ಎಸ್‍ಡಿಪಿಐ ಸೇರಿದ ದಲಿತ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್

Update: 2021-03-19 16:37 GMT

ಬೆಂಗಳೂರು, ಮಾ.19: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಪಕ್ಷದ ಬೆಂಗಳೂರು ಜಿಲ್ಲಾ ಸಮಿತಿಯಿಂದ ‘ಸ್ವಾಭಿಮಾನದ ರಾಜಕೀಯಕ್ಕಾಗಿ’ ಎಂಬ ಘೋಷಣೆಯೊಂದಿಗೆ ರಾಜಕೀಯ ಸಮಾವೇಶವನ್ನು ಬೆಂಗಳೂರಿನ ಕೆ.ಜಿ.ಹಳ್ಳಿಯ ಎಸ್.ಆರ್.ಫಂಕ್ಷನ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ಬಿ.ಆರ್.ಭಾಸ್ಕರ್ ಪ್ರಸಾದ್, ದಲಿತ ಮತ್ತು ಅಹಿಂದ ನಾಯಕರು ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿ, ಎಸ್ಡಿಪಿಐ ಪಕ್ಷವು ಗ್ರಾಮಮಟ್ಟ, ಹೋಬಳಿ ಮಟ್ಟದ, ತಾಲೂಕು ಮಟ್ಟದ ಸಕ್ರಿಯ ರಾಜಕಾರಣದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ಈ ಮೂಲಕ ತಳಮಟ್ಟದಲ್ಲಿ ಜನಪರ ಹೋರಾಟಗಾರರಿಗೆ ಪ್ರಾಮಾಣಿಕವಾದ ಸದೃಢ ರಾಜಕೀಯ ವೇದಿಕೆಯನ್ನು ಒದಗಿಸುತ್ತಿದೆ ಎಂದರು.

ಇದೇ ರೀತಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕೀಯದಲ್ಲಿಯೂ ಶೋಷಿತರ ಪ್ರಬಲ ಧ್ವನಿಯಾಗಿ ಹೊಮ್ಮುವ ದಿನ ದೂರವಿಲ್ಲ. ಹಾಗಾಗಿ ಭಾಸ್ಕರ್ ಪ್ರಸಾದ್ ಹಾಗೂ ಇತರೆ ಅಹಿಂದ ವರ್ಗಗಳ ನಾಯಕರು ಪಕ್ಷವನ್ನು ತಮ್ಮ ಹೋರಾಟದ ಪಥವನ್ನಾಗಿಸಿಕೊಂಡಂತೆ ರಾಜ್ಯದ ಪ್ರಾಮಾಣಿಕ ಯುವ ಮುಖಂಡರು ಈ ಆದರ್ಶ ನಡೆಯನ್ನು ಅನುಸರಿಸಬೇಕೆಂದು ಅವರು ಕರೆ ನೀಡಿದರು.

ಬಿ.ಆರ್.ಭಾಸ್ಕರ್ ಪ್ರಸಾದ್ ಮಾತನಾಡಿ, ಕೊರೋನ ಸಂತ್ರಸ್ತರಿಗೆ ನೆರವು ಮತ್ತು ಶವ ಸಂಸ್ಕಾರ, ಸೇವೆ ಸಲ್ಲಿಸಿದ ಎಸ್ಡಿಪಿಐ ಕಾರ್ಯಕರ್ತರ ನಿಸ್ವಾರ್ಥ ಸೇವಾ ಮನೋಭಾವ ಮತ್ತು ಹೋರಾಟದ ಮಾರ್ಗವನ್ನು ಪ್ರಶಂಸಿಸಿದರು. ಇದೇ ಕಾರ್ಯಕರ್ತರೊಂದಿಗೆ ಸೇರಿ ಪಕ್ಷ ಕಟ್ಟಲು ನಾನು ರಾತ್ರಿ ಹಗಲು ತಯಾರಾಗಿದ್ದೇನೆ ಎಂದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಗಂಗಪ್ಪನವರು ಮಾಡಿದರು. ಉದ್ಘಾಟನಾ ಭಾಷಣವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷ ಮಾಡಿದರು. ವುಮೆನ್ ಇಂಡಿಯಾ ಮೂವ್‍ಮೆಂಟ್‍ನ ರಾಜ್ಯ ನಾಯಕಿ ಸಾದಿಯಾ ಗುಲ್ಬರ್ಗಾ, ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಸೇರಿದಂತೆ ಇನ್ನಿತರರು ಮಾತನಾಡಿದರು.

ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್, ನಿವೃತ್ತ ಕೆ.ಎ.ಎಸ್ ಅಧಿಕಾರಿ ಕೆ.ಎಲ್.ವಸಂತ್ ಕುಮಾರ್, ರಾಜ್ಯ ಆದಿ ಜಾಂಬವ ಅಭಿವೃಧಿ ಸಂಘದ ಕಾರ್ಯದರ್ಶಿ ರಮೇಶ್ ಕುಮಾರ್, ರಾಜ್ಯ ದಲಿತ ಹೋರಾಟ ಸಮಿತಿಯ ಕಮಲಾನಗರದ ಉಪಾಧ್ಯಕ್ಷ ಗೋವಿಂದ ರಾಜು ವಿ., ಸಮಾಜ ಸೇವಕ ಜಯರಾಂ ಸಿ, ಸಾಮಾಜಿಕ ಹೋರಾಟಗಾರ ಸಿದ್ಧರಾಜು, ಕರ್ನಾಟಕ ರಕ್ಷಣಾ ವೇದಿಕೆ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಮುಹಮ್ಮದ್ ಹನೀಫ್, ಸಮಾಜ ಸೇವಕ ಅಮಾನುಲ್ಲಾ ಮತ್ತಿತರು ಈ ಸಂದರ್ಭದಲ್ಲಿ ಎಸ್‍ಡಿಪಿಐ ಸೇರ್ಪಡೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News