ಬೆಳಗಾವಿಯ ಬೇಗೆಯಲ್ಲಿ ಬೇಳೆ ಬೇಯಿಸುವವರು!

Update: 2021-03-17 05:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡ ದಿನಗಳಿಂದ ಮಹಾರಾಷ್ಟ್ರದಲ್ಲಿ ಶಿವಸೇನೆ ಗಂಟಲಲ್ಲಿ ಕಡುಬು ತುರುಕಿಸಿಕೊಂಡಂತೆ ಒದ್ದಾಡುತ್ತಿದೆ. ಅಧಿಕಾರ ಬೇಕು, ಆದರೆ ಹಿಂದುತ್ವವನ್ನು ಕೈ ಬಿಡುವಂತಿಲ್ಲ. ಬಿಜೆಪಿಯ ಹಿಂದುತ್ವವನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ ಎದುರಿಸಿದ್ದು ಪ್ರಖರ ಹಿಂದುತ್ವದ ಮೂಲಕ. ಬಿಜೆಪಿಯ ಜೊತೆಗೆ ಶಿವಸೇನೆಗೆ ಮೈತ್ರಿ ಅನಿವಾರ್ಯವಾಗುವುದು ಹಿಂದುತ್ವದ ಮತಗಳು ವಿಭಜನೆಯಾಗಬಾರದು ಎನ್ನುವ ನೆಲೆಯಲ್ಲಿ. ಎರಡೂ ಪಕ್ಷಗಳು ಅಭಿವೃದ್ಧಿಯನ್ನು ಪಕ್ಕಕ್ಕಿಟ್ಟು ದ್ವೇಷ ರಾಜಕಾರಣದ ಮೂಲಕ, ಭಾವನಾತ್ಮಕ ರಾಜಕಾರಣದ ಮೂಲಕ ಬೆಳೆದವುಗಳು. ಶಿವಸೇನೆ ಒಂದು ಕೈಯಲ್ಲಿ ಹಿಂದುತ್ವವನ್ನು, ಇನ್ನೊಂದು ಕೈಯಲ್ಲಿ ಪ್ರಾದೇಶಿಕತೆಯನ್ನು ಹಿಡಿದುಕೊಂಡು ರಾಜಕೀಯವಾಗಿ ಬೆಳೆದಿದೆ. ಯಾವಾಗ ಬಿಜೆಪಿ ಮೋದಿಯ ಮೇಲೆ ಭರವಸೆಯಿಟ್ಟು ಶಿವಸೇನೆಯನ್ನು ಕಡೆಗಣಿಸಿತೋ, ಆಗ ಶಿವಸೇನೆಗೆ ಬಿಜೆಪಿ ಹೊರತಾದ ಇನ್ನೊಂದು ಪಕ್ಷದ ಜೊತೆಗೆ ಮೈತ್ರಿ ಅನಿವಾರ್ಯವಾಯಿತು. ಶಿವಸೇನೆಯು ಮೊದಲು ಮೈತ್ರಿಗೆ ಆರಿಸಿಕೊಂಡದ್ದು ಶರದ್ ಪವಾರ್ ಅವರ ಎನ್‌ಸಿಪಿಯ ಜೊತೆಗೆ. ಆದರೆ ಅಧಿಕಾರ ಹಿಡಿಯುವಷ್ಟು ಬಲ ಎನ್‌ಸಿಪಿಯಲ್ಲಿ ಇಲ್ಲದೇ ಇರುವುದರಿಂದ ಶಿವಸೇನೆಯು ಕಾಂಗ್ರೆಸ್ ಕಡೆಗೆ ಮುಖ ಮಾಡಿತು. ಬಿಜೆಪಿಗೆ ಪಾಠ ಕಲಿಸುವ ಉದ್ದೇಶದಿಂದಲೇ ಅದು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿತು. ಕಾಂಗ್ರೆಸ್ ಜೊತೆಗೆ ಮೈತ್ರಿ ಉಳಿಯಬೇಕಾದರೆ ಶಿವಸೇನೆ ತನ್ನ ಕಟ್ಟರ್ ಹಿಂದುತ್ವದಿಂದ ಹಿಂದೆ ಸರಿಯಲೇ ಬೇಕು. ಅಧಿಕಾರದಲ್ಲಿರುವವರೆಗೆ ಶಿವಸೇನೆ ಹಿಂದುತ್ವದ ಕುರಿತಂತೆ ಮೃದು ನಿಲುವು ತಾಳಲು ನಿರ್ಧರಿಸಿತು. ರಾಮಮಂದಿರ, ಸಿಎಎ ಮೊದಲಾದ ವಿಷಯಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸದೇ ಇರುವುದಕ್ಕೆ ಇದೇ ಕಾರಣ. ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದರೆ ಸರಕಾರ ಬೀಳುತ್ತದೆ ಎನ್ನುವುದು ಶಿವಸೇನೆಯ ಮುಖಂಡರಿಗೆ ಚೆನ್ನಾಗಿ ಗೊತ್ತಿದೆ.

