ಪ್ರಯಾಗ್‌ ರಾಜ್:‌ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ಧ್ವನಿವರ್ಧಕಗಳಿಗೆ ನಿಷೇಧ ಹೇರಿದ ಐಜಿಪಿ

Update: 2021-03-19 09:26 GMT

ಪ್ರಯಾಗ್‌ ರಾಜ್: ತಮ್ಮ ನಿವಾಸ ಸಮೀಪದ ಮಸೀದಿಯಲ್ಲಿ ಬಳಸಲಾಗುವ ಧ್ವನಿವರ್ಧಕದಿಂದ ಸಮಸ್ಯೆಯಾಗುತ್ತಿದೆ ಎಂದು ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಸಂಗೀತಾ ಶ್ರೀವಾತ್ಸವ ಅವರ ದೂರಿಗೆ ಸ್ಪಂದಿಸಿರುವ ಪ್ರಯಾಗ್‌ ರಾಜ್ ಐಜಿಪಿ,  ತಮ್ಮ ವ್ಯಾಪ್ತಿಯ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳಿಗೆ ಸೂಚನೆ ನೀಡಿ  ರಾತ್ರಿ 10ರಿಂದ ಮುಂಜಾನೆ 6 ಗಂಟೆ ತನಕ  ಧ್ವನಿವರ್ಧಕಗಳ ಬಳಕೆಯನ್ನು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಬೇಕೆಂದು ಹೇಳಿದ್ದಾರೆ.

ಐಜಿಪಿ ಕೆ ಪಿ ಸಿಂಗ್ ಅವರು ‌ಪ್ರಯಾಗ್‌ ರಾಜ್ ವ್ಯಾಪ್ತಿಯ ಎಲ್ಲಾ ನಾಲ್ಕು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳು ಹಾಗೂ  ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತಮ್ಮ ಆದೇಶ ಎಲ್ಲಾ ಸ್ಥಳಗಳಿಗೆ ಅನ್ವಯವಾಗುತ್ತದೆ ಹಾಗೂ ಧ್ವನಿವರ್ಧಕಗಳು ಹಾಗೂ ಮೈಕ್‍ಗಳಿಗೆ ಅನ್ವಯವಾಗುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರಲ್ಲದೆ  ಈ ಕುರಿತಂತೆ ಈ ಹಿಂದೆ ನ್ಯಾಯಾಲಯಗಳು ನೀಡಿರುವ ಆದೇಶಾನುಸಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ತಮ್ಮ ಆದೇಶ ಕುರಿತಂತೆ ಪ್ರತಿಕ್ರಿಯಿಸಿರುವ ಕೆ ಪಿ ಸಿಂಗ್, ರಾತ್ರಿ 10ರಿಂದ  ಬೆಳಿಗ್ಗೆ 6ರ ತನಕ ಧ್ವನಿವರ್ಧಕಗಳ ಬಳಕೆಗೆ ನಿಷೇಧವಿದ್ದರೂ ವಿವಾಹ ಮುಂತಾದ ಸಮಾರಂಭಗಳ ಸಂದರ್ಭ 12 ಗಂಟೆ ತನಕ ಧ್ವನಿವರ್ಧಕಗಳ ಬಳಕೆಗೆ ಅನುಮತಿ  ಕೋರಬಹುದಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News