ಟೊಯೋಟಾ ಕಿರ್ಲೋಸ್ಕರ್ ವಿವಾದ: ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಲು ಸೂಚನೆ- ಜಗದೀಶ್ ಶೆಟ್ಟರ್

Update: 2021-03-16 14:59 GMT

ಬೆಂಗಳೂರು, ಮಾ.16: ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಲಾಗಿದ್ದು, ಅಮಾನತುಗೊಂಡಿದ್ದ ಸುಮಾರು 60 ಕಾರ್ಮಿಕರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಮುಖಂಡರ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಲಾಗಿದೆ. ಅಮಾನತುಗೊಂಡಿದ್ದ ಕಾರ್ಮಿಕರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಮಾತನಾಡಿ, ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯಿಂದ ಕಾರ್ಮಿಕರು ಅಮಾನತುಗೊಂಡು ವಾಪಸ್ ಕೆಲಸಕ್ಕೆ ಹಾಜರಾಗಿದ್ದರೂ 10 ಜನ ಮಾಡುವ ಕೆಲಸವನ್ನು 7 ಜನಕ್ಕೆ ಮಾಡಲು ಹೇಳುತ್ತಿದ್ದಾರೆ. ಇದರಿಂದ, ಕಾರ್ಮಿಕರಿಗೆ ತೊಂದರೆವುಂಟಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಆಡಳಿತ ಮಂಡಳಿ ತಪ್ಪು ಎಸಗುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News