ಆರ್ಥಿಕ ಇಲಾಖೆ ಅನುಮೋದನೆ ಬಳಿಕ 3,590 ಶಿಕ್ಷಕರ ನೇಮಕ: ಸಚಿವ ಸುರೇಶ್‍ ಕುಮಾರ್

Update: 2021-03-18 12:38 GMT

ಬೆಂಗಳೂರು, ಮಾ. 18: ‘ರಾಜ್ಯದಲ್ಲಿ ಖಾಲಿ ಇರುವ ಒಟ್ಟು 3,590 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆರ್ಥಿಕ ಇಲಾಖೆ ಅನುಮೋದನೆ ಬಳಿಕ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗುವುದು' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಹಿರಿಯ ಸದಸ್ಯ ಎಚ್.ಡಿ.ರೇವಣ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲೆ ಆರ್ಥಿಕ ಇಲಾಖೆ ಅನುಮೋದನೆ ನೀಡುವ ಸಾಧ್ಯತೆಗಳಿದ್ದು, ಕೂಡಲೇ ನೇಮಕಾತಿ ನಡೆಯಲಿದೆ' ಎಂದರು.

‘ಹೊಳೆನರಸೀಪುರ ಕ್ಷೇತ್ರದ ವ್ಯಾಪ್ತಿಯಲ್ಲಿ 48 ಸರಕಾರಿ ಪ್ರೌಢಶಾಲೆಗಳಿದ್ದು, 51 ಆಂಗ್ಲ ಶಿಕ್ಷಕರ ಹುದ್ದೆಗಳು ಮಂಜೂರಾಗಿದೆ. ಆ ಪೈಕಿ 41 ಮಂದಿ ಆಂಗ್ಲಭಾಷೆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 10 ಹುದ್ದೆಗಳು ಖಾಲಿ ಇವೆ. ಈ ಖಾಲಿ ಹುದ್ದೆಗಳಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯಾವುದೇ ಶೈಕ್ಷಣಿಕವಾಗಿ ತೊಂದರೆ ಆಗಬಾರದೆಂದು ತಾತ್ಕಾಲಿಕವಾಗಿ 3 ಅತಿಥಿ ಶಿಕ್ಷಕರನ್ನು ಹಾಗೂ 7 ಹುದ್ದೆಗಳಿಗೆ ಅಕ್ಕ-ಪಕ್ಕದ ಶಾಲೆಗಳಿಂದ ತಾತ್ಕಾಲಿಕವಾಗಿ ನಿಯೋಜನೆ ಮಾಡಿ ಆಂಗ್ಲ ವಿಷಯ ಬೋಧಿಸಲಾಗುತ್ತಿದೆ' ಎಂದು ಅವರು ತಿಳಿಸಿದರು.

2019-20ನೆ ಸಾಲಿನಲ್ಲಿ ಕ್ಷೇತ್ರದಲ್ಲಿ ಸರಕಾರಿ ಪ್ರೌಢ ಶಾಲೆಗಳ ಫಲಿತಾಂಶ ಉತ್ತಮವಾಗಿದ್ದು, ಆಂಗ್ಲ ಭಾಷೆಯಲ್ಲಿ ಶೇ.93.05ರಷ್ಟು ಫಲಿತಾಂಶ ಬಂದಿದೆ. ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದ ಸಂದರ್ಭದಲ್ಲಿ ಹೊಳೆನರಸೀಪುರ ಕ್ಷೇತ್ರದ ಶಾಲೆಗಳಲ್ಲಿನ ಖಾಲಿ ಇರುವ ಹುದ್ದೆಗಳಿಗೂ ನಿಯೋಜನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಎಚ್.ಡಿ.ರೇವಣ್ಣ, ‘ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದರೂ ಕನಿಷ್ಠ ಪಕ್ಷ ನಮ್ಮ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ? ಖಾಸಗಿಯವರಿಗೆ ಸರಕಾರವನ್ನು ಅಡಮಾನ ಇಡಬೇಕಾಗುತ್ತದೆ ಅಷ್ಟೇ' ಎಂದು ಟೀಕಿಸಿದರು.

ಅರ್ಜಿ ಸಲ್ಲಿಕೆಗೆ ಅವಕಾಶ: ಮಾನ್ಯತೆ ತಿರಸ್ಕೃತಗೊಂಡ ಖಾಸಗಿ ಅನುದಾನರಹಿತ ಪ್ರೌಢ ಶಾಲೆಗಳ ಅರ್ಜಿಗಳನ್ನು ಪರಿಶೀಲಿಸುವ ಸಲುವಾಗಿ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಈಗಾಗಲೇ ಬೆಂಗಳೂರು ಮತ್ತು ಮೈಸೂರು ಮಾದರಿಯಲ್ಲೆ ಕಲಬುರಗಿ ಮತ್ತು ಧಾರವಾಡ ಆಯುಕ್ತಾಲಯ ವ್ಯಾಪ್ತಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಕಾಂಗ್ರೆಸ್‍ನ ಅಮರೇಗೌಡ ಬಯ್ಯಾಪುರ ಕೇಳಿದ ಪ್ರಶ್ನೆಗೆ ಸಚಿವ ಸುರೇಶ್ ಕುಮಾರ್ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News