ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿ ವಂತಿಗೆ ಮಂಜೂರು ಮಾಡಲು ಬ್ಯಾಂಕುಗಳಿಗೆ ಸೂಚನೆ: ವಿ.ಸೋಮಣ್ಣ

Update: 2021-03-18 18:00 GMT

ಬೆಂಗಳೂರು, ಮಾ.18: ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಹಾಗೂ ರಾಜೀವ್ ಗಾಂಧಿ ಗೃಹ ನಿರ್ಮಾಣ ಮಂಡಳಿ ಅಡಿ ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ತ್ವರಿತವಾಗಿ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಒದಗಿಸಲು ಮಂಜೂರಾತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ವಸತಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕ್‍ಗಳ ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಾನುಭವಿಗಳಿಗೆ ಬ್ಯಾಂಕುಗಳಿಂದ ದೊರೆಯಬೇಕಾದ 2.25 ಲಕ್ಷ ರೂ. ಸಾಲವನ್ನು ಶೇ.6ರ ಬಡ್ಡಿ ದರದಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಬಡ್ಡಿ ದರವನ್ನು ಕಡಿಮೆ ಮಾಡಲು ಮುಖ್ಯಮಂತ್ರಿ ಮೂಲಕ ಕೇಂದ್ರ ವಿತ್ತ ಸಚಿವರನ್ನು ಕೋರಲಾಗುವುದು. ಎರಡೂ ನಿಗಮಗಳ ಮೂಲಕ 3,24,000 ಮನೆಗಳನ್ನು ನಿರ್ಮಿಸುವ ಗುರಿಯಿದ್ದು, ಈ ಪೈಕಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮೂಲಕ 83,119 ಮನೆಗಳ ನಿರ್ಮಾಣವಾಗುತ್ತಿದ್ದು, 54,000 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, 97,134 ಮನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ, 34,008 ಮಂದಿಗೆ ಸಾಲ ನೀಡಲು ವಿವಿಧ ಬ್ಯಾಂಕುಗಳು ಈಗಾಗಲೆ ತಾತ್ವಿಕ ಒಪ್ಪಿಗೆ ನೀಡಿವೆ ಎಂದು ಸೋಮಣ್ಣ ತಿಳಿಸಿದರು.

ಪ್ರತಿ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ನಿರ್ಮಾಣವಾಗುತ್ತಿರುವ ಮನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಹಣದ ಅಡಚಣೆಯಿಲ್ಲ. ಹಿಂದಿನ ಸರಕಾರದಲ್ಲಿ ಆರಂಭಗೊಂಡಿದ್ದ ಹಲವಾರು ಗೃಹ ನಿರ್ಮಾಣ ಯೋಜನೆಗಳು ಗೊಂದಲದಗೂಡಾಗಿ ನನೆಗುದಿಗೆ ಬಿದ್ದಿತ್ತು, ತಮ್ಮ ಸರಕಾರ ಪ್ರಧಾನಮಂತ್ರಿಗಳ ಮಹತ್ತರ ಆಶಯದಂತೆ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನ ಮಾಡುವ ಸಂಕಲ್ಪ ಮಾಡಿದೆ ಎಂದು ಅವರು ಹೇಳಿದರು.

ಕೊಳಚೆ ಅಭಿವೃದ್ಧಿ ಮಂಡಳಿಯಡಿ ಫಲಾನುಭವಿಗಳಿಗೆ ವಿತರಿಸಲಾಗಿರುವ 3,13,000 ಸ್ವತ್ತುಗಳಿಗೆ ಸಂಬಂಧಿಸಿದಂತೆ ಹಕ್ಕನ್ನು ಹಸ್ತಾಂತರಿಸುವ ಮೂಲಕ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಕ್ಕುಪತ್ರ ಪಡೆದುಕೊಳ್ಳಲು ನಿಗದಿ ಪಡಿಸಿರುವ ಶುಲ್ಕದ ಮೊತ್ತ ಹೆಚ್ಚಾಯಿತೆಂಬ ಮನವಿ ಬಂದಿದ್ದು, ಈ ಶುಲ್ಕವನ್ನು ಕಡಿಮೆ ಮಾಡಲು ಮುಖ್ಯಮಂತ್ರಿಯನ್ನು ಕೋರಲಾಗಿದೆ. ಈ ವಿಷಯ ಮುಂದಿನ ಸಚಿವ ಸಂಪುಟದ ಮುಂದೆ ಬರಲಿದೆ ಎಂದು ಸೋಮಣ್ಣ ತಿಳಿಸಿದರು.

ಪಟ್ಟಣ ಪಂಚಾಯತ್, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1200 ರೂ.ಗಳಿಂದ 10,000 ರೂ.ಗಳವರೆಗೆ ದರ ನಿಗದಿ ಪಡಿಸಲಾಗಿತ್ತು, ಈ ದರಗಳನ್ನು 1200 ರೂ.ಗಳಿಂದ 4000 ರೂ.ಗಳವರೆಗೆ ಕಡಿಮೆ ಮಾಡಿ ಪರಿಷ್ಕರಿಸಲು ಕ್ರಮ ಆಗುತ್ತಿದೆ, ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಶೇ.50ರಷ್ಟು ರಿಯಾಯತಿ ಸಿಗಲಿದೆ ಎಂದು ಅವರು ವಿವರಿಸಿದರು.

ಇದಕ್ಕೂ ಮುನ್ನ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್, ಕೊಳಚೆ ನಿರ್ಮೂಲನ ಮಂಡಳಿಯ ಆಯುಕ್ತ ಶಿವಪ್ರಸಾದ್ ಇನ್ನಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News