ಅಧಿವೇಶನ: ಶಾಸಕರಿಗೂ ಗ್ರಾಮ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲು ಆಡಳಿತ, ಪ್ರತಿಪಕ್ಷದ ಸದಸ್ಯರ ಆಗ್ರಹ

Update: 2021-03-16 16:26 GMT

ಬೆಂಗಳೂರು, ಮಾ. 16: ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ ಕೈಗೊಂಡಿರುವ ‘ಅಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆ' ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡುವುದರ ಜೊತೆಗೆ ಶಾಸಕರಿಗೂ ಗ್ರಾಮ ವಾಸ್ತವ್ಯಕ್ಕೆ ಅವಕಾಶ ನೀಡಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಮಂಗಳವಾರ ವಿಧಾನಸಭೆಯಲ್ಲಿ 2021-22ನೇ ಸಾಲಿನ ಆಯವ್ಯಯದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್‍ನ ಹಿರಿಯ ಸದಸ್ಯ ಶಿವಲಿಂಗೇಗೌಡ, ‘ಅಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆ' ಉತ್ತಮ ಕಾರ್ಯಕ್ರಮ. ಆದರೆ, ಶಾಸಕ ಎಲ್ಲಿ ಎಂದು ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ನಮಗೂ ಗ್ರಾಮ ವಾಸ್ತವ್ಯಕ್ಕೆ ಅವಕಾಶ ನೀಡಬೇಕು ಎಂದು ಕೋರಿದರು.

ಇದಕ್ಕೆ ಧ್ವನಿಗೂಡಿಸಿದ ಅನ್ನದಾನಿ, ಪ್ರಿಯಾಂಕ್ ಖರ್ಗೆ, ಡಾ.ಯತೀಂದ್ರ, ಡಾ.ರಂಗನಾಥ್ ಸೇರಿದಂತೆ ಹಲವು ಸದಸ್ಯರು, ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿಯನ್ನೇ ನೀಡದೆ ಅಧಿಕಾರಿಗಳು ಫಲಾನುಭವಿಗಳಿಗೆ ಹಕ್ಕುಪತ್ರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರನ್ನು ಈ ಕಾರ್ಯಕ್ಕೆ ಜೊತೆಗೂಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕರಿಗೆ ಮಾಹಿತಿಯನ್ನೇ ನೀಡದೆ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು, ಶಾಸಕರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಸರಕಾರದ ಸೌಲಭ್ಯಗಳನ್ನು ಶಾಸಕರಿಂದ ವಿತರಣೆ ಮಾಡುವ ಬದಲು ಅವರೇ ವಿತರಣೆ ಮಾಡುತ್ತಿದ್ದಾರೆ. ಹೀಗಾದರೆ ನಾವು ಜನರಿಂದ ಆಯ್ಕೆಯಾಗಿರುವುದಕ್ಕೆ ಅರ್ಥವೇ ಇರುವುದಿಲ್ಲ ಎಂದು ಪ್ರಶ್ನಿಸಿದರು.

ಬಳಿಕ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಅಧಿಕಾರಿಗಳು ರಾಜಕೀಯೇತರವಾಗಿ ಮುಕ್ತವಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ, ಸ್ಥಳೀಯ ಶಾಸಕರು, ಸಂಬಂಧಪಟ್ಟ ಸಚಿವರು ಹಾಗೂ ಆಯಾ ಕ್ಷೇತ್ರಗಳ ಸಂಸದರಿಗೆ ಮಾಹಿತಿ ನೀಡಬೇಕು. ಸಂಜೆ 4ರಿಂದ 6 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಬಹುದು. ಜನಪ್ರತಿನಿಧಿಗಳು ಆಸಕ್ತಿ ಇದ್ದರೆ ವಾಸ್ತವ್ಯ ಹೂಡಬಹುದು. ಇದಕ್ಕೆ ಅಭ್ಯಂತರವಿಲ್ಲ' ಎಂದು ಅಶೋಕ್ ಸ್ಪಷ್ಟನೆ ನೀಡಿದರು.

ಸಿಡಿ ಬಿಟ್ಟಾರು ಎಚ್ಚರ: ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶಾಸಕರನ್ನು ಜೊತೆಗೂಡಿಸಿಕೊಳ್ಳಬೇಕೆಂಬ ಶಿವಲಿಂಗೇಗೌಡರ ಆಗ್ರಹಕ್ಕೆ ಆಡಳಿತ ಪಕ್ಷದ ಅರಗ ಜ್ಞಾನೇಂದ್ರ, ಗೌಡರೇ ಯಾರಾದರೂ ಸಿಡಿ ಗೀಡಿ ಮಾಡಿಬಿಟ್ಟಾರು ಹುಷಾರ್ ಎಂದು ಕಾಳೆಲೆದರು. ಇದರಿಂದ ಸದನದಲ್ಲಿ ನಗೆ ಅಲೆ ಎದ್ದಿತ್ತು. ಬಳಿಕ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ‘ಆ ಕಸುಬು ಇಲ್ಲದ ವ್ಯಕ್ತಿಗೇಕೆ ಸಿಡಿ ಭಯ. ಕಸುಬು ಇದ್ದರೆ ತಾನೇ ಸಿಡಿ, ಗೀಡಿ ಎಲ್ಲ. ಹೀಗಾಗಿ ನಾನು ಹೆದರುವ ಪ್ರಶ್ನೆಯೇ ಇಲ್ಲ' ಎಂದು ಪ್ರತ್ಯುತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News