ಆದರೆ ಭಾವನಾತ್ಮಕ ರಾಜಕಾರಣದಿಂದ ಸಂಪೂರ್ಣ ಹಿಂದೆ ಸರಿಯುವುದಕ್ಕೆ ಶಿವಸೇನೆ ಸಿದ್ಧವಿಲ್ಲ. ನೋಟು ನಿಷೇಧ, ಕೊರೋನ, ಲಾಕ್‌ಡೌನ್ ಇತ್ಯಾದಿಗಳಿಂದ ಜನರು ತತ್ತರಿಸಿ ಕೂತಿರುವಾಗ, ಬಿಜೆಪಿಯು ಅವರನ್ನು ಭಾವನಾತ್ಮಕವಾಗಿ ಸಂತೈಸುತ್ತಿದೆ. ಇಂತಹ ಹೊತ್ತಿನಲ್ಲಿ ಶಿವಸೇನೆ ವೌನವಾಗಿರುವಂತಿಲ್ಲ. ಅದಕ್ಕಾಗಿಯೇ ಅದು ಪ್ರಾದೇಶಿಕ ಭಾವನೆಗಳನ್ನು ಪ್ರಚೋದಿಸಿ ಮರಾಠಿಗರನ್ನು ತಲುಪುವ ಪ್ರಯತ್ನ ನಡೆಸುತ್ತಿದೆ. ಬೆಳಗಾವಿಯ ಗಡಿಭಾಗದಲ್ಲಿ ಶಿವಸೇನೆಯ ಕಾರ್ಯಕರ್ತರು ನಡೆಸುತ್ತಿರುವ ದಾಂಧಲೆಗೆ ಇದುವೇ ಕಾರಣ. ಇತ್ತೀಚೆಗಷ್ಟೇ ಬೆಳಗಾವಿ ಮಹಾನಗರ ಪಾಲಿಕೆಯ ಮುಂಭಾಗ ಭಗವಾಧ್ವಜ ಹಾರಿಸುವ ವಿಫಲ ಪ್ರಯತ್ನ ನಡೆಸಿದ್ದರು. ಕಳೆದ ಗುರುವಾರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ನಾಮಫಲಕಗಳಿಗೆ ಮಸಿ ಬಳಿದು ಪುಂಡಾಟ ಮೆರೆದಿದ್ದಾರೆ. ಅಷ್ಟೇ ಅಲ್ಲ, ಶಿವಸೇನೆಯ ಕಾರ್ಯಕರ್ತರ ದಾಂಧಲೆಗಳಿಂದಾಗಿ ಗಡಿಭಾಗದಲ್ಲಿ ಬಸ್ ಸಂಪರ್ಕ ಕಡಿತಗೊಂಡಿದೆ. ಒಂದೆಡೆ ಮಹಾರಾಷ್ಟ್ರದಲ್ಲಿ ಕೊರೋನ ವಿಪರೀತ ಸ್ಥಿತಿಯನ್ನು ತಲುಪಿದೆ. ಎರಡನೇ ಅಲೆಯ ವದಂತಿಗಳು ಎದ್ದಿವೆ. ಹಲವೆಡೆ ಲಾಕ್‌ಡೌನ್ ವಿಧಿಸಲಾಗಿದೆ. ಮುಂಬೈಯ ಸ್ಥಿತಿಯಂತೂ ಹೇಳಿ ಸುಖವಿಲ್ಲ. ಇಂತಹ ಹೊತ್ತಿನಲ್ಲಿ ಜನರ ಬದುಕನ್ನು ಮೇಲೆತ್ತುವ ಕಡೆಗೆ ಶಿವಸೇನೆ ನೇತೃತ್ವದ ಸರಕಾರ ಯೋಜನೆಗಳನ್ನು ಹಾಕಿಕೊಳ್ಳಬೇಕು. ವಿಪರ್ಯಾಸವೆಂದರೆ, ಮಹಾರಾಷ್ಟ್ರದ ಜನರ ಕುರಿತಂತೆ ತಲೆಕೆಡಿಸಿಕೊಳ್ಳದ ಶಿವಸೇನೆ, ಬೆಳಗಾವಿಯ ಬಗ್ಗೆ ತಲೆಕೆಡಿಸಿಕೊಂಡಿದೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದು ಒತ್ತಾಯಿಸಿದೆ.

