ಜಾಗತಿಕ ಕಚ್ಚಾ ತೈಲ ಬೆಲೆ ತೀವ್ರವಾಗಿ ಕುಸಿದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗಿಲ್ಲ!

Update: 2021-03-19 09:21 GMT

ಹೊಸದಿಲ್ಲಿ: ಕಳೆದ ಆರು ದಿನಗಳಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ತೀವ್ರ ಕಡಿಮೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗಿಲ್ಲ.

ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಮಾರ್ಚ್ ನಿಂದ  ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು ಇಂಧನ ಬೆಲೆಯನ್ನು ಏರಿಸಿಲ್ಲ.  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಈಗಾಗಲೇ ದೇಶಾದ್ಯಂತ ಭಾರೀ ಏರಿಕೆಯಾಗಿವೆ.
ಈಗ ದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 91.17 ರೂ. ಇದ್ದು, ಇದು ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಗಿರುವ ಗರಿಷ್ಟ ದರವಾಗಿದೆ. ಮುಂಬೈಯಲ್ಲಿ ಲೀಟರ್ ವೊಂದರ ಪೆಟ್ರೋಲ್ ದರ 97.57 ರೂ.ಆಗಿದೆ. ದೇಶದ ಎಲ್ಲ ಪ್ರಮುಖ ನಗರಗಳಾದ ಕೋಲ್ಕತಾ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ಗಳಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ರೂ. 90ಕ್ಕಿಂತ ಅಧಿಕವಾಗಿದೆ.

ಅದೇ ರೀತಿ ಡೀಸೆಲ್ ಬೆಲೆಯು ದೇಶದೆಲ್ಲೆಡೆ ಏರಿಕೆಯಾಗಿದೆ. ಜೈಪುರದಲ್ಲಿ ಇದು ಲೀಟರ್ ಗೆ 90 ರೂ. ತಲುಪಿದೆ. ಮುಂಬೈನಲ್ಲಿ ಲೀಟರ್ ಗೆ 88.60 ರೂ. ಹಾಗೂ ದಿಲ್ಲಿಯಲ್ಲಿ ಲೀಟರ್ ಗೆ 81.47 ರೂ. ತಲುಪಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗರಿಷ್ಠ ತೆರಿಗೆಗಳು ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗಿದೆ. 

ಜಾಗತಿಕ ಮಟ್ಟದಲ್ಲಿ ಸತತ 6ನೇ ದಿನ ಕಚ್ಚಾ ತೈಲ ಬೆಲೆಯು ಕಡಿಮೆಯಾಗುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗರಿಷ್ಟ ಮಟ್ಟದಲ್ಲಿವೆ. ಅಮೆರಿಕದ ಕಚ್ಚಾ ತೈಲ 60 ಡಾಲರ್ ಗಿಂತ ಕಡಿಮೆಯಾಗಿದೆ. ಇಂದು ಬೆಳಗ್ಗೆ ಪ್ರತಿ ಬ್ಯಾರಲ್ ಗೆ 59.97ಕ್ಕೆ ವಹಿವಾಟು ನಡೆಸುತ್ತಿದೆ. ಬ್ರೆಂಟ್ ಕಚ್ಚಾ ಶೇ.1ರಷ್ಟು ಇಳಿಕೆಯಾಗಿ 63.27 ಡಾಲರ್ ಗೆ ಇಳಿದಿದೆ. 

ಯುರೋಪ್ ನಾದ್ಯಂತ ಕೋವಿಡ್-19 ಸೋಂಕುಗಳ ಹೊಸ ಅಲೆಯಿಂದಾಗಿ ಕಚ್ಚಾ ತೈಲ ಬೆಲೆ ಕುಸಿತವಾಗಿದೆ. ಕೊರೋನದ ಹೊಸ ಅಲೆಯು ಲಾಕ್ ಡೌನ್ ಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News