ಚಾಮರಾಜನಗರ: ಜಿಲ್ಲಾ ಖಜಾನೆಯ ಉಪನಿರ್ದೇಶಕಿಯಿಂದ ಕಿರುಕುಳ ಆರೋಪ; ಕೈ ಕೊಯ್ದುಕೊಂಡ ನೌಕರ

Update: 2021-03-18 12:06 GMT

ಚಾಮರಾಜನಗರ, ಮಾ.18: ಜಿಲ್ಲಾ ಖಜಾನೆಯ ಉಪನಿರ್ದೇಶಕಿ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ನೌಕರರೊಬ್ಬರು ತನ್ನ ಎಡಗೈಯನ್ನು  ಕೊಯ್ದುಕೊಂಡ ಘಟನೆ ಇಂದು ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಜಿಲ್ಲಾಡಳಿತ ಕಚೇರಿಯಲ್ಲಿನ ಖಜಾನೆಯ ನೌಕರ ಯೂಸುಫ್ ಖಾನ್ ಎಂಬವರೇ ಕೈ ಕೊಯ್ದುಕೊಂಡವರಾಗಿದ್ದು, ಖಜಾನೆಯ ಉಪ ನಿರ್ದೇಶಕಿ ಜಯಲಕ್ಷ್ಮಿ ಎಂಬವರು ಕಿರುಕುಳ ನೀಡಿದ್ದಾರೆಂದು ಯೂಸುಫ್ ಆರೋಪಿಸಿದ್ದಾರೆ.

ಜಿಲ್ಲಾ ಖಜಾನೆಯ ದಫೇದಾರ್ ಆಗಿರುವ ಯೂಸುಫ್ ಖಾನ್ ಇದೇ ತಿಂಗಳ 15ರಂದು ಕಚೇರಿಗೆ ಗೈರು ಹಾಜರಾಗಿದ್ದರು. ಇದನ್ನು ಪ್ರಶ್ನಿಸಿದ ಉಪ ನಿರ್ದೇಶಕಿ ಜಯಲಕ್ಷ್ಮಿ, ಯೂಸುಫ್ ಅವರಿಗೆ ನೋಟಿಸ್ ಜಾರಿ ಮಾಡಿ ಕೆಸಿಎಸ್ ನಿಯಮ 16ರಂತೆ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದರು. ಅಲ್ಲದೇ ನೋಟಿಸ್ ಗೆ ಉತ್ತರ ನೀಡದಿದ್ದರೆ ಕಾನೂನು ಪ್ರಕಾರ ಕ್ರಮ ವಹಿಸುತ್ತೇನೆಂದು ತಿಳಿಸಿದ್ದರು ಎನ್ನಲಾಗಿದೆ.

''30 ವರ್ಷ ಸೇವೆಯಲ್ಲಿ ನನ್ನ ಕೆಲಸವನ್ನು ನಾನು ಸಮರ್ಪಕವಾಗಿ ಮಾಡಿದ್ದೇನೆ. ನನಗೆ ಈ ರೀತಿಯಲ್ಲಿ ಯಾವ ಅಧಿಕಾರಿಯೂ ಕಿರುಕುಳ ನೀಡಿಲ್ಲ. ನನ್ನ ಮಗಳ ಪರೀಕ್ಷೆ ಇದೆ ಎಂದು ನಾನು ರಜೆ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದರೂ ನನಗೆ ರಜೆ ನೀಡದೇ ಕಿರುಕುಳ ನೀಡಿದ್ದಾರೆ. ನೋಟಿಸ್ ಗೆ ಉತ್ತರ ನೀಡಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ವಹಿಸುತ್ತೇನೆಂದು ನನಗೆ ಕಿರುಕುಳ ನೀಡಿದ್ದರಿಂದ ನಾನು ಕೈ ಕೊಯ್ದುಕೊಂಡೆ. ಆತ್ಮಹತ್ಯೆಯೇ ಮಾಡಿಕೊಳ್ಳುತ್ತಿದ್ದೆ ಎಂದು ಯೂಸುಫ್ ಖಾನ್ ತಿಳಿಸಿದ್ದಾರೆ.

ಮಾಹಿತಿ ತಿಳಿದ ಡಿಎಚ್ಓ ಡಾ.ರವಿ ಅವರು ತುರ್ತು ವಾಹನ ಕರೆದು ಯೂಸುಫ್ ರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News