ಕೋವಿಡ್ ಮುಂದೆ ಋತು ಸಂಬಂಧಿ ರೋಗವಾಗಬಹುದು: ವಿಶ್ವ ಸಂಸ್ಥೆ ತಜ್ಞರ ವರದಿ

Update: 2021-03-18 07:01 GMT

ಜಿನೀವಾ: ಕೋವಿಡ್-19  ಒಂದು ಸೀಸನಲ್ ಅಥವಾ ಋತುವಿಗೆ ಸಂಬಂಧಿಸಿದ ರೋಗವಾಗುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಗುರುವಾರ  ಹೇಳಿದೆ. ಅದೇ ಸಮಯ ಹವಾಮಾನ ಸಂಬಂಧಿ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಸಾಂಕ್ರಾಮಿಕ ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಸಡಿಲಗೊಳಿಸದೇ ಇರುವಂತೆಯೂ ವಿಶ್ವ ಸಂಸ್ಥೆ ಎಚ್ಚರಿಸಿದೆ.

ಚೀನಾದಲ್ಲಿ ಮೊದಲು ಕೊರೋನವೈರಸ್ ಕಾಣಿಸಿಕೊಂಡು ಒಂದು ವರ್ಷ ಮೇಲಾಗುತ್ತಾ ಬಂದಿದ್ದರೂ ಜಗತ್ತಿನಾದ್ಯಂತ ಸುಮಾರು 20.7 ಲಕ್ಷ ಜನರನ್ನು ಬಲಿ ಪಡೆದಿರುವ ಈ ಸೋಂಕಿನ ಸುತ್ತ ಈಗಲೂ ಹಲವಾರು ನಿಗೂಢತೆಗಳು ತುಂಬಿವೆ.

ಕೋವಿಡ್ ಹರಡುವಿಕೆಗೂ ಹವಾಮಾನ ಮತ್ತು ವಾಯು ಗುಣಮಟ್ಟಕ್ಕೂ ಯಾವುದಾದರೂ ನಂಟು ಇದೆಯೇ ಎಂದು ಕಂಡುಕೊಳ್ಳಲು ಯತ್ನಿಸಿದ ತಜ್ಞ ಸಮಿತಿ ತನ್ನ ಮೊದಲ ವರದಿಯಲ್ಲಿ ಕೋವಿಡ್ ಭವಿಷ್ಯದಲ್ಲಿ ಒಂದು ಸೀಸನಲ್ ಅಥವಾ ಋತು ಆಧರಿತ ರೋಗವಾಗುವ ಸಾಧ್ಯತೆಯ ಕೆಲವು ಸುಳಿವು ಇದೆ ಎಂದು ಹೇಳಿದೆ.

ಶ್ವಾಸಕೋಶ ಸಂಬಂಧಿ ವೈರಾಣು ಸೋಂಕುಗಳು ಹೆಚ್ಚಿನ ಸಂದರ್ಭಗಳಲ್ಲಿ ಋತುವಿಗೆ ಸಂಬಂಧಿಸಿವೆ, ಪ್ರಮುಖವಾಗಿ ಫ್ಲೂ ಮತ್ತು ನೆಗಡಿ ಉಂಟು ಮಾಡುವ ಕೊರೋನವೈರಸ್‍ಗಳು ಬೇಸಿಗೆ ಹಾಗೂ ಚಳಿಗಾಲದ ಗರಿಷ್ಠ ಅವಧಿಯಲ್ಲಿರುತ್ತದೆ ಎಂದು ವಿಶ್ವ ಸಂಸ್ಥೆಯ ವಿಶ್ವ ಹವಾಮಾನ ಸಂಘಟನೆ ರಚಿಸಿದ್ದ ಈ 16 ಸದಸ್ಯರ ತಂಡವು ತನ್ನ ವರದಿಯಲ್ಲಿ ಹೇಳಿದೆ.

"ಈ ಕಾರಣಗಳನ್ನು ಅವಲಂಬಿಸಿ ಕೋವಿಡ್-19 ಇನ್ನೂ ಹಲವಾರು ವರ್ಷಗಳ ಕಾಲ ಉಳಿದರೆ ಅದು ಮುಂದೆ ಋತು ಸಂಬಂಧಿ ರೋಗವಾಗಬಹುದು,'' ಎಂದು ತಜ್ಞ ವರದಿ ತಿಳಿಸಿದೆ.

ವರದಿ ಸಿದ್ಧಪಡಿಸಿದ ತಜ್ಞರು ಹೊರಾಂಗಣಕ್ಕೆ ಸಂಬಂಧಿಸಿದ ಅಂಶಗಳನ್ನೇ ಪರಿಗಣನೆಗೆ ತೆಗೆದುಕೊಂಡಿದ್ದರೂ, ಪ್ರಯೋಗಾಲಯ ವರದಿಗಳ ಪ್ರಕಾರ ಈ ವೈರಸ್ ಚಳಿ ಅಥವಾ ಒಣ ಹವೆಯ ಸಂದರ್ಭ ಹಾಗೂ  ವಾತಾವರಣದಲ್ಲಿ ಸೂರ್ಯನ ವಿಕಿರಣಗಳು  ಕಡಿಮೆಯಿದ್ದಾಗ ಹೆಚ್ಚು ಕಾಲ ಜೀವಂತವಾಗಿರುತ್ತದೆ  ಎಂದು ತಿಳಿಸಿವೆ.

ವಾಯು ಗುಣಮಟ್ಟಕ್ಕೂ ವೈರಸ್ ಹರಡುವಿಕೆಗೂ ನೇರ ನಂಟು ಇರುವುದು ಇನ್ನೂ ಸ್ಪಷ್ಟವಾಗಿಲ್ಲ ಆದರೆ ಕಡಿಮೆ ವಾಯು ಗುಣಮಟ್ಟ ಕೋವಿಡ್-19ನಿಂದ ಸಾವಿನ ಪ್ರಮಾಣ ಹೆಚ್ಚಿಸುತ್ತವೆ ಎಂಬುದಕ್ಕೆ ಕೆಲ ಸಾಕ್ಷ್ಯಗಳು ಇವೆಯೆಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News