ಸದನದಲ್ಲಿ ಗದ್ದಲಕ್ಕೆ ಕಾರಣವಾದ 'ಅಶ್ಲೀಲ ಸಿಡಿ': ಸ್ಪೀಕರ್ ಕಾಗೇರಿ ಕೆಂಡಾಮಂಡಲ

Update: 2021-03-16 11:22 GMT

ಬೆಂಗಳೂರು, ಮಾ.16: ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭ ಸದನದಲ್ಲಿ ಗದ್ದಲ ಹೆಚ್ಚಾದಾಗ ಕಾಂಗ್ರೆಸ್ ಸದಸ್ಯ ಪರಮೇಶ್ವರ್ ನಾಯ್ಕ್ ವಿರುದ್ಧ ಸ್ಪೀಕರ್ ಕಾಗೇರಿ ಗರಂ ಆದ ಪ್ರಸಂಗ ನಡೆಯಿತು.

ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಪರಮೇಶ್ವರ್ ನಾಯ್ಕ್ ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ ಹಾಗೂ ಸಚಿವರು ಕೋರ್ಟ್ ಮೊರೆ ಹೋದ ವಿಷಯವನ್ನು ಉಲ್ಲೇಖಿಸಿ ಮಾತನಾಡಿದರು. ಈ ಸಂದರ್ಭ ಬಿಜೆಪಿ ಸದಸ್ಯರು ಹಾಗೂ ಪರಮೇಶ್ವರ್ ನಾಯ್ಕ್ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ ಅವರು ಪರಮೇಶ್ವರ್ ನಾಯ್ಕ್ ರನ್ನು ಕುಳಿತುಕೊಳ್ಳಲು ಸೂಚಿಸಿದರು. ಪಟ್ಟು ಬಿಡದ ಶಾಸಕ ಪರಮೇಶ್ವರ್ ನಾಯ್ಕ್ ಬಿಜೆಪಿ ಸದಸ್ಯರ ಜೊತೆ ವಾಗ್ವಾದ ಮುಂದುವರಿಸಿದರು. 'ನಿಮಗೆ ನೈತಿಕತೆ ಇಲ್ಲ, ನಮಗೆ ಉತ್ತರ ಬೇಡ' ಎಂದು ಹೇಳಿದರು. ಈ ವೇಳೆ ಆಕ್ರೋಶಿತರಾದ ಸ್ಪೀಕರ್ ಕಾಗೇರಿ ಎದ್ದು ನಿಂತು ಮಾತನಾಡಿದರು.

''ನಾನು ಇದುವರೆಗೂ ಈ ಪೀಠದಲ್ಲಿ ಎದ್ದು ನಿಂತಿಲ್ಲ. ಇದೇ ಮೊದಲ ಬಾರಿಗೆ ಎದ್ದು ನಿಲ್ಲುತ್ತಿದ್ದೇನೆ. ಸದನವೆಂದರೆ ತಮಾಷೆಯೇ ? ಹೇಳಿದ್ದನ್ನು ಕೇಳಬೇಕಾದ ಸೌಜನ್ಯ ನಿಮಗಿಲ್ಲವೇ. ಲಕ್ಷಾಂತರ ಮಂದಿ ಮತ ಚಲಾಯಿಸಿ ನಿಮ್ಮನ್ನು ಆರಿಸಿದ್ದಾರೆ. ಅವರ ಮಾತುಗಳನ್ನು ವ್ಯಕ್ತಪಡಿಸುವುದರ ಬದಲು ಹುಡುಗಾಡಿಕೆ ಮಾಡುತ್ತಿದ್ದೀರಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಳಿಕ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ನಿಮಗೆ ನೋವಾಗಿದ್ದರೆ ಕ್ಷಮಿಸಿ. ಆದರೆ ಪಾಪ ಪರಮೇಶ್ವರ್ ನಾಯ್ಕ್ ತಪ್ಪು ಮಾಡಿಲ್ಲ ಎಂದು ಹೇಳಿದರು. ಬಳಿಕ ಪರಮೇಶ್ವರ್ ನಾಯ್ಕ್ ಕೂಡಾ ಕ್ಷಮೆ ಕೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News