ಹೊಸ ಗಣಿ ನೀತಿ ಜಾರಿಗೆ ಚಿಂತನೆ: ಸಚಿವ ಮುರುಗೇಶ್ ನಿರಾಣಿ

Update: 2021-03-16 17:26 GMT

ಬೆಂಗಳೂರು, ಮಾ.16: ಗಣಿಗಾರಿಕಾ ಕ್ಷೇತ್ರದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹಾಗೂ ಗಣಿ ಪರವಾನಿಗೆ ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಗಣಿ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಈ ಸಂಬಂಧ ಕರಡನ್ನು ಸಿದ್ಧಪಡಿಸಲಾಗಿದೆ ಎಂದು ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್‍ನ ಮಧ್ಯಾಹ್ನದ ಕಲಾಪದಲ್ಲಿ ನಿಯಮ 68ರ ಮೇರೆಗೆ ವಿಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗಣಿಗಾರಿಕೆಗೆ ಪರವಾನಿಗೆ ಪಡೆಯುವಾಗ, ಗಣಿ ಸಾಮಗ್ರಿಗಳನ್ನು ಸಾಗಣೆ ಮಾಡುವಾಗ ಭ್ರಷ್ಟಾಚಾರ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಗಣಿ ನೀತಿ ಅಗತ್ಯವಿದೆ. ಈ ಸಂಬಂಧ ಈಗಾಗಲೇ ಸಿದ್ಧಪಡಿಸಿರುವ ಕರಡನ್ನು ವಿರೋಧ ಪಕ್ಷದವರೊಂದಿಗೆ ಚರ್ಚಿಸಿ, ಅಗತ್ಯ ಮಾರ್ಪಾಡು ಮಾಡಿಕೊಂಡು ಜಾರಿ ಮಾಡಲಾಗುವುದೆಂದು ತಿಳಿಸಿದ್ದಾರೆ.

ಮೈನಿಂಗ್ ಅದಾಲತ್: ಗಣಿಗಾರಿಕೆಗೆ ಪರವಾನಿಗೆ ಪಡೆಯಬೇಕಾದರೆ ಹತ್ತಾರು ವರ್ಷಗಳು ಕಾಯಬೇಕಾದ ಪರಿಸ್ಥಿತಿಯಿದೆ. ಹಾಗೂ ಗಣಿಗಾರಿಕೆ ಇಲಾಖೆ ಜತೆಗೆ ಅರಣ್ಯ ಇಲಾಖೆ, ಸಾರಿಗೆ ಇಲಾಖೆ, ಗೃಹ ಹಾಗೂ ಕಂದಾಯ ಇಲಾಖೆಯ ಪರವಾನಿಗೆ ಪಡೆಯಲು ಕಿರುಕುಳ ಆಗುತ್ತಿದೆ. ಇದನ್ನು ತಪ್ಪಿಸಲು ಕರಾವಳಿ ಸೇರಿದಂತೆ ಐದು ಭಾಗಗಳಲ್ಲಿ ಮೈನಿಂಗ್ ಅದಾಲತ್ ನಡೆಸಿ, ಗಣಿ ಪರವಾನಿಗೆ ಪಡೆಯಲು ಸರಳೀಕರಣಗೊಳಿಸಲಾಗುವುದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಂಗಲ್‍ವಿಂಡೋ ಸಿಸ್ಟಮ್: ಗಣಿಗಾರಿಕೆಗೆ ಸಂಬಂಧಿಸಿದಂತೆ ಐದು ಇಲಾಖೆಗಳನ್ನೊಳಗೊಂಡ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಿಂಗಲ್‍ವಿಂಡೋ ಸಿಸ್ಟಮ್‍ನಡಿಯಲ್ಲಿ ಗಣಿ ಮಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಗದಿತ ವೇಳೆಯಲ್ಲಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

ಸ್ಕೂಲ್ ಆಫ್ ಮೈನಿಂಗ್: ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮಾಲಕರಿಗೆ, ತಂತ್ರಜ್ಞರಿಗೆ ಹಾಗೂ ಕಾರ್ಮಿಕರಿಗೆ ಆಧುನಿಕ ಕೌಶಲ್ಯ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಿದ್ದು, ಇದನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಅದಕ್ಕೂ ಮುನ್ನ ಸ್ಕೂಲ್ ಆಫ್ ಮೈನಿಂಗ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಒಂದು ವಾರ, ಒಂದು ತಿಂಗಳ ಕೋರ್ಸ್ ಗಳಲ್ಲಿ ತರಬೇತಿ ನೀಡಲಾಗುವುದೆಂದು ಅವರು ಮಾಹಿತಿ ನೀಡಿದ್ದಾರೆ.

ಫ್ರೀ ಸ್ಯಾಂಡ್ ಸಿಸ್ಟಂ

-ಹತ್ತು ಲಕ್ಷ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಉಚಿತ ಮರಳು ತೆರಿಗೆಗೆ ಅವಕಾಶ ಕಲ್ಪಿಸಲಾಗುವುದು. 10 ಲಕ್ಷ ರೂ.ಹೆಚ್ಚಿನ ಮೌಲ್ಯದ ಕಟ್ಟಡ ನಿರ್ಮಾಣದಾರರಿಗೆ ಕಟ್ಟಡಕ್ಕೆ ಪರವಾನಿಗೆ ಪಡೆಯುವ ಸಂದರ್ಭದಲ್ಲೇ ಶೇ.50ರಷ್ಟು ಮರಳು ತೆರಿಗೆ ವಸೂಲಿ ಮಾಡಲಾಗುವುದು. ಇದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಾಗಲಿದೆ.

-ಗಣಿ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕವಾಗಿ ಗಣಿ ಮಾಲಕರಿಗೆ ದಂಡ ಹಾಕಿದ್ದಾರೆ. ಒಂದು ಎಕರೆಗೆ ಕೋಟಿಗಟ್ಟಲೆ ದಂಡ ಹಾಕಿರುವ ಉದಾಹರಣೆಗಳಿವೆ. ದುಬಾರಿ ಮೊತ್ತದ ದಂಡವನ್ನು ಕಟ್ಟಲು ಗಣಿ ಮಾಲಕರಿಗೆ ಸಾಧ್ಯವಾಗಲಾರದು. ಒಟ್ಟು ಆರು ಸಾವಿರ ಕೋಟಿ ರೂ.ದಂಡ ಬಾಕಿಯಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಜತೆಗೂಡಿ ಗಣಿಗಾರಿಕೆ ಪ್ರದೇಶಗಳಲ್ಲಿ ಪರಿಶೀಲಿಸಿ, ಅವೈಜ್ಞಾನಿಕ ದುಬಾರಿ ಪ್ರಮಾಣದ ದಂಡವನ್ನು ವಾಪಸ್ ಪಡೆಯಲಾಗುವುದು. 

-ಮುರುಗೇಶ್ ನಿರಾಣಿ, ಗಣಿಗಾರಿಕೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News