ದುಬಾರಿಯಾಗಲಿದೆ ದೇಶಿಯ ವಿಮಾನ ಪ್ರಯಾಣ: ಕನಿಷ್ಠ ದರವನ್ನು ಶೇ.5ರಷ್ಟು ಹೆಚ್ಚಿಸಿದ ಸರಕಾರ

Update: 2021-03-20 05:45 GMT

ಹೊಸದಿಲ್ಲಿ,ಮಾ.19: ದೇಶಿಯ ವಿಮಾನಯಾನ ಪ್ರಯಾಣದರ ಮಿತಿಗಳನ್ನು ಶುಕ್ರವಾರ ಎಪ್ರಿಲ್ ಅಂತ್ಯದವರೆಗೆ ವಿಸ್ತರಿಸಿರುವ ಸರಕಾರವು ಕನಿಷ್ಠ ಪ್ರಯಾಣದರಗಳನ್ನು ಶೇ.5ರಷ್ಟು ಹೆಚ್ಚಿಸಿದೆ. ಇದು ಕಳೆದ ಫೆ.11ರ ಬಳಿಕ ಎರಡನೇ ದರ ಏರಿಕೆಯಾಗಿದೆ.

ದೇಶೀಯ ಯಾನಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಏಪ್ರಿಲ್ ಅಂತ್ಯದವರೆಗೆ ಕೋವಿಡ್ ಮೊದಲಿನ ಸಂಖ್ಯೆಯ ಶೇ.80ಕ್ಕೆ ಸೀಮಿತಗೊಳಿಸುವಂತೆಯೂ ಸರಕಾರವು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.

ಬಹುಶಃ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ಮತ್ತು ವಿವಿಧ ರಾಜ್ಯಗಳು ನೆಗೆಟಿವ್ ಪರೀಕ್ಷಾ ವರದಿಗಳನ್ನು ಕೇಳುತ್ತಿರುವುದರಿಂದ ಮಾರ್ಚ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಹೀಗಾಗಿ ಶೇ.80 ಆಸನ ಸಾಮರ್ಥ್ಯ ಮತ್ತು ಪ್ರಯಾಣ ದರ ಮಿತಿಗಳನ್ನು ಎಪ್ರಿಲ್ ಅಂತ್ಯದವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಆದರೆ ಇಂಧನ ದರಗಳ ಏರಿಕೆಯ ಹಿನ್ನೆಲೆಯಲ್ಲಿ ಕನಿಷ್ಠ ಪ್ರಯಾಣ ದರ ಮಿತಿಯನ್ನು ಶೇ.5ರಷ್ಟು ಹೆಚ್ಚಿಸಲಾಗಿದೆ. ಈ ಸಲ ಗರಿಷ್ಠ ಪ್ರಯಾಣ ದರ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ ಎಂದು ನಾಗರಿಕ ವಾಯುಯಾನ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಸಚಿವಾಲಯವು ಪರಿಸ್ಥಿತಿಯನ್ನು ನಿರಂತರವಾಗಿ ಪುನರ್‌ಪರಿಶೀಲಿಸುತ್ತಿದೆ ಮತ್ತು ಬೆಳವಣಿಗೆಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದೂ ಅವರು ಹೇಳಿದರು.

ಈ ಬಗ್ಗೆ ಟ್ವೀಟಿಸಿರುವ ನಾಗರಿಕ ವಾಯುಯಾನ ಸಚಿವ ಹರ್ದೀಪ ಸಿಂಗ್ ಪುರಿ ಅವರು,ದೈನಂದಿನ ಪ್ರಯಾಣಿಕರ ಸಂಖ್ಯೆ ತಿಂಗಳಲ್ಲಿ ಮೂರು ಸಲ 3.5 ಲಕ್ಷವನ್ನು ಮೀರಿದರೆ ದೇಶಿಯ ಮಾರ್ಗಗಳಲ್ಲಿ ಶೇ.100ರಷ್ಟು ಕಾರ್ಯಾಚರಣೆಗೆ ಅನುಮತಿ ನೀಡಬಹುದು ಎಂದು ತಿಳಿಸಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರದಿದ್ದರೆ ಬೇಸಿಗೆಯಿಂದ ಪ್ರಯಾಣ ದರ ಮಿತಿಗಳನ್ನು ಮತ್ತು ಸಾಮರ್ಥ್ಯ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಲು ಸರಕಾರವು ಯೋಜಿಸಿತ್ತು.

ಫೆ.11ರಂದು ಸರಕಾರವು ದೇಶಿಯ ಪ್ರಯಾಣ ದರಗಳ ಮಿತಿಗಳನ್ನು ಹೆಚ್ಚಿಸಿತ್ತು. ಅಲ್ಲಿಂದೀಚಿಗೆ ಕನಿಷ್ಠ ಪ್ರಯಾಣ ದರಗಳು ಶೇ.10ರಷ್ಟು ಮತ್ತು ಗರಿಷ್ಠ ಪ್ರಯಾಣ ದರಗಳು ಶೆ.30ರಷ್ಟು ಹೆಚ್ಚಳವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News