ಬೆಳಗಾವಿಯನ್ನು ಮುಂದಿಟ್ಟು ಮಹಾರಾಷ್ಟ್ರದ ಜನರ ಗಮನವನ್ನು ವಿಷಯಾಂತರ ಮಾಡುವುದು ಶಿವಸೇನೆಯ ದುರುದ್ದೇಶವಾಗಿದೆ. ಬೆಳಗಾವಿಯ ಜನಸಾಮಾನ್ಯರು ಕನ್ನಡಿಗರಿಂದ ತಮಗೆ ಅನ್ಯಾಯವಾಗಿದೆ ಅಥವಾ ತಮ್ಮ ಹಕ್ಕುಗಳು ದಮನಗೊಳ್ಳುತ್ತಿವೆ ಎಂದು ಯಾರಲ್ಲೂ ಕೋರಿಕೊಂಡಿಲ್ಲ. ಇನ್ನು, ಬೆಳಗಾವಿಯ ಮಹಾನಗರ ಪಾಲಿಕೆಯ ಮುಂದೆ ಯಾವ ಧ್ವಜವನ್ನು ಹಾರಿಸಬೇಕು ಎನ್ನುವುದೂ ಬೆಳಗಾವಿ ಜನರ ಸಮಸ್ಯೆಯಲ್ಲ. ಲಾಕ್‌ಡೌನ್‌ನಿಂದಾಗಿ ಎಲ್ಲ ಜಿಲ್ಲೆಗಳಂತೆಯೇ ಬೆಳಗಾವಿಯೂ ತತ್ತರಿಸಿದೆ. ಈಗಾಗಲೇ ನೆರೆ ಮತ್ತು ಬರಗಾಲ ಎರಡರಿಂದಲೂ ಕಂಗಾಲಾಗಿರುವ ಬೆಳಗಾವಿ ಉಭಯ ಸರಕಾರಗಳ ತಿಕ್ಕಾಟಗಳಿಂದಾಗಿ ಸಾಕಷ್ಟು ತೊಂದರೆಗಳನ್ನೂ ಅನುಭವಿಸುತ್ತಿದೆ. ಕರ್ನಾಟಕ ಸರಕಾರ ಬೆಳಗಾವಿಯ ಕುರಿತಂತೆ ವಿಶೇಷ ಕಾಳಜಿಯನ್ನು ವಹಿಸಿದೆ ಎನ್ನುವುದು ಇದರ ಅರ್ಥವಲ್ಲ. ಬೆಳಗಾವಿಯ ಕುರಿತಂತೆ ಸರಕಾರ ಮಾತನಾಡಬೇಕಾದರೆ, ಗಡಿಯಲ್ಲಿ ಶಿವಸೇನೆ ತಂಟೆಯನ್ನು ಮಾಡಬೇಕು. ಬೆಳಗಾವಿಯ ಮೇಲೆ ಮಹಾರಾಷ್ಟ್ರ ಹಕ್ಕು ಸಾಧಿಸಲು ಮುಂದಾದಾಗ ಮಾತ್ರ ‘ಬೆಳಗಾವಿ ನಮ್ಮದು’ ಎನ್ನುವುದು ನಮ್ಮ ಸರಕಾರಕ್ಕೂ, ಬೆಂಗಳೂರಿನ ಕನ್ನಡ ಪರ ಸಂಘಟನೆಗಳಿಗೂ ನೆನಪಾಗುತ್ತದೆ. ನೆರೆ ನೀರಿನಿಂದ ಬೆಳಗಾವಿ ಕೊಚ್ಚಿ ಹೋಗುವಾಗ ಉಭಯ ಸರಕಾರಗಳಿಗೂ ಬೆಳಗಾವಿ ನಮ್ಮದು ಎನ್ನುವುದು ನೆನಪಿಗೆ ಬರುವುದಿಲ್ಲ. ಲಾಕ್‌ಡೌನ್‌ನಿಂದಾಗಿ ಬೆಳಗಾವಿಯ ಸಾವಿರಾರು ವಲಸೆ ಕಾರ್ಮಿಕರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಯಾರು ಈ ವಲಸೆ ಕಾರ್ಮಿಕರ ಕುರಿತಂತೆ ಕಾಳಜಿಯನ್ನು ವಹಿಸುತ್ತಾರೋ, ಬೆಳಗಾವಿ ಅವರದು. ಬೆಳಗಾವಿಯ ಬಗ್ಗೆ ವಿಶೇಷ ಕಾಳಜಿಯನ್ನು ತೋರಿಸುವ ಮಹಾರಾಷ್ಟ್ರ, ಲಾಕ್‌ಡೌನ್‌ನಿಂದ ತತ್ತರಿಸಿರುವ ಇಲ್ಲಿನ ವಲಸೆ ಕಾರ್ಮಿಕರಿಗಾಗಿ ಎಷ್ಟರ ಮಟ್ಟಿಗೆ ಮಿಡಿದಿದೆ? ಈ ವಲಸೆ ಕಾರ್ಮಿಕರಿಗೆ ಭಾಷೆ, ಬಾವುಟಗಳ ರಾಜಕೀಯದಿಂದ ಯಾವುದೇ ಲಾಭವಿಲ್ಲ. ಬದಲಿಗೆ ನಷ್ಟವೇ ಅಧಿಕ.

ಶಿವಸೇನೆಯು ಭಾಷೆಯ ಹೆಸರಿನಲ್ಲಿ ನಡೆಸುತ್ತಿರುವ ದಾಂಧಲೆ ಉಭಯ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ. ಈಗಾಗಲೇ ಮುಂಬೈಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ನಿರುದ್ಯೋಗದಿಂದ ತತ್ತರಿಸಿದ್ದಾರೆ. ಅಲ್ಲೂ ಇರಲಾರದೆ, ಊರಿಗೂ ಮರಳಲಾರದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಿರುವಾಗ, ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ದಾಂಧಲೆಗಳು ಅವರನ್ನು ಇನ್ನಷ್ಟು ಅಪಾಯಕ್ಕೆ ಸಿಲುಕಿಸಲಿವೆ. ಇತ್ತ ಬೆಳಗಾವಿಯಲ್ಲಿರುವ ಮಹಾರಾಷ್ಟ್ರದ ಕಾರ್ಮಿಕರೂ ಈ ರಾಜಕೀಯದ ದುಷ್ಫಲವನ್ನು ಉಣ್ಣಬೇಕಾಗುತ್ತದೆ. ಜನತೆಗೆ ಇಂದು ಬೇಕಾಗಿರುವುದು ಒಂದು ಕೆಲಸ. ತುತ್ತು ಅನ್ನ. ಸಂಕಟಗಳು ಬೆಂಕಿಯ ಉಂಡೆಗಳಂತೆ ನೆತ್ತಿಯ ಮೇಲೆ ಸುರಿಯುತ್ತಿರುವ ಈ ದಿನಗಳಲ್ಲಿ ಇಂತಹ ಕ್ಷುಲ್ಲಕ ರಾಜಕೀಯಕ್ಕೆ ಶಿವಸೇನೆ ಇಳಿದಿರುವುದು ಜನದ್ರೋಹವಾಗಿದೆ. ಜನರ ಗಮನವನ್ನು ಸೆಳೆಯಲು ಬಿಜೆಪಿ ಕೋಮುಗಲಭೆಗಳನ್ನು ಸೃಷ್ಟಿಸುವುದಕ್ಕೂ, ಶಿವಸೇನೆ ಭಾಷೆಯ ಹೆಸರಿನಲ್ಲಿ ಕಿಚ್ಚು ಹಚ್ಚುವುದಕ್ಕೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಇಂತಹ ರಾಜಕೀಯ ಉಭಯ ರಾಜ್ಯಗಳ ಭಾಷೆಗಳಿಗೂ ಒಳಿತನ್ನು ಮಾಡದು. ಮಾನವೀಯತೆಯಿಲ್ಲದ ಭಾಷಾ ಪ್ರೇಮ ಅಂತಿಮವಾಗಿ ಒಂದು ರಾಜ್ಯಕ್ಕೆ ಕೆಡುಕನ್ನಷ್ಟೇ ಮಾಡೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News