನಾಡಿ, ಸರ್ಕಾರ ಕಾನೂನಿನ ಚೌಕಟ್ಟಿನೊಂದಿಗೆ ಮಾನವೀಯತೆಯ ನೆಲೆಗಟ್ಟಿನಲ್ಲೂ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂದರು. ಅರಣ್ಯ ಸಚಿವರು ಇಲ್ಲಿನ ಬೆಳೆಗಾರರು, ರೈತರೊಂದಿಗೆ ಚರ್ಚಿಸಿ ಮನಷ್ಯರನ್ನು ಬಲಿತೆಗೆದುಕೊಂಡಿರುವ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರೈತ ಹೋರಾಟ ಸೇರಿದಂತೆ ವಿವಿಧ ರೈತ ಸಂಘಟನೆಯೊಂದಿಗೆ ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಲಿದೆ ಎಂದು ಎಚ್ಚರಿಕೆ ನೀಡಿದರು. 

ಕೆಪಿಸಿಸಿ ಸದಸ್ಯ ಹರೀಶ್ ಬೋಪ್ಪಣ್ಣ ಮಾತನಾಡಿ, ಕೃಷಿಯನ್ನೆ ನಂಬಿ ಜೀವನ ನಡೆಸುತ್ತಿರುವ ಬೆಳೆಗಾರರು, ಕೂಲಿ ಕಾರ್ಮಿಕರು ಕಾಡು ಪ್ರಾಣಿಗಳ ಹಾವಳಿಯಿಂದ ನಿರಂತರ ಆತಂಕದ ಜೀವನ ನಡೆಸುವಂತಾಗಿದೆ ಎಂದರು.

ಪ್ರಾಕೃತಿ ವಿಕೋಪ ಸಂದರ್ಭದಲ್ಲಿ ಕೃಷಿ ಬೆಳೆಗಳಿಗೆ ಹಾನಿಯಾಗಿ ಸಾಲದೊಂದಿಗೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ನಿರಂತರ ಕಾಡು ಪ್ರಾಣಿಗಳ ಹಾವಳಿ, ಅಕಾಲಿಕ ಮಳೆಯಿಂದ ಕೃಷಿ ಫಸಲು ನಾಶವಾಗುತ್ತಿದ್ದು, ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.

ಕಾಡಾನೆ ಹಾವಳಿಯಿಂದ ಆತಂಕದಲ್ಲಿದ್ದ ಜನತೆಗೆ ಇದೀಗ ಹುಲಿ ದಾಳಿಯಿಂದ ಶಾಲಾ ಮಕ್ಕಳು, ಬೆಳೆಗಾರರು, ಕಾರ್ಮಿಕರು ಮನೆಯಿಂದ ಹೊರ ಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಇದೀಗ ಮಾನವನ ಮೇಲೆ ದಾಳಿ ಮಾಡಲು ಶುರುಮಾಡಿದೆ ಎಂದರು.

ಕೆಲವೊಂದು ವಿಚಾರಗಳಿಗೆ ಏರು ಧ್ವನಿಯಲ್ಲಿ ಮಾತನಾಡುವ ಕೊಡಗಿನ ಶಾಸಕರು ಮತ್ತು ಸಂಸದರು, ವಿಧಾನಸಭೆಯಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಮನವಿರಿಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಇನ್ನಾದರೂ ಅರಣ್ಯ ಸಚಿವರು ಗಟ್ಟಿ ತೀರ್ಮಾನವನ್ನು ಕೈಗೊಂಡು ಕೊಡಗಿಗೆ ಆಗಮಿಸಿ ಹುಲಿ ಕಾಯಾರ್ಚರಣೆಯ ನೇತೃತ್ವವವನ್ನು ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. 

ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಯುವ ಪೀಳಿಗೆ ನೆಮ್ಮದಿಯ ಜೀವನ ನಡೆಸಬೇಕು, ಆಸ್ತಿ ಪಾಸ್ತಿಗಳನ್ನು ರಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಹಿರಿಯರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲಿ ಯುವಕ, ಯುವತಿಯರು ಕೊಡಗಿನ ಸಮಸ್ಯೆಗಳ ಬಗ್ಗೆ ಅರಿತು ಇಂದಿನಿಂದಲೇ ಹೋರಾಟದ ನೇತೃತ್ವ ವಹಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಆದ್ದರಿಂದ ಹಿರಿಯರೊಂದಿಗೆ ಕಿರಿಯರು ಹೋರಾಟಕ್ಕೆ ಸಹಕಾರ ನೀಡುವಂತಾಗಬೇಕು ಎಂದು ಮನವಿ ಮಾಡಿದರು.

ಮನವಿ ನೀಡುವ ಸಂದರ್ಭ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಶೀಘ್ರ ಹುಲಿ ಸೆರೆಯಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಜಡಿಯುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. 

ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಇಟ್ಟೀರ ಸಭಿತ, ತಾಲ್ಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಆಲೆಮಾಡ ಮಂಜುನಾಥ್, ಚಟ್ಟಂಗಡ ಕಂಬ ಕಾರ್ಯಪ್ಪ, ಮಂಡೇಪಂಡ ಪ್ರವೀಣ್, ಪುಚ್ಚಿಮಾಡ ರಾಯ್ ಮಾದಪ್ಪ, ರೈತ ಮುಖಂಡರಾದ ಕಾರೇರ ಕವನ್, ಚಕ್ಕೆರ ಕಾಶಿ ಕಾಳಯ್ಯ,  ಕರ್ತಮಾಡ ಸುಜು, ಕಟ್ಟೇರ ವಿಶ್ವನಾಥ್, ಕಾಳಿಮಾಡ ಕಿರಣ್, ಕಾಟಿಮಾಡ ಜಿಮ್ಮಿ, ಮೀದೇರಿರ ಕವಿತ ರಾಮ್, ಚೊಟ್ಟೆಕಾಳಪಂಡ ಮನು, ಕಾಳಿಮಾಡ ಬೆಳ್ಯಪ್ಪ, ಕೊರಕುಟ್ಟಿರ ಸರಚಂಗಪ್ಪ, ನೆರವಂಡ ಉಮೇಶ್, ಕೊಡಗು ರಕ್ಷಣಾ ವೇದಿಕೆಯ  ಪದಾಧಿಕಾರಿಗಳು, ಹಿಂದು ಮಲೆಯಾಳಿ ಸಮಾಜದ ಅಧ್ಯಕ್ಷ ಶರತ್‍ಕಾಂತ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪಿ.ಕೆ. ಜಗದೀಶ್, ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಮೈಸೂರು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸೇರಿದಂತೆ ಮಂಡ್ಯ, ಮದ್ದೂರು, ಪಿರಿಯಪಟ್ಟಣ, ಮೈಸೂರು ಭಾಗದ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಹಾಗೂ ಗ್ರಾಮಸ್ಥರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಮಜ್ಜಿಗೆ ನೀಡಿದ ಕೊರವೇ
ಸುಡು ಬಿಸಿಲಿನ ನಡುವೆ ಪ್ರತಿಭಟನೆ ನಡೆಸಿ ಆಯಾಸಗೊಂಡಿದ್ದ ವಿವಿಧ ಸಂಘಟನೆಗಳ ಪ್ರಮುಖರು, ಸದಸ್ಯರು ಹಾಗೂ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಆವರಣದಲ್ಲಿ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರ ನೇತೃತ್ವದ ತಂಡ ತಂಪಾದ ಮಜ್ಜಿಗೆಯನ್ನು ನೀಡಿ ಸಹಕರಿಸಿತು. ಅಲ್ಲದೆ ಪ್ರತಿಭಟನೆಗೆ ಬೆಂಬಲ